ಸಚಿವ ಎಸ್. ಅಂಗಾರ ತರಾಟೆಗೆ ತೆಗೆದುಕೊಂಡ ನೆರೆ ಸಂತ್ರಸ್ತರು
ಚಿಕ್ಕಮಗಳೂರು, ಜುಲೈ 02; 2019ರಲ್ಲಿ ಪ್ರವಾಹದಿಂದ ಹಾನಿಗೊಳಗಾದ ಮಲೆಮನೆಯ ನೆರೆಪೀಡಿತ ಪ್ರದೇಶಕ್ಕೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನೆರೆ ಸಂತ್ರಸ್ತರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಮಲೆಮನೆ ಗ್ರಾಮಕ್ಕೆ ಶುಕ್ರವಾರ ಮಧ್ಯಾಹ್ನ ಸಚಿವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಿರಾಶ್ರಿತ ನೆರೆ ಸಂತ್ರಸ್ತರು 3 ವರ್ಷ ಕಳೆದರೂ ಪುನರ್ವಸತಿ ಕಲ್ಪಿಸದೇ ಇರುವುದಕ್ಕೆ ತರಾಟೆಗೆ ತೆಗೆದುಕೊಂಡರು. ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
2019ರಲ್ಲಿ ನೆರೆ ಪ್ರವಾಹದಿಂದ ಮನೆ ಕಳೆದುಕೊಂಡ ಮಲೆಮನೆ ಗ್ರಾಮದ ಎಂ. ಎನ್. ಅಶ್ವತ್ ಮಾತನಾಡಿ, "ಮನೆ ಸಂಪೂರ್ಣ ಕೊಚ್ಚಿ ಹೋಗಿ ಬೀದಿ ಪಾಲಾಗಿದ್ದೆವು. ಸರ್ಕಾರ ಬಾಡಿಗೆ ಮನೆಯಲ್ಲಿ ವಾಸಿಸಲು ಹೇಳಿ ಬಾಡಿಗೆ ಹಣ ನೀಡುವ ಭರವಸೆ ನೀಡಿತ್ತು. ಆದರೆ ಕೇವಲ 5 ತಿಂಗಳು ಮಾತ್ರ ಬಾಡಿಗೆ ನೀಡಿದ್ದು ವರ್ಷ ಕಳೆದರೂ ಬಾಡಿಗೆ ಹಣ ನೀಡಿಲ್ಲ. ಪರ್ಯಾಯ ಜಾಗವನ್ನು ಗುರುತಿಸಿಲ್ಲ" ಎಂದು ಆರೋಪಿಸಿದರು.

"ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಎಲ್ಲಾ ರಾಜಕಾರಣಿಗಳು ಭೇಟಿ ನೀಡಿ ಕೇವಲ ಆಶ್ವಾಸನೆ ನೀಡುತ್ತಾರೆಯೇ ವಿನಃ ಪುನರ್ವಸತಿ ಕಲ್ಪಿಸುತ್ತಿಲ್ಲ. ನೀವು ಪುನರ್ವಸತಿ ಕಲ್ಪಿಸಲು ಸಾಧ್ಯವಿಲ್ಲದಿದ್ದರೆ ಇಲ್ಲ ಎಂದು ಹೇಳಿ. ಹೇಗೋ ಬದುಕುತ್ತೇವೆ, ಸುಳ್ಳು ಭರವಸೆ ನೀಡಿ ಹೋಗಬೇಡಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೆರೆ ಸಂತ್ರಸ್ತ ರಾಜು ಮಾತನಾಡಿ, "ಪರ್ಯಾಯ ಜಾಗ ನೀಡಲು ಸಾಧ್ಯವಿಲ್ಲದಿದ್ದರೆ ವಿಷ ಕೊಟ್ಟು ಬಿಡಿ. ಕೇವಲ ಭರವಸೆ ನೀಡಿ ಜಾಗದ ನಿರೀಕ್ಷೆಯಲ್ಲಿ ಬದುಕುವಂತೆ ಮಾಡಬೇಡಿ. ಬಾಡಿಗೆ ಮನೆಯಲ್ಲಿ ಎರಡು ವರ್ಷಗಳಿಂದ ವಾಸ ಮಾಡುತ್ತಿದ್ದೇವೆ. ಪರ್ಯಾಯ ಜಾಗ ಗುರುತಿಸಲು ಸರ್ಕಾರ ಪರ್ಯಾಯ ಜಾಗ ಗುರುತಿಸಿಲ್ಲ" ಎಂದು ದೂರಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ಮಾತನಾಡಿ, "ಪರ್ಯಾಯ ಸರ್ಕಾರಿ ಜಾಗ ಇದ್ದರೆ ತಿಳಿಸಿ. ಕೂಡಲೇ ಆ ಜಾಗವನ್ನು ನೀಡುತ್ತೇವೆ" ಎಂದರು.

ಪಹಣಿ, ಪಟ್ಟಿ, ಆರ್‍ಆರ್, ಇಂಡೆಕ್ಸ್ ಮುಂತಾದ ದಾಖಲೆಗಳು ಎಲ್ಲವೂ ಸರ್ಕಾರದ ಬಳಿಯೆ ಇರುವಾಗ ಪರ್ಯಾಯ ಸರ್ಕಾರಿ ಜಾಗ ಇದ್ದರೆ ತಿಳಿಸಿ ಎಂದು ಗ್ರಾಮಸ್ಥರನ್ನು ಕೇಳುವುದು ಸರಿಯಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಎಸ್. ಅಂಗಾರ ಮಾತನಾಡಿ, "ಇಂದು ಮಲೆಮನೆಗೆ ಭೇಟಿ ನೀಡಿದ ನಂತರ ಇಲ್ಲಿನ ವಸ್ತುಸ್ಥಿತಿ ಅರಿವಿಗೆ ಬಂದಿದೆ. ಇಲ್ಲಿನ ಎಲ್ಲಾ ಮಾಹಿತಿಯ ವರದಿಯನ್ನು ಮಂಗಳವಾರ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಜಮೀನು ಹಾಗೂ ಮನೆ ಕಳೆದುಕೊಂಡವರಿಗೆ ಪರಿಹಾರ ಕಲ್ಪಿಸಲು ಈಗಾಗಲೇ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದಿದ್ದೇನೆ" ಎಂದರು.












Click it and Unblock the Notifications