ಚಿಕ್ಕಮಗಳೂರು: ಗರ್ಭಿಣಿ ಮೇಲೆ ಹಲ್ಲೆ ಮಾಡಿದ ಕಾಫಿ ತೋಟದ ಮಾಲೀಕ ಜಗದೀಶ್
ಚಿಕ್ಕಮಗಳೂರು; ಅಕ್ಟೋಬರ್, 11: 9 ಲಕ್ಷ ಮುಂಗಡ ಹಣವನ್ನು ವಾಪಸ್ಸು ಕೊಡದ ಹಿನ್ನೆಲೆ ತೋಟದ ಮಾಲೀಕನೊಬ್ಬ 6 ಕಾರ್ಮಿಕ ಕುಟುಂಬಗಳ 14 ಜನರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾನೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು ಬಾಳೆಹೊನ್ನೂರು ಸಮೀಪದ ಜೇನುಗದ್ದೆಯ ಪುರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಇದನ್ನು ವಿಡಿಯೋ ಮಾಡಿದ್ದ ಗರ್ಭಿಣಿ ಮೇಲೂ ಹಲ್ಲೆ ನಡೆಸಿದ್ದರ ಪರಿಣಾಮ ಅರ್ಪಿತಾಗೆ ಗರ್ಭಪಾತ ಆಗಿದೆ ಎನ್ನುವ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.
ಗರ್ಭಿಣಿ ಮೇಲೆ ದೌರ್ಜನ್ಯ
ದೌರ್ಜನ್ಯದ ವಿಡಿಯೋ ಮಾಡಿದ್ದಕ್ಕೆ ಗರ್ಭಿಣಿ ಅರ್ಪಿತಾ ಮೇಲೂ ತೋಟದ ಮಾಲೀಕ ಜಗದೀಶ್ ಗೌಡ ಎಂಬುವವರು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಗರ್ಭಿಣಿ ಅರ್ಪಿತಾಳನ್ನು ತಕ್ಷಣ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಾಫಿ ತೋಟದ ಕೆಲಸಕ್ಕೆ ಸೇರುವಾಗ ಕಾರ್ಮಿಕರಿಗೆ ಮಾಲೀಕ 9 ಲಕ್ಷ ಹಣವನ್ನು ಮುಂಗಡವಾಗಿ ನಿಡಿದ್ದ. ಇದೀಗ ಕಾರ್ಮಿಕರು ಬೇರೆಡೆ ಕೆಲಸಕ್ಕೆ ಹೋಗುತ್ತೇವೆ ಎಂದಿದ್ದಾರೆ. ಆಗ ಮುಂಗಡವಾಗಿ ನೀಡಿದ್ದ ಹಣವನ್ನು ವಾಪಸ್ ಕೊಡುವಂತೆ ಮಾಲೀಕ ಕೇಳಿದ್ದಾನೆ. ಕಾರ್ಮಿಕರು ನಮಗೆ ಸಮಯ ನೀಡಿ ಹಣ ಕಟ್ಟಿ ಹೋಗುತ್ತವೆ ಎಂದಿದ್ದಾರೆ. ಆಗ ಸಿಟ್ಟಿಗೆದ್ದ ಕಾಫಿ ತೋಟದ ಮಾಲೀಕ ಜಗದೀಶ್ ಕಾರ್ಮಿಕರನ್ನು ಕೊಠಡಿ ಒಳಗೆ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಹಣ ವಾಪಸ್ ಕೊಡಲೇಬೇಕು ಎಂದು ಹಠಕ್ಕೆ ಬಿದ್ದು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಾಲೀಕನ ವಿರುದ್ಧ ಕಾರ್ಮಿಕರು ಆರೋಪ ಮಾಡಿದ್ದಾರೆ. ಮಾಲೀಕ ಹಲ್ಲೆ ಮಾಡಿರುವ ಬಗ್ಗೆ ದೂರು ನೀಡಿದರೂ ಕೂಡ ಪೊಲೀಸ್ ಠಾಣೆಯಲ್ಲಿ ಯಾವುದೇ ನ್ಯಾಯ ಸಿಗುತ್ತಿಲ್ಲ ಎಂದು 6 ಕಾರ್ಮಿಕ ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ. ಇನ್ನು ಹಲ್ಲೆಗೊಳಗಾದ ಗರ್ಭಿಣಿ ಅರ್ಪಿತಾಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹಲ್ಲೆಯಿಂದ ಅರ್ಪಿತಾಗೆ ಗರ್ಭಪಾತ ಆಗಿದೆ ಎಂದು ತಿಳಿದುಬಂದಿದೆ.












Click it and Unblock the Notifications