Road: ಇಲ್ಲಿ ಹ್ಯಾಂಡಲ್, ಸ್ಟೇರಿಂಗ್, ಮೈ ಗಟ್ಟಿ ಹಿಡ್ಕೊಂಡು ಗಾಡಿ ಓಡ್ಸಿ... ಇಲ್ಲಂದ್ರೆ ಮೂಳೆ ಸಡಿಲ ಆಗುತ್ತೆ....!
ಚಿಕ್ಕಮಗಳೂರು ಆಗಸ್ಟ್ 23: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆಗಳ ಸ್ಥಿತಿ ಬಗ್ಗೆ ಮಾತನಾಡೋ ಹಾಗೇ ಇಲ್ಲ. ಸದ್ಯ ಚಿಕ್ಕಮಗಳೂರಿನ ರಸ್ತೆಗಳ ಸ್ಥಿತಿ ಬಗ್ಗೆ ಮಾತನಾಡೋಣ. ಚಿಕ್ಕಮಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ. ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳು ಹದಗೆಟ್ಟು ಹೋಗಿವೆ. ಇದರಿಂದಾಗಿ ರಸ್ತೆಗಳು ಚರಂಡಿಗಳಾಗಿ ಮಾರ್ಪಟ್ಟು ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸ-ಕೈಮರ ರಸ್ತೆಯ ಅವ್ಯವಸ್ಥೆಗೆ ಜನ ಹೈರಾಣಾಗಿ ಹೋಗಿದ್ದಾರೆ. ಇದು ರಸ್ತೆಯೋ ಇಲ್ಲ ಚರಂಡಿಯೋ ಅನ್ನೋ ಗೊಂದಲದಲ್ಲಿ ಜನ ರಸ್ತೆಗಿಳಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಗೆ ಅಪ್ಪಿ ತಪ್ಪಿ ಬಂದು ಎಚ್ಚರ ತಪ್ಪಿದ್ರೆ ಕೈಕಾಲು ಸೊಂಟ ಮುರಿಯೋದು ಗ್ಯಾರಂಟಿ.

ಹೌದು... ಹೊಂಡಾ-ಗುಂಡಿಯಿಂದ ತುಂಬಿ ಹೋದ ರಸ್ತೆಯಲ್ಲಿ ಸಂಚಾರ ಮಾಡಲು ವಾಹನ ಸವಾರರು ಸುಸ್ತಾಗಿ ಹೋಗಿದ್ದಾರೆ. ಬೃಹತ್ ಗುಂಡಿಯಲ್ಲಿ ನೀರು ತುಂಬಿದ ರಸ್ತೆಯಲ್ಲಿ ಸಂಚರಿಸಲಾಗದೆ, ಗುಂಡಿ ತಪ್ಪಿಸಲು ಹೋಗಿ ಹಲವು ಬಾರಿ ಅಪಘಾತವೂ ಆಗಿದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಲಾಗದೆ ಹಲವರು ಸಾವನ್ನಪ್ಪಿರುವ ಘಟನೆಗಳು ನಡೆದಿವೆ.
ಕುದುರೆಮುಖ-ಕಾರ್ಕಳ- ಬಾಳೆಹೊನ್ನೂರು- ಚಿಕ್ಕಮಗಳೂರು ಕಡೆ ಹೋಗಲು ಇದೇ ರಸ್ತೆಯನ್ನು ಜನ ಅವಲಂಬಿಸಿದ್ದಾರೆ. ಆದರೆ ರಸ್ತೆಗಳು ಯಮನಂತೆ ಬಲಿ ಪಡೆಯಲು ಕಾದು ಕುಳಿತಿದ್ದು ಜನ ಸ್ಥಳೀಯ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ರಸ್ತೆ ಹದಗೆಟ್ಟಿದ್ದರು ಗಮನ ಹರಿಸದೇ ಇದ್ದಿದ್ದಕ್ಕೆ ಸ್ಥಳೀಯ ಶಾಸಕಿ ನಯನ ಮೊಟಮ್ಮ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸ್ಥಳೀಯರ ಪ್ರಕಾರ, ಶಾಸಕರು ಚುನಾವಣೆ ಸಂದರ್ಭದಲ್ಲಿ ಮಾತ್ರ ರಸ್ತೆಗಳನ್ನು ಸರಿಪಡಿಸುತ್ತಾರೆ. ತಾವು ಮತಯಾಚನೆ ಮಾಡಲು ಬೀದಿಗಿಳಿಯುವ ಮುನ್ನ ರಸ್ತೆಗಳನ್ನು ಸರಿಪಡಿಸುತ್ತಾರೆ. ಈ ರಸ್ತೆಗಳು ಕೆಲವೇ ಕೆಲವು ದಿನಗಳಲ್ಲಿ ಮತ್ತೆ ಹಾಳಾಗುತ್ತವೆ. ಇದಕ್ಕೆ ಕಳಪೆ ಗುಣಮಟ್ಟದ ಕಾಮಗಾರಿಯೇ ಕಾರಣ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ದೂರಿದ್ದಾರೆ.

ನಮಗೆ ಗೊತ್ತಿರುತ್ತೆ ರಸ್ತೆ ಹಾಳಾಗಿದೆ ಅಂತ. ಆದರೂ ಕೆಲವೊಮ್ಮೆ ನಾವು ಬರುವಾಗ ಎದುರಿಗೆ ವಾಹನ ಬಂದಾಗ ತಮ್ಮ ಕಂಟ್ರೋಲ್ ಆಗೋದೇ ಇಲ್ಲ. ಹೀಗಾಗಿ ಸುಮಾರು ಬಾರಿ ರಸ್ತೆಯಲ್ಲಿ ಬಿದ್ದಿದ್ದೇವೆ. ಇದೇ ರಸ್ತೆಯಲ್ಲಿ ಎಲ್ಲಾ ಅಧಿಕಾರಿಗಳು ವಾಹನ ಸಂಚಾರ ಮಾಡುತ್ತಾರೆ. ಆದರೆ ಅವರಿಗೆ ಈ ರಸ್ತೆ ಕಣ್ಣಿಗೆ ಕಾಣೋದಿಲ್ಲ ಯಾಕೆ? ಗುಂಡಿಗಳನ್ನು ಮಣ್ಣಾಕಿ ಮುಚ್ಚುತ್ತಾರೆ. ಮಳೆ ಬಂದಾಗ ಆ ಮಣ್ಣು ಕೆಸರಾಗಿ ಹೋಗಿ ಮತ್ತೆ ರಸ್ತೆ ಎಥಾ ಸ್ಥಿತಿ ತಲುಪುತ್ತದೆ ಎಂದು ವಾಹನಸವಾರರು ಆಕ್ರೋಶ ಹೊರಹಾಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಒಂಟಿ ಸಲಗದ ದಾಂಧಲೆ
ಚಿಕ್ಕಮಗಳೂರಿನಲ್ಲಿ ಒಂಟಿ ಸಲಗದ ದಾಂಧಲೆಯ ವಿಡಿಯೋ ವೈರಲ್ ಆಗಿದೆ. ಚಿಕ್ಕಮಗಳೂರು ತಾಲೂಕಿನ ಮಾವಿನಗುಣಿ ಗ್ರಾಮದ ಬಳಿ ಕಾಫಿ, ಅಡಿಕೆ ತೋಟಗಳನ್ನ ಕಾಡಾನೆಯೊಂದು ನಾಶ ಮಾಡುತ್ತಿದೆ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಟ್ಟು ಬೆಳೆ ನಾಶ ಮಾಡುತ್ತಿದೆ.

ಇದರಿಂದಾಗಿ ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ವಾಹನ ಸವಾರರು, ತೋಟಕ್ಕೆ ತೆರಳುವ ಕಾರ್ಮಿಕರಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಹಲವು ದಿನಗಳಿಂದ ಒಂಟಿ ಸಲಗದಿಂದ ನಿರಂತರ ದಾಳಿ ನಡೆಯುತ್ತಿದ್ದು, ಹಲವು ಗ್ರಾಮಗಳ ತೋಟಗಳು ನಾಶವಾಗಿ ಹೋಗಿವೆ.












Click it and Unblock the Notifications