ಕಡೂರು; ಸಖರಾಯಪಟ್ಟಣ ಪೊಲೀಸರ ವಿರುದ್ಧ ಜನರ ಪ್ರತಿಭಟನೆ
ಚಿಕ್ಕಮಗಳೂರು, ಡಿಸೆಂಬರ್ 25 : ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣೆ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿದೆ. ಠಾಣೆಯ ಪಿಎಸ್‌ಐ ಸ್ಥಳೀಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ನೂರಾರು ಜನರು ಪ್ರತಿಭಟಿಸಿದರು.
ಶುಕ್ರವಾರ ಸಖರಾಯಪಟ್ಟಣ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ನೂರಾರು ಜನರು ದಿನೇಶ್ ಎಂಬುವರ ಮೇಲೆ ಪಿಎಸ್ಐ ಹರೀಶ್ ನಾಯ್ಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ದಿನೇಶ್ ಎಂಬುವರ ಮೇಲೆ ಪಿಎಸ್‌ಐ ಹಲ್ಲೆ ಮಾಡಿದ್ದಾರೆ. ಹಲ್ಲೆಯನ್ನು ಖಂಡಿಸಿದ ಜನರು ಸಖರಾಯಪಟ್ಟಣ ಗ್ರಾಮ ಬಂದ್ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಪಿಎಸ್ಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ನೇತೃತ್ವದಲ್ಲಿ ಜನರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ನೂರಾರು ಜನರು ಪೊಲೀಸ್ ಠಾಣೆ ಮುಂದೆ ಕುಳಿತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಜನರ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಹೆಚ್ಚಿನ ಪೊಲೀಸರನ್ನು ಠಾಣೆಗೆ ಕರೆಸಿಕೊಳ್ಳಲಾಗಿದ್ದು, ಭದ್ರತೆ ಹೆಚ್ಚಿಸಲಾಗಿದೆ. ಪ್ರತಿಭಟನೆ ಮಾಡುತ್ತಿರುವ ಜನರ ಮನವೊಲಿಕೆ ಕಾರ್ಯವೂ ನಡೆಯುತ್ತಿದೆ.












Click it and Unblock the Notifications