ನಾನೇನೂ ಕಮ್ಮಿಯಿಲ್ಲ ಅಂತಿದೆ ಸಿಂಗಟಗೆರೆಯ ಕನ್ನಡ ಶಾಲೆ

ಚಿಕ್ಕಮಗಳೂರು, ಜೂನ್ 28: ಲಕ್ಷಾಂತರ ರೂಪಾಯಿ ಡೊನೇಶನ್ ಕೊಟ್ಟು ನಾ ಮುಂದು ತಾ ಮುಂದು ಅಂತ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದ ಪೋಷಕರು ದಿಢೀರನೆ ಮನಸ್ಸು ಬದಲಾಯಿಸಿ ಸರ್ಕಾರಿ ಶಾಲೆಯತ್ತ ಮುಖ ಮಾಡಿದ್ದಾರೆ. ಎಲ್ಲರೂ ಇಂಗ್ಲಿಷ್ ಇಂಗ್ಲಿಷ್ ಎಂದು ಕನವರಿಸ್ತಿದ್ರೆ, ಇದೇನಿದು ಇಂಗ್ಲೀಷ್ ಸ್ಕೂಲ್ ಬಿಟ್ಟು ಸರ್ಕಾರಿ ಶಾಲೆಯತ್ತ ಹೊರಟಿದ್ದಾರೆ ಎಂದು ಆಶ್ಚರ್ಯವಾಗೋದು ಸಹಜ. ಹಾಗಾದರೆ ಅವರೆಲ್ಲ ಯಾಕೆ ಈ ಶಾಲೆಯತ್ತ ಮುಖ ಮಾಡಿದ್ದಾರೆ? ಈ ಶಾಲೆ ಯಾವುದು? ಹೀಗೆ ದಿಢೀರ್ ಬದಲಾವಣೆಗೆ ಕಾರಣವೇನು ಅನ್ನುವ ಕುತೂಹಲವೂ ಮೂಡುತ್ತದೆ.

ಇದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸಿಂಗಟಗೆರೆ ಗ್ರಾಮದ ಶಾಲೆಯ ಕಥೆ. ಒಂದು ಕಾಲದಲ್ಲಿ ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಈ ಶಾಲೆ ಈಚೆಗೆ ಆರಂಭವಾದ ಇಂಗ್ಲೀಷ್ ಶಾಲೆಗಳಿಂದ ಅಸ್ತಿತ್ವ ಕಳೆದುಕೊಂಡಿತ್ತು. ಇಂಗ್ಲೀಷ್ ವ್ಯಾಮೋಹಕ್ಕೆ ಬಿದ್ದ ಪೋಷಕರು ತಾವೇ ಓದಿದ ಕನ್ನಡ ಶಾಲೆಯನ್ನ ಮರೆತಿದ್ದರು. 600 ಮಕ್ಕಳಿದ್ದ ಶಾಲೆ ಕೊನೆಗೆ ಮುಚ್ಚೋ ಹಂತಕ್ಕೆ ಬಂತು. ಅ ಆ ಇ ಈ ಕಲಿತ ಶಾಲೆಯ ದುಸ್ಥಿತಿ ಕಂಡು ನೊಂದವರೂ ಇದ್ದರು.

ಆದರೆ ಈಗ ಅದೇ ಊರಲ್ಲಿ ಇಂಗ್ಲೀಷ್ ಸ್ಕೂಲುಗಳಿದ್ದರೂ ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೇ ಸೇರಿಸುತ್ತಿದ್ದಾರೆ. ಮುಚ್ಚುವ ಹಂತದಲ್ಲಿದ್ದ ಶಾಲೆ ಇದೀಗ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದು ನಿಂತಿದೆ. 20 ಮಕ್ಕಳಿದ್ದ ಶಾಲೆಯಲ್ಲೀಗ 250ಕ್ಕೂ ಹೆಚ್ಚು ಮಕ್ಕಳಿದ್ದಾರೆ.

old students developed singatagere village government school

ಇದಕ್ಕೆಲ್ಲ ಕಾರಣ, ಈ ಶಾಲೆಯ ಹಳೆಯ ವಿದ್ಯಾರ್ಥಿಗಳು. ತಾವು ಕಲಿತು ಭವಿಷ್ಯಕ್ಕೆ ದಾರಿಯಾಗಿದ್ದ ತಮ್ಮೂರಿನ ಕನ್ನಡ ಶಾಲೆಯ ಋಣ ತೀರಿಸಲು ಮುಂದಾದ ಹಳೇ ವಿದ್ಯಾರ್ಥಿಗಳು ಸಂಘ-ಸಂಸ್ಥೆಗಳಿಂದ ಹಣ ಹೊಂದಿಸಿ ತಾವೂ ಕೂಡಿಟ್ಟ ಹಣವನ್ನು ಶಾಲೆಯ ಅಭಿವೃದ್ಧಿಗಾಗಿ ಮುಡುಪಾಗಿಟ್ಟದ್ದಾರೆ.

ಯಾವುದೇ ಹೈಟೆಕ್ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಈ ಶಾಲೆಯನ್ನು ನವೀಕರಣಗೊಳಿಸಿದ್ದಾರೆ. ಖಾಸಗಿ ಶಾಲೆಗೆ ಸಡ್ಡು ಹೊಡೆಯುವಂತೆ ಮೂಲ ಸೌಕರ್ಯಗಳನ್ನ ಒದಗಿಸಲಾಗಿದೆ. ಎಲ್.ಕೆ.ಜಿ, ಯು.ಕೆ.ಜಿ, ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಿರುವುದು ಇಲ್ಲಿನ ವಿಶೇಷ. ಗ್ರಾಮದ ಪ್ರತಿ ಮನೆ ಮನೆಗೂ ಹೋಗಿ ಕನ್ನಡ ಶಾಲೆಯ ಮಹತ್ವ ಹಾಗೂ ಅದರ ಉಳಿವಿಗಾಗಿ ಕೈಗೊಂಡ ಹಳೇ ವಿದ್ಯಾರ್ಥಿಗಳ ಶ್ರಮ ಈಗ ಫಲ ನೀಡಿದೆ.

old students developed singatagere village government school

ಹಂತ-ಹಂತವಾಗಿ ಶಾಲೆ ಅಭಿವೃದ್ಧಿಗೊಳ್ಳುತ್ತಿದ್ದು, ಶಾಲೆಯ ಪ್ರತಿಯೊಬ್ಬ ಸಮಿತಿ ಸದಸ್ಯರು, ಉಪಾಧ್ಯಾಯರ ನಿಷ್ಠೆ ಕೂಡ ಇಲ್ಲಿ ಕಾರ್ಯಗತವಾಗಿದೆ. ಟ್ಯೂಷನ್, ಸ್ಮಾರ್ಟ್ ಕ್ಲಾಸ್ ಸೇರಿದಂತೆ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ತರಗತಿಗಳು ಆರಂಭಗೊಂಡಿದ್ದು, ನಾವೇನೂ ಕಡಿಮೆ ಇಲ್ಲ ಅಂತಿದೆ ಸಿಂಗಟಗೆರೆಯ ಕನ್ನಡ ಶಾಲೆ.

ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಸರ್ಕಾರವೇ ಹೆಣಗಾಡುತ್ತಿದೆ. ಇಂಗ್ಲೀಷ್ ವ್ಯಾಮೋಹಕ್ಕೆ ಒಂದೊಂದೇ ಕನ್ನಡ ಶಾಲೆಗಳು ಮಾಯವಾಗುತ್ತಿವೆ. ಈ ಹೊತ್ತಲ್ಲಿ ತನ್ನ ಹಳೇ ಗೆಟಪ್ ಬದಲಿಸಿ ಹೊಸ ಲುಕ್ ನೊಂದಿಗೆ, ಸಕಲ ಸವಲತ್ತುಗಳೊಂದಿಗೆ ಮಿರುಗುತ್ತಿರುವ ಸಿಂಗಟಗೆರೆಯ ಕನ್ನಡ ಶಾಲೆ ಎಲ್ಲಾ ಸರ್ಕಾರಿ ಶಾಲೆಗಳಿಗೂ ಮಾದರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+