ವಕೀಲ ಪ್ರೀತಂ ಮೇಲೆ ಪೊಲೀಸರ ಹಲ್ಲೆ, ಅರ್ಜಿ ಇತ್ಯರ್ಥಗೊಳಿಸಿದ ಹೈಕೋರ್ಟ್
ಚಿಕ್ಕಮಗಳೂರು, ಡಿಸೆಂಬರ್ 14; ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದ ವಕೀಲನ ಮೇಲೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರ ಹಲ್ಲೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣವನ್ನು ಇತ್ಯರ್ಥಪಡಿಸಿದೆ.
ಚಿಕ್ಕಮಗಳೂರಿನಲ್ಲಿ ವಕೀಲ ಎನ್. ಟಿ. ಪ್ರೀತಮ್ ಮೇಲೆ ಪೊಲೀಸರು ಹಲ್ಲೆ ನಡೆಸಿದ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರ ಸಿಐಡಿಗೆ ವಹಿಸಿದೆ, ತನಿಖೆ ಚುರುಕುಗೊಂಡಿದೆ. ಈ ಹಿನ್ನಲೆಯಲ್ಲಿ ಸರ್ಕಾರದ ಕ್ರಮ ತಪ್ತಿಕರವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಅರ್ಜಿ ಇತ್ಯರ್ಥಗೊಳಿಸಿ ಬುಧವಾರ ಆದೇಶಿಸಿದೆ.

ಸ್ವಯಂ ಪ್ರೇರಿತ ಪ್ರಕರಣ ಕುರಿತು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅಡ್ವಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಹಾಜರಿದ್ದರು.
ಈ ಹಿಂದಿನ ವಿಚಾರಣೆ ವೇಳೆ ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ರಾಜ್ಯ ವಕೀಲರ ಪರಿಷತ್, ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ವಕೀಲರ ಸಂಘದ ಪ್ರತಿನಿಧಿಗಳ ಜೊತೆ ಡಿಸೆಂಬರ್ 9ರಂದು ನಡೆಸಿದ್ದ ಸಭೆಯ ವಿವರವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ರಾಜ್ಯ ಸರ್ಕಾರವು ಪ್ರಕರಣದ ಕುರಿತಂತೆ ಸೂಕ್ತ ಕ್ರಮ ಕೈಗೊಂಡಿದೆ. ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ನ್ಯಾಯಪೀಠ, "ತನಿಖೆಯ ಮೇಲ್ವಿಚಾರಣೆ ನ್ಯಾಯಾಲಯದ ಕರ್ತವ್ಯವಲ್ಲ ಮತ್ತು ನಿಗದಿತ ಕಾಲಮಿತಿಯಲ್ಲಿ ತನಿಖೆ ಪೂರ್ಣಗೊಳಿಸುವಂತೆ ನಿರ್ದೇಶಿಸಲು ಸಾಧ್ಯವಿಲ್ಲ. ಹೀಗಾಗಿ, ಅರ್ಜಿಯನ್ನು ಇನ್ನೂ ವಿಚಾರಣೆಗೆ ಉಳಿಸಿಕೊಳ್ಳುವ ಅಗತ್ಯವಿಲ್ಲ" ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಿಲೇವಾರಿ ಮಾಡಿತು.
ಪೊಲೀಸರು, ವಕೀಲರ ಜಟಾಪಟಿ; ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2023ರ ನವೆಂಬರ್ 30ರಂದು ನಡೆದ ಘಟನೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಮತ್ತು ವಕೀಲರ ನಡುವಿನ ಜಟಾಪಟಿಗೆ ಕಾರಣವಾಗಿತ್ತು. ಎರಡೂ ಕಡೆಯಿಂದ ಪ್ರತಿಭಟನೆಗಳು ನಡೆದಿದ್ದವು.
ವಕೀಲ ಎನ್. ಟಿ. ಪ್ರೀತಮ್ ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕಿಲ್ಲ ಎಂಬುದು ಘಟನೆಗೆ ಪ್ರಮುಖ ಕಾರಣವಾಗಿತ್ತು. ಅವರು ದಂದ ಪಾವತಿ ಮಾಡುತ್ತೇನೆ ಎಂದು ಹೇಳಿದರೂ ಸಹ ಪೊಲೀಸರು ಬೈಕ್ ಕೀ ಕಿತ್ತುಕೊಂಡಿದ್ದರು. ಬಳಿಕ ಮಾತಿನ ಚಕಮಕಿ ನಡೆದಿತ್ತು.
ಪೊಲೀಸರು ಪ್ರೀತಮ್ ಅವರನ್ನು ಚಿಕ್ಕಮಗಳೂರು ನಗರ ಠಾಣೆಗೆ ಕರೆದೊಯ್ದು ಹಾಕಿ ಹಾಗೂ ಕ್ರಿಕೆಟ್ ಬ್ಯಾಟಿನಿಂದ ಹಲ್ಲೆ ನಡೆಸಿದ್ದಾರೆ ಎಂಬುದು ಆರೋಪ. ವಕೀಲ ಪ್ರೀತಮ್ ತೀವ್ರವಾಗಿ ಗಾಯಗೊಂಡಿದ್ದರೂ ಅವರನ್ನು ಆಸ್ಪತ್ರೆಗೆ ದಾಖಲಿಸಲಿಲ್ಲ ಎಂದು ಆರೋಪ ಮಾಡಲಾಗಿದೆ.
ಈ ಮಾಹಿತಿ ತಿಳಿದ ಕೆಲವು ವಕೀಲರು ಠಾಣೆಗೆ ತೆರಳಿ ಪ್ರತಿಭಟನೆ ನಡೆಸಿದ್ದರು. ಪೊಲೀಸರ ವರ್ತನೆಯನ್ನು ಖಂಡಿಸಿದ್ದರು. ಗಾಯಗೊಂಡ ಪ್ರೀತಮ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು. ಹಲ್ಲೆ ಮಾಡಿದ ಪೊಲೀಸರನ್ನು ಬಂಧಿಸಬೇಕು ಎಂದು ವಕೀಲರು ಬೃಹತ್ ಪ್ರತಿಭಟನೆ ಮಾಡಿದ್ದರು.
ಪೊಲೀಸರ ಕಾರ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಪೊಲೀಸರು ಚಿಕ್ಕಮಗಳೂರಿನ ವಕೀಲರಾದ ಡಿ. ಬಿ. ಸುಜೇಂದ್ರ, ಎ. ಕೆ. ಭುವನೇಶ್, ಕೆ. ಬಿ. ನಂದೀಶ್ ಮತ್ತು ಎಚ್. ಎಂ. ಸುಧಾಕರ್ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ತಮ್ಮ ವಿರುದ್ಧದ ಎಫ್ಐಆರ್ ರದ್ದುಪಡಿಸುವಂತೆ ಕೋರಿ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಪೀಠ ಎಫ್ಐಆರ್‌ಗೆ ತಡೆ ನೀಡಿತ್ತು. ಚಿಕ್ಕಮಗಳೂರು ನ್ಯಾಯಾಲಯದಲ್ಲಿ ವಕೀಲ ಪ್ರೀತಮ್‌ಗೆ ಜಾಮೀನು ಮಂಜೂರು ಮಾಡಲಾಗಿತ್ತು. ಚಿಕ್ಕಮಗಳೂರು ವಿವಿಧ ಪೊಲೀಸ್ ಠಾಣೆಗಳ ಸಿಬ್ಬಂದಿ ಹಲ್ಲೆ ಮಾಡಿದ ಪೊಲೀಸರನ್ನು ಬಂಧಿಸಬಾರದು ಎಂದು ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರು.
ವಕೀಲರು ಮತ್ತು ಪೊಲೀಸರ ನಡುವಿನ ಜಟಾಪಟಿ ಜೋರಾದ ಬಳಿಕ ಕರ್ನಾಟಕ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಡಿಐಜಿಪಿ ವಂಶಿಕೃಷ್ಣ ತನಿಖೆಯ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ.
ಸಿಐಡಿ ಪೊಲೀಸರು ಸಿಐಡಿ ಎಸ್ಪಿ ವೆಂಕಟೇಶ್, ಡಿವೈಎಸ್ಪಿ ಉಮೇಶ್ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿ ಹಲ್ಲೆಗೊಳಗಾದ ವಕೀಲ ಪ್ರೀತಮ್ ವಿಚಾರಣೆ ನಡೆಸಿದ್ದರು. ಬಳಿಕ ಪೊಲೀಸರ ವಿಚಾರಣೆಯನ್ನು ಮಾಡಿದ್ದರು.












Click it and Unblock the Notifications