ಮೋಸ್ಟ್ ವಾಂಟೆಂಡ್ ನಕ್ಸಲ್ ಅಂಗಡಿ ಸುರೇಶ್ ಬಂಧನ: 21 ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕಿದ್ದೇ ರೋಚಕ..!
ಚಿಕ್ಕಮಗಳೂರು, ಫೆಬ್ರವರಿ 17: 2003ರಿಂದ ಭೂಗತನಾಗಿ ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಮೋಸ್ಟ್ ವಾಂಟೆಂಡ್ ನಕ್ಸಲ್ ಅಂಗಡಿ ಸುರೇಶ್ ಕಾಡಾನೆಯಿಂದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎನ್ನುವ ಮಾಹಿತಿ ಹೊರಬಿದ್ದಿದೆ. ಅಂಗಡಿ ಸುರೇಶ್ ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನು ಎನ್ನಲಾಗಿದೆ.
2003ರಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಸುರೇಶ್ 21 ವರ್ಷಗಳಿಂದ ನಾಪತ್ತೆಯಾಗಿದ್ದ. ಕರ್ನಾಟಕ-ಕೇರಳ- ತಮಿಳುನಾಡು ಪೊಲೀಸರು ಈ ಮೋಸ್ಟ್ ವಾಂಟೆಡ್ ನಕ್ಸಲ್‌ಗಾಗಿ ಹುಡುಕಾಡುತ್ತಿದ್ದರು. ಆದರೆ, 21 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿದ್ದ ಅಂಗಡಿ ಸುರೇಶ್ ಕಾಡಾನೆಯಿಂದ ಕೇರಳ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ.

ಮೋಸ್ಟ್ ವಾಂಟೆಡ್ ನಕ್ಸಲ್ ಸುರೇಶ್ ಮೂಲ ಹೆಸರು ಪ್ರದೀಪ್. ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡ ಬಳಿಕ ಹೆಸರು ಬದಲಿಸಿಕೊಂಡು ಸುರೇಶ್ ಎಂದು ಬದಲಿಸಿಕೊಂಡಿದ್ದನು ಎಂದು ತಿಳಿದುಬಂದಿದೆ. ಸುರೇಶ್ ಅಲಿಯಾಸ್ ಪ್ರದೀಪ್ ಕರ್ನಾಟಕ ಕೇಡರ್ ನಕ್ಸಲ್ ಆಗಿ ಗುರುತಿಸಿಕೊಂಡಿದ್ದನು ಎಂದು ತಿಳಿದು ಬಂದಿದೆ. ಈತನ ಮೇಲೆ ಕರ್ನಾಟಕದಲ್ಲಿ ಒಟ್ಟು 26ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ನಿನ್ನೆ ನಕ್ಸಲ್ ತಂಡದೊಂದಿಗೆ ಕೇರಳದ ಕಣ್ಣೂರಿನ ಕಂಚಿಕೊಲ್ಲಿ ಅರಣ್ಯ ಪ್ರದೇಶದಲ್ಲಿ ಹೋಗುತ್ತಿರುವಾಗ ನಕ್ಸಲರ ಮೇಲೆ ಕಾಡಾನೆಗಳು ದಾಳಿ ಮಾಡಿವೆ. ಆನೆ ದಾಳಿಯಿಂದ ಗಂಭೀರ ಗಾಯಗೊಂಡ ಸುರೇಶನನ್ನು ಉಳಿದ ನಕ್ಸಲರು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಆನೆ ದಾಳಿಯಿಂದ ಗಂಭೀರ ಗಾಯಗೊಂಡ ಸುರೇಶ್ ನಡೆಯಲಾಗದೆ ಕಾಡಿನಲ್ಲೇ ಇದ್ದನು. ಆತನನ್ನ ಸ್ಥಳೀಯ ಆದಿವಾಸಿಗಳು ರಕ್ಷಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ತಿಳಿದು ಬಂದಿದೆ. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ್‌ನನ್ನು ಕೇರಳ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಪೋಲಿಸರು ಸರ್ಪಗಾವಲು ಹಾಕಿದ್ದಾರೆ.
ನಕ್ಸಲ್ ಶ್ರೀಮತಿಗೆ 14 ದಿನಗಳ ನ್ಯಾಯಾಂಗ ಬಂಧನ: ಎನ್.ಆರ್.ಪುರ ನ್ಯಾಯಾಲಯ
ಚಿಕ್ಕಮಗಳೂರು: ಹಲವು ವರ್ಷಗಳಿಂದ ಭೂಗತಳಾಗಿದ್ದ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನಕ್ಸಲ್ ಶ್ರೀಮತಿಗೆ ಎನ್.ಆರ್.ಪುರ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಕಳೆದ ಎರಡು ದಶಕಗಳಿಂದ ನಕ್ಸಲ್ ಜೊತೆಗೂಡಿದ್ದ ಶ್ರೀಮತಿ 2002ರಿಂದ ನಾಪತ್ತೆಯಾಗಿದ್ದಳು. ಆಕೆ ಮೇಲೆ ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಮಲೆನಾಡಲ್ಲಿ ಕರಪತ್ರ ಹಂಚಿಕೆ, ಬ್ಯಾನರ್ ಕಟ್ಟಿದ್ದು, ಸರ್ಕಾರಿ ಆಸ್ತಿಯನ್ನ ನಷ್ಟ ಮಾಡಿದ್ದು, ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದು, ಆಯುಧಗಳನ್ನು ಶೇಖರಣೆ ಮಾಡಿದ್ದು, ಟೆಂಟ್ ಹಾಕಿದ್ದು, ಗನ್ ತೋರಿಸಿ ಹೆದರಿಸಿ ಹಣ, ಆಹಾರ ಸಾಮಗ್ರಿಗಳನ್ನ ತೆಗೆದುಕೊಂಡು ಹೋಗಿದ್ದು, ಪೊಲೀಸರಿಗೆ ಸಪೋರ್ಟ್ ಮಾಡದಂತೆ ಹಳ್ಳಿಗರನ್ನ ಹೆದರಿಸಿದ ಪ್ರಕರಣ ಸೇರಿ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಕಳೆದೊಂದು ತಿಂಗಳ ಹಿಂದೆ ಕೇರಳದಲ್ಲಿ ಕಾಡಿನಲ್ಲಿ ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸರು ಕೂಂಬಿಂಗ್ ಮಾಡುತ್ತಿದ್ದ ವೇಳೆ ಶ್ರೀಮತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ಕೇರಳ ಪೊಲೀಸರು ತನಿಖೆ ಬಳಿಕ ಆಕೆಯನ್ನ ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸರಿಗೆ ನೀಡಿದ್ದರು. ಅವರು ವಿಚಾರಣೆ ಬಳಿಕ ಆಕೆಯನ್ನು ಶೃಂಗೇರಿ ಪೊಲೀಸರ ಸುಪರ್ದಿಗೆ ನೀಡಿದ್ದರು. ಶೃಂಗೇರಿ ಪೊಲೀಸರು ಶೃಂಗೇರಿ ನ್ಯಾಯಾಧೀಶರು ಇಲ್ಲದ ಕಾರಣ ಎನ್.ಆರ್.ಪುರ ಕೋರ್ಟ್‌ಗೆ ಹಾಜರುಪಡಿಸಿದ್ದರು. ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಆಕೆಯನ್ನು ವಶಕ್ಕೆ ಪಡೆದ ಪೊಲೀಸರು ಇಂದು ಆಕೆ ಮೇಲಿರುವ ಪ್ರಕರಣಗಳ ಸಂಬಂಧ ಸ್ಥಳ ಮಹಜರ್‌ಗೆ ಕರೆದೊಯ್ದಿದ್ದಾರೆ. ತನಿಖೆ ಬಳಿ ಆಕೆಯನ್ನು ಕೇರಳ ಪೊಲೀಸರಿಗೆ ಹಿಂದಿರುಗಿಸಲಿದ್ದಾರೆ ಎನ್ನಲಾಗಿದೆ.












Click it and Unblock the Notifications