ಶೃಂಗೇರಿಯಲ್ಲಿ ಪೌರ ಕಾರ್ಮಿಕರ ಮುಷ್ಕರ, ಪಟ್ಟಣದಲ್ಲಿ ಕಸದ ರಾಶಿ
ಚಿಕ್ಕಮಗಳೂರು, ಡಿಸೆಂಬರ್ 11; ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಪೌರ ಕಾರ್ಮಿಕರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಕೆಲಸ ನಿಲ್ಲಿಸಿ 6 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕಾರಣ ಶೃಂಗೇರಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಂಡುಬರುತ್ತಿದೆ.
ಶೃಂಗೇರಿ ಪಟ್ಟಣ ಪಂಚಾಯಿತಿ ವಿರುದ್ಧ ತಿರುಗಿ ಬಿದ್ದ ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಶ್ರೀ ಶಾರದಾಂಬೆ ದೇವಾಲಯದ ಸುತ್ತಮುತ್ತ ಸೇರಿದಂತೆ ಪಟ್ಟಣದಾದ್ಯಂತ ಕಸದ ರಾಶಿಯೇ ಕಾಣುತ್ತಿದೆ.

ಪೌರ ಕಾರ್ಮಿಕರ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದೆ. ಪೌರ ಕಾರ್ಮಿಕರು ಕೆಲಸ ಖಾಯಂಗೊಳಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ಇದಾಗಿದೆ. ಆದರೆ ಶೃಂಗೇರಿ ಪಟ್ಟಣ ಪಂಚಾಯಿತಿ ಕಾರ್ಮಿಕರ ಬೇಡಿಕೆ ಈಡೇರಿಕೆ ಕುರಿತು ಯಾವುದೇ ಭರವಸೆಯನ್ನು ನೀಡಿಲ್ಲ.
ಸ್ಪಂದಿಸದ ಆಡಳಿತ; 6 ದಿನಗಳಿಂದ ಶೃಂಗೇರಿ ಪಟ್ಟಣದಲ್ಲಿ ಕಸ ಸಂಗ್ರಹವನ್ನು ಪೌರ ಕಾರ್ಮಿಕರು ಸ್ಥಗಿತಗೊಳಿಸಿದ್ದಾರೆ. ಪೌರ ಕಾರ್ಮಿಕರ ಮುಷ್ಕರದಿಂದಾಗಿ ಬಸ್ ನಿಲ್ದಾಣ ಸೇರಿದಂತೆ ಪಟ್ಟಣ ರಸ್ತೆಯ ತುಂಬೆಲ್ಲ ಕಸದ ರಾಶಿಯೇ ಸೇರಿದೆ. ಇದರಿಂದಾಗಿ ಶೃಂಗೇರಿಯ ದೇವಾಲಯಕ್ಕೆ ಬರುವ ಭಕ್ತರು ಸಹ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ಪಟ್ಟಣದ ದೇವಾಲಯಕ್ಕೆ ಆಗಮಿಸುತ್ತಿರುವ ಸಾವಿರಾರು ಪ್ರವಾಸಿಗರು, ಭಕ್ತರು ಕಸದ ರಾಶಿಯನ್ನು ಕಂಡು ರಸ್ತೆಯಲ್ಲಿ ಓಡಾಟ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಪೌರ ಕಾರ್ಮಿಕರು ಮುಷ್ಕರ ನಡೆಸಿದರೂ ಸ್ಪಂದಿಸದ ಪಟ್ಟಣ ಪಂಚಾಯಿತಿ, ಚಿಕ್ಕಮಗಳೂರು ಜಿಲ್ಲಾಡಳಿತದ ವಿರುದ್ಧ ನೌಕರರು ಅಸಮಾಧಾನ ಹೊರಹಾಕಿದ್ದಾರೆ.
2022ರಲ್ಲಿಯೂ ಪೌರ ಕಾರ್ಮಿಕರು ಅನಿರ್ಧಿಷ್ಟಾವಧಿ ಮುಷ್ಕರವನ್ನು ನಡೆಸಿದ್ದರು. ಕಳೆದ 20 ವರ್ಷಗಳಿಂದ ಪೌರ ಕಾರ್ಮಿಕರು, ಚಾಲಕರು, ನೀರು ಸರಬರಾಜು ಹಾಗೂ ಡಾಟಾ ಎಂಟ್ರಿ ಆಪರೇಟರ್‌ಗಳು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಇವರಿಗೆ ಉದ್ಯೋಗ ಭದ್ರತೆ ನೀಡಬೇಕು. ಗುತ್ತಿಗೆ ಆಧಾರದ ಮೇಲೆ ನೀತಿಯನ್ನು ರದ್ದುಗೊಳಿಸಿ ಅವರನ್ನು ಖಾಯಂಗೊಳಿಸಬೇಕು ಎಂದು ನೌಕರರು ಒತ್ತಾಯಿಸಿದ್ದರು. ಆಗ ಶಾಸಕರು ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ನಡೆಸಿ, ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದರು.












Click it and Unblock the Notifications