ರಜೆ ಮುಗಿಸಿ ತೆರಳುವಾಗ ರಸ್ತೆ ಅಪಘಾತ: ಎನ್‌ಎಸ್‌ಜಿ ಕಮಾಂಡೋ ದಾರುಣ ಸಾವು
ಚಿಕ್ಕಮಗಳೂರು, ಮೇ 24: ರಸ್ತೆ ಅಪಘಾತದದಲ್ಲಿ ಎನ್.ಎಸ್.ಜಿ. ಕಮಾಂಡೋ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇತ್ತೀಚೆಗೆ ರಾಷ್ಟ್ರೀಯ ಭದ್ರತಾ ಪಡೆ ಬ್ಲ್ಯಾಕ್ ಕ್ಯಾಟ್ ವಿಭಾಗಕ್ಕೆ (ಎನ್‌ಎಸ್‌ಜಿ) ಕಮಾಂಡೋ ಆಗಿ ನೇಮಕವಾಗಿದ್ದ ಚಿಕ್ಕಮಗಳೂರಿನ ದೀಪಕ್ (31) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ದೀಪಕ್ ರಜೆ ಮುಗಿಸಿ ವಾಪಸ್ ಕೆಲಸಕ್ಕೆ ಹೋಗುವಾಗ ಬೆಂಗಳೂರಿನಲ್ಲಿ ಅಪಘಾತ ಸಂಭವಿಸಿದ್ದು, ದುರಂತವಾಗಿ ಸಾವನ್ನಪ್ಪಿದ್ದಾರೆ.
ಮೃತ ಎನ್‌ಎಸ್‌ಜಿ ಕಮ್ಯಾಂಡೋ ದೀಪಕ್ ತರೀಕೆರೆ ತಾಲೂಕಿನ ತಣಿಗೇಬೈಲು ನಿವಾಸಿ ಆಗಿದ್ದರು. ಇತ್ತೀಚೆಗೆ ಎನ್.ಎಸ್.ಜಿ. ಬ್ಲ್ಯಾಕ್ ಕ್ಯಾಟ್ ಕಮಾಂಡೋವಾಗಿ ನೇಮಕವಾಗಿದ್ದರು. ಕಳೆದ 2020ರಲ್ಲಿ ಮದುವೆಯಾಗಿದ್ದ ದೀಪಕ್ ಮನೆಯಲ್ಲಿ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ ಒಂದು ತಿಂಗಳ ರಜೆಯನ್ನು ತೆಗೆದುಕೊಂಡು ತವರೂರಿಗೆ ವಾಪಸ್ ಬಂದಿದ್ದರು.

ರಜೆಯಲ್ಲಿದ್ದ ಸಂದರ್ಭದಲ್ಲಿ ದೀಪಕ್ ಹೊಸ ಬೈಕ್ ಅನ್ನು ಖರೀದಿ ಮಾಡಿದ್ದರು. ಈಗ ರಜೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಕೆಲಸಕ್ಕೆ ಮರಳಿ ಹೋಗಬೇಕಿತ್ತು. ಆದ್ದರಿಂದ ಹೊಸ ಬೈಕ್‌ನಲ್ಲಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಮೊದಲ ಮಳೆ ಬಿದ್ದ ನಂತರ ರಸ್ತೆಯಲ್ಲಿ ವಾಹನಗಳು ಜಾರುವ ಹಾಗೂ ನಿಯಂತ್ರಣ ಕಳೆದುಕೊಳ್ಳುವುದರಿಂದ ರಸ್ತೆ ಅಪಘಾತಗಳ ಸಂಖ್ಯೆ ತೀವ್ರ ಹೆಚ್ಚಳವಾಗುತ್ತಿದೆ. ಅದೇ ರೀತಿ ಎನ್.ಎಸ್.ಜಿ. ಕಮಾಂಡೋ ದೀಪಕ್ ಕೂಡ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಳೆ ಅವಾಂತರ: ಧರೆಗುರುಳಿದ ಬೃಹತ್ ಮರ, ತಪ್ಪಿದ ಭಾರೀ ಅನಾಹುತ
ಹಾಸನ: ಹಾಸನ ಜಿಲ್ಲೆಯ ವಿವಿಧೆಡೆ ನಿನ್ನೆ ರಾತ್ರಿ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಭಾರೀ ಮಳೆಗೆ ಕಾಲೇಜು ಆವರಣದಲ್ಲಿದ್ದ ಬೃಹತ್ ಗಾತ್ರದ ಮರ ಮುರಿದು ಬಿದ್ದಿರುವ ಘಟನೆ ಅರಸೀಕೆರೆ ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದಿದೆ.
ಬಿರುಗಾಳಿ ಸಹಿತ ಭಾರೀ ಮಳೆಗೆ ಕಾಲೇಜು ಆವರಣದಲ್ಲಿದ್ದ ಮರ ಬಿದ್ದಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಮನೆಗೆ ತೆರಳಿದ್ದರಿಂದ ಸಂಭಿಸುತ್ತಿದ್ದ ಭಾರೀ ಅನಾಹುತ ತಪ್ಪಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಇಂದು ಬೆಳಗ್ಗೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.











Click it and Unblock the Notifications