ಕಾಫಿನಾಡಿನಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬಗೆ ಸನ್ಮಾನ
ಚಿಕ್ಕಮಗಳೂರು, ಡಿಸೆಂಬರ್ 11: ನನ್ನೂರಿನ ಮಕ್ಕಳು ಶಿಕ್ಷಣವಂತರಾಗಬೇಕೆಂದು ಶಾಲೆ ನಿರ್ಮಾಣಕ್ಕೆ ಮುಂದಾದೆ. ಒಂದು ರೂಪಾಯಿ ಆದಾಯದಲ್ಲಿ ಹಸಿವನ್ನು ತಾಳಿಕೊಂಡು ಈ ಕಾಯಕಕ್ಕೆ ಮುಂದಾದೆ. ಇಂದು ನನ್ನೊಂದಿಗೆ ಸಾವಿರಾರು ಜನರು ಕೈಜೋಡಿಸಿದ್ದಾರೆ. ಅವರ ಋಣವನ್ನು ನಾನೆಂದು ಮರೆಯುವುದಿಲ್ಲ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.
ಶನಿವಾರ ಚಿಕ್ಕಮಗಳೂರು ನಗರದ ಸಹರಾ ಶಾದಿ ಮಹಲ್‌ನಲ್ಲಿ ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾನು ಅತ್ಯಂತ ಬಡತನದಲ್ಲಿ ಬೆಳೆದವನು, ಮಂಗಳೂರಿನ ಬಸ್ ನಿಲ್ದಾಣದಲ್ಲಿ ಕಿತ್ತಳೆ ಹಣ್ಣು ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ನನಗೆ ನನ್ನೂರಿನ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕೆಂಬ ಆಸೆ ಮನದಲ್ಲಿ ಮೂಡಿತು. ಕಿತ್ತಳೆ ಹಣ್ಣು ವ್ಯಾಪಾರದಲ್ಲಿ ಬಂದ ಹಣವನ್ನು ಶಾಲೆ ನಿರ್ಮಾಣಕ್ಕೆ ಮುಡುಪಿಟ್ಟಿದ್ದೇನೆ ಎಂದರು.

ಸರ್ಕಾರಿ ಕಚೇರಿಗಳಿಗೆ ಅಲೆದು, ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ನನ್ನೂರಿಗೆ ಶಾಲೆ ಬೇಕೆಂದು ಅವರ ಮನವೊಲಿಸಿದ ನಂತರ ೧೯೯೯ರಲ್ಲಿ ನನ್ನೂರಿಗೆ ಸರ್ಕಾರಿ ಶಾಲೆ ಮಂಜೂರಾಯಿತು. ಆದರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಂತ ಕಟ್ಟಡ ಇರಲಿಲ್ಲ, ಆಗ ಅಲ್ಲೇ ಸಮೀಪದಲ್ಲಿದ್ದ ಮಸೀದಿಯಲ್ಲಿ ಮನವಿ ಮಾಡಿಕೊಂಡಾಗ ಅವರು ಒಪ್ಪಿ ಅಲ್ಲೇ ಪ್ರಥಮ ಬಾರಿಗೆ ೨೮ ಮಕ್ಕಳೊಂದಿಗೆ ಶಾಲೆ ಆರಂಭವಾಯಿತು ಎಂದು ಅಂದಿನ ದಿನಗಳನ್ನು ನೆನೆದರು.
ನನ್ನ ಮಗಳನ್ನು ಅದೇ ಶಾಲೆಗೆ ಸೇರಿಸಿದೆ. ಅಲ್ಲಿ ಎಸ್‌ಡಿಎಂಸಿ ಅಧ್ಯಕ್ಷನಾಗಿ ಶಾಲೆಗೆ ಸ್ವಂತ ಕಟ್ಟಡಕ್ಕಾಗಿ ಮತ್ತೇ ಸರ್ಕಾರಿ ಕಚೇರಿ ಅಲೆದಾಟದ ನಂತರ ಸರ್ಕಾರ ಸ್ವಂತ ಕಟ್ಟಡ ಮಂಜೂರು ಮಾಡಿತು. ಇದರೊಟ್ಟಿಗೆ ಅನೇಕ ದಾನಿಗಳ ನೆರವಿನೊಂದಿಗೆ ಶಾಲೆಯ ಸ್ವಂತ ಕಟ್ಟಡ ನಿರ್ಮಾಣವಾಯ್ತು. ಈ ನನ್ನ ಕಾರ್ಯಕ್ಕೆ ಅನೇಕರು ನನ್ನೊಟ್ಟಿಗೆ ಕೈಜೋಡಿಸಿದ್ದಾರೆ ಎಂದರು.

ನಾನು ನಿಮ್ಮಂತೆ ಓದಿಲ್ಲ, ಬಡತನವು ಇತ್ತು. ನಮ್ಮೂರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ನಾನು ಪಟ್ಟ ಶ್ರಮಕ್ಕೆ ಸರ್ಕಾರ ನನ್ನ ಸೇವೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ದೇಶದ ರಾಷ್ಟ್ರಪತಿ, ಪ್ರಧಾನಮಂತ್ರಿ, ವಿತ್ತ ಸಚಿವೆ ಸೇರಿದಂತೆ ದೇಶದ ಮಹಾನ್ ವ್ಯಕ್ತಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪಡೆಯಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಖುಷಿಪಟ್ಟರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೆ. ಮಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ಹರೇಕಳ ಹಾಜಬ್ಬ ಅವರು ಅಕ್ಷರ ಜ್ಞಾನ ಬಲ್ಲವರಲ್ಲ, ಅವರ ಸರಳ ವ್ಯಕ್ತಿತ್ವ ಮತ್ತು ನಿಸ್ವಾರ್ಥ ಸೇವೆಗೆ ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟಿದೆ ಎಂದು ತಿಳಿಸಿದರು.

ಮಂಗಳೂರಿನಲ್ಲಿ ಕಿತ್ತಳೆ ಹಣ್ಣು ವ್ಯಾಪಾರ ಮಾಡುತ್ತಿದ್ದ ಸಂದರ್ಭದಲ್ಲಿ ವಿದೇಶಿಗರೊಬ್ಬರು ಈ ಹಣ್ಣಿನ ಬೆಲೆ ಎಷ್ಟು ಎಂದು ಇಂಗ್ಲೀಷ್‌ನಲ್ಲಿ ಕೇಳಿದಾಗ ಹಾಜಬ್ಬರಿಗೆ ಅರ್ಥವಾಗದೆ ಪಕ್ಕದಲ್ಲಿದ್ದವರಿಂದ ಕೇಳಿ ತಿಳಿದುಕೊಂಡರು. ಇದರಿಂದ ಬೇಸರಗೊಂಡ ಹಾಜಬ್ಬ ನನ್ನ ಪರಿಸ್ಥಿತಿ ನಮ್ಮೂರಿನ ಮಕ್ಕಳಿಗೆ ಬರಬಾರದು. ಅವರು ಶಿಕ್ಷಣವಂತರಾಬೇಕು ಎಂದು ತಾವು ಮಾರಾಟ ಮಾಡುತ್ತಿದ್ದ ಕಿತ್ತಳೆ ಹಣ್ಣಿನಿಂದ ಬಂದ ಹಣದಿಂದ ಶಾಲೆ ಪ್ರಾರಂಭಿಸಲು ಶ್ರಮಿಸಿದರು. ೧೯೯೯ರಲ್ಲಿ ೧ನೇ ತರಗತಿ ಆರಂಭವಾಯ್ತು, ೨೦೧೧ರಲ್ಲಿ ಶಾಲಾ ಕಟ್ಟಡ ನಿರ್ಮಾಣವಾಯಿತು ಎಂದರು.
ಹಾಜಬ್ಬರವರ ನಿಸ್ವಾರ್ಥ ಸೇವೆಗೆ ಅನೇಕ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ದೇಶದ ಶ್ರೇಷ್ಠ ಪದ್ಮಶ್ರೀ ಪ್ರಶಸ್ತಿ ಲಭಿಸಿದ ನಂತರ ಅವರ ಹೆಸರು ದೇಶ- ವಿದೇಶಗಳಲ್ಲಿ ರಾರಾಜಿಸುತ್ತಿದೆ. ಹಾಜಬ್ಬನವರಿಗೆ ವೇದಿಕೆ ಇರಲಿಲ್ಲ, ಆದರೆ ಅವಕಾಶವಿತ್ತು. ಅವರ ಪರಿಶ್ರಮ ಮತ್ತು ನಿಸ್ವಾರ್ಥ ಸೇವೆಯಿಂದ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಪತ್ರಕರ್ತ ಗುರುವಪ್ಪ ಬಾಳೆಪುಣಿ ಮಾತನಾಡಿ, ಹಾಜಬ್ಬ ಜಾತಿ, ಧರ್ಮ ಮೀರಿ ಬೆಳೆದ ವ್ಯಕ್ತಿತ್ವದವರು. ಅವರ ಸರಳ ಜೀವನ, ಮುಗ್ಧ ಮನಸ್ಸು, ನಿಸ್ವಾರ್ಥ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಹುಡುಕಿಕೊಂಡು ಬಂದಿದೆ ಎಂದು ಹೇಳಿದರು.
ಆಸ್ತಿ, ಹಣ, ಸಂಪತ್ತಿನಿಂದ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ. ಗುಣದಿಂದ ದೊಡ್ಡವರಾಗುತ್ತಾರೆ ಎನ್ನುವುದಕ್ಕೆ ಹಾಜಬ್ಬನವರೇ ನಮ್ಮ ಮುಂದಿರುವ ನಿದರ್ಶನ. ಇವರ ಸಾಧನೆ ಮೂರು ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿದೆ. ದೇಶ- ವಿದೇಶಗಳಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅನೇಕ ಪ್ರಶಸ್ತಿಗಳು ಲಭಿಸಿವೆ ಇದಕ್ಕೆ ಅವರ ನಿಸ್ವಾರ್ಥ ಸೇವೆಯೇ ಕಾರಣ ಎಂದರು.
ಪದ್ಮಶ್ರೀ ಪ್ರಶಸ್ತಿ ಪಡೆಯಲು ಶಿಫಾರಸ್ಸು ಮಾಡುತ್ತಾರೆ. ಹಣದ ವ್ಯಯಕ್ಕೂ ಮುಂದಾಗುತ್ತಾರೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಇಂತಹ ಎಲೆಮರೆ ಕಾಯಿಗಳಂತೆ ಸೇವೆ ಸಲ್ಲಿಸುತ್ತಿರುವರನ್ನು ಗುರುತಿಸಿ ಪದ್ಮಶ್ರೀ ನೀಡುತ್ತಿರುವುದು ಶ್ಲಾಘನೀಯ ಎಂದ ಅವರು, ಈ ಕಾರ್ಯ ಹೀಗೆ ಮುಂದುವರೆಯಲಿ, ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವರನ್ನು ಗುರುತಿಸುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಜಬ್ಬನವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಕೆ. ಇಬ್ರಾಹಿಂ, ಮುಖಂಡ ಜಾಕೀರ್ ಹುಸೇನ್, ಕಲ್ಕಟ್ಟೆ ಪುಸ್ತಕ ಮನೆ ನಾಗರಾಜ್ ಕಲ್ಕಟ್ಟೆ ಸೇರಿದಂತೆ ಅನೇಕರು ಇದ್ದರು. ಅಬುಬೂಕರ್ ಸಿದ್ದಿಕ್ಕಿ ಸ್ವಾಗತಿಸಿದರು. ಶಲೀ ಅಸನ್ ಪ್ರಾರ್ಥಿಸಿದರು. ಅಬ್ಬಾಸ್ ಕಿರುಗುಂದ ನಿರೂಪಿಸಿದರು.












Click it and Unblock the Notifications