ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮನ ಪವಾಡ ನೋಡಲು ಸಾಗರೋಪಾದಿ ಬಂದ ಜನ
ಚಿಕ್ಕಮಗಳೂರು, ನವೆಂಬರ್.07: ಬೆಳಕಿನ ಹಬ್ಬ ದೀಪಾವಳಿಯ ಮಹಾ ಅಮಾವಾಸ್ಯೆಯಂದು ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮ ದೇವಾಲಯದ ಬಾಗಿಲು ತಾನಾಗಿಯೇ ತೆರೆದುಕೊಳ್ಳುತ್ತದೆ. ಇದನ್ನು ಕಣ್ತುಂಬಿಕೊಳ್ಳಲೆಂದೇ ಭಕ್ತರ ದಂಡು ಹರಿದು ಬರುತ್ತದೆ.
ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಆಚರಣೆಯಂತೆ ಈ ಬಾರಿಯೂ ಗರ್ಭಗುಡಿಯ ಬಾಗಿಲಲ್ಲಿ ಹಾಕಿದ ಪರದೆ ತಾನಾಗಿಯೇ ತೆರೆದುಕೊಳ್ಳುವ ಮೂಲಕ ಭಕ್ತರ ನಂಬಿಕೆ ಹುಸಿಯಾಗಿಲ್ಲ. ಅಂದರೆ ಬೆಟ್ಟದಲ್ಲಿ ನೆಲೆಸಿದ್ದ ದೇವಿರಮ್ಮ ದೇವಿ ಇಂದು ಗಾಳಿರೂಪದಲ್ಲಿ ಗರ್ಭಗುಡಿ ಸೇರುತ್ತಾಳೆ ಅನ್ನೋದು ಭಕ್ತರ ನಂಬಿಕೆ.
ನಾಡಿನೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜನತೆಗೆ ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮಳ ಪವಾಡ ನೋಡುವ ಕೌತುಕ. ಮೂರು ದಿನಗಳ ಕಾಲ ಬಿಂಡಿಗದಲ್ಲಿ ದೇವಿರಮ್ಮಳ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಮಂಗಳವಾರದಿಂದಲೇ (ನ.06) ಜಾತ್ರೆ ಆರಂಭವಾಗಿದೆ.
ಇಂದು ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಮೊದಲನೇ ದಿನ ಬೆಟ್ಟದಲ್ಲಿ ದರ್ಶನ ನೀಡುವ ದೇವಿ, ಅಮಾವಾಸ್ಯೆಯ ದಿನವಾದ ಇಂದು ಗಾಳಿ ರೂಪದಲ್ಲಿ ಗ್ರಾಮದ ಗುಡಿಗೆ ಪ್ರವೇಶಿಸುತ್ತಾಳೆ ಅನ್ನೋದು ಗ್ರಾಮಸ್ಥರ ಮಾತು.

ದೇವಿರಮ್ಮ ಗರ್ಭಗುಡಿ ಸೇರುತ್ತಾಳೆ
ಪವಾಡವನ್ನು ನೋಡಲು ಭಕ್ತರ ದಂಡು ಹರಿದು ಬಂದಿತ್ತು. ಅರ್ಚಕರು ಅಷ್ಟ ದಿಕ್ಕುಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಾಲಯ ಸುತ್ತ ಪ್ರದಕ್ಷಿಣೆ ಹಾಕಿ ಮುಗಿಸುತ್ತಿದ್ದಂತೆ ಗಂಟೆ, ವಾದ್ಯಗೋಷ್ಠಿಗಳು ಮೊಳಗಲಾರಂಭಿಸುತ್ತವೆ. ದೇವಾಲಯದ ಬಾಗಿಲಲ್ಲಿ ಹಾಕಿದ ಪರದೆ ತಾನಾಗಿಯೇ ತೆರೆದುಕೊಳ್ಳುತ್ತೆ. ಈ ರೀತಿ ಗಾಳಿರೂಪದಲ್ಲಿ ದೇವಿರಮ್ಮ ಗರ್ಭಗುಡಿ ಸೇರುತ್ತಾಳೆ ಅನ್ನೋದು ಗ್ರಾಮಸ್ಥರ ನಂಬಿಕೆ.

ಕೆಲವು ಸಂಶಯಗಳು
ದೇವಿರಮ್ಮಳ ದೇವಾಲಯದ ಬಾಗಿಲು ತನ್ನಿಂದ ತಾನೇ ತೆರೆದುಕೊಳ್ಳುವುದು ಇಂದಿಗೂ ಕುತೂಹಲ ಮೂಡಿಸಿದೆ. ಜೊತೆಗೆ ಈ ವಿಸ್ಮಯ ಪ್ರಜ್ಞಾವಂತರಲ್ಲಿ ಹಲವು ಸಂಶಯಗಳನ್ನೂ ಹುಟ್ಟು ಹಾಕಿದೆ. ಇಲ್ಲಿನ ದೇವಿರಮ್ಮ ದೇವಿ ಪವಾಡ ಸೃಷ್ಟಿಸುವುದರ ಜೊತೆಗೆ ಭಕ್ತರ ಹರಕೆಯನ್ನು ತೀರಿಸುತ್ತಾಳೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ.

ವರ್ಷಕ್ಕೊಮ್ಮೆ ದರ್ಶನ
ಈ ಕಾರಣಕ್ಕೆ ಇಲ್ಲಿಗೆ ಭಕ್ತರ ದಂಡು ಹರಿದು ಬರೋದು ವಿಶೇಷ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ದೇವರ ಸಾಲಿಗೆ ಈ ದೇವಿರಮ್ಮ ಕೂಡ ಸೇರಲಿದ್ದಾಳೆ.

ಗುರುವಾರ ಕೆಂಡಾರ್ಚನೆ
ಒಟ್ಟಾರೆ, ದೀಪಾವಳಿಯ ಎರಡನೇ ದಿನವಾದ ಇಂದು ದೇವಿರಮ್ಮ ಪವಾಡ ನೋಡಲು ಜನ ಸಾಗರವೇ ಹರಿದು ಬಂದಿತ್ತು. ಜನ ಮರುಳೋ, ಜಾತ್ರೆ ಮರುಳೋ ಗೊತ್ತಿಲ್ಲ. ದೇವಿರಮ್ಮ ಈ ವಿಸ್ಮಯವನ್ನು ನೋಡಲು ಜನರು ಜಾತಕಪಕ್ಷಿಗಳಂತೆ ಕಾದು ಕುಳಿತದ್ದಂತೂ ಸತ್ಯ. ನಾಳೆ ಗುರುವಾರ ಕೆಂಡಾರ್ಚನೆ ನಡೆಯುವ ಮೂಲಕ ಮೂರು ದಿನಗಳ ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ಅಂತಿಮ ತೆರೆ ಬೀಳಲಿದೆ.












Click it and Unblock the Notifications