ಹಿಂದಿ ಆಯ್ತು, ಕರ್ನಾಟಕದಲ್ಲೀಗ ಸರ್ಕಾರದಿಂದಲೇ 'ಉರ್ದು' ಹೇರಿಕೆ? ಚರ್ಚೆ ಹುಟ್ಟುಹಾಕಿದ ಆದೇಶ
ಕರ್ನಾಟಕ ಸರ್ಕಾರ ಹೊರಡಿಸಿದೆ ಎನ್ನಲಾದ ಆದೇಶದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಉರ್ದು ಭಾಷೆಯನ್ನು ಕಲಿತಿರಬೇಕು ಎಂಬ ನಿಯಮ ಮಾಡಲಾಗಿದೆ. ಇದಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಅಂಗನವಾಡಿ ಶಿಕ್ಷಕರ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು, ಈ ಕೆಲಸಕ್ಕೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಉರ್ದು ಭಾಷೆಯನ್ನೂ ಕಲಿತಿರಬೇಕು ಎಂದು ನಿಯಮಾವಳಿ ರೂಪಿಸಲಾಗಿದೆ ಎಂದು ಹೇಳಲಾಗಿದೆ. ಜೊತೆಗೆ ಕನ್ನಡ ಭಾಷೆಯನ್ನು ಸಹ ಉಲ್ಲೇಖಿಸಲಾಗಿದ್ದು, ಸರ್ಕಾರ ಉರ್ದು ಭಾಷೆಗೆ ಯಾಕೆ ಇಷ್ಟು ಒತ್ತು ನೀಡುತ್ತಿದೆ? ಇದು ಉರ್ದು ಹೇರಿಕೆಯ ಆರಂಭವೇ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಅಂಗನವಾಡಿ ಶಿಕ್ಷಕರ ಹುದ್ದೆಗೆ ಅರ್ಜಿ ಕರೆದಿತ್ತು. ಇದರಲ್ಲಿ ಅಂಗನವಾಡಿ ಕೇಂದ್ರಗಳಲ್ಲಿನ ಶಿಕ್ಷಕರ ಹುದ್ದೆಗೆ ಉರ್ದು ಭಾಷೆಯನ್ನು ಕಡ್ಡಾಯ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದಕ್ಕೆ ಎಲ್ಲೆಡೆಯಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಆ ಭಾಗದಲ್ಲಿ ಮುಸ್ಲಿಂ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಾಗಾಗಿ ಅರ್ಜಿ ಸಲ್ಲಿಸುವವರು ಉರ್ದು ಕಲಿತರೆ ಒಳ್ಳೆಯದು ಎಂದು ಈ ರೀತಿ ನಿಯಮ ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರ ಈ ನಡೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಹಿಂದಿ ಹೇರಿಕೆಯಿಂದ ಈಗಾಗಲೇ ನೊಂದಿದ್ದೇವೆ. ಈಗ ರಾಜ್ಯ ಸರ್ಕಾರವೇ ಉರ್ದು ಹೇರಿಕೆಗೆ ಮುಂದಾಗಿರುವುದು ದೌರ್ಭಾಗ್ಯ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ವಿಚಾರವಾಗಿ ರಾಜ್ಯ ಬಿಜೆಪಿ ಕೂಡ ಕಟುವಾಗಿ ಟೀಕಿಸಿದ್ದು, ಕನ್ನಡ ನಾಡಿನಲ್ಲಿ ಉರ್ದು ಹೇರಿಕೆ ಮಾಡುತ್ತಿದೆ ಕರ್ನಾಟಕ ಸರ್ಕಾರ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಅಂಗನವಾಡಿ ಶಿಕ್ಷಕರ ಹುದ್ದೆಗೆ ನೇಮಕಗೊಳ್ಳಲು ಉರ್ದು ಕಡ್ಡಾಯವಾಗಿ ಬರಬೇಕಂತೆ, ಹೀಗೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಸಿಎಂ ಸಿದ್ದರಾಮಯ್ಯನವರೇ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ..ಮೂಡಿಗೆರೆ ಇರುವುದು ಕರ್ನಾಟಕದಲ್ಲಿ, ಕರ್ನಾಟಕದಲ್ಲಿ ಕನ್ನಡ ಮಾತ್ರ ಅಧಿಕೃತ ಭಾಷೆ, ಅಂತಹದರಲ್ಲಿ ಉರ್ದು ಕಡ್ಡಾಯ ಏಕೆ..? ಉತ್ತರಿಸಿ ಎಂದು ಕಿಡಿಕಾರಿದೆ.

ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್, ಅಂಗನವಾಡಿ ಶಿಕ್ಷಕಿ ಕೆಲಸ ಸಿಗಬೇಕಾದರೆ ಉರ್ದು ಭಾಷೆ ಗೊತ್ತಿರಬೇಕು ಎಂಬ ರಾಜ್ಯದ ಕಾಂಗ್ರೆಸ್ ಸರಕಾರದ ಘೋಷಣೆ ಖಂಡನೀಯ. ಅಂಗನವಾಡಿ ಶಿಕ್ಷಕರ ನೇಮಕಾತಿಯಲ್ಲಿಯೂ ಮುಸ್ಲಿಂ ಸಮುದಾಯವನ್ನು ಓಲೈಸುವ, ಅವರಿಗೆ ಮಾತ್ರ ಕೆಲಸ ಸಿಗುವಂತೆ ದಾರಿ ಮಾಡಿಕೊಡುವ ಹಿಂಬಾಗಿಲ ಯತ್ನ ಮತ್ತೊಮ್ಮೆ ಕಾಂಗ್ರೆಸ್ಸಿಗರ ಕುಟಿಲ ನೀತಿ ಎತ್ತಿ ತೋರಿಸುತ್ತಿದೆ. ಇದು ಅಸಹ್ಯ ರಾಜಕೀಯದ ಪರಮಾವಧಿ ಎಂದು ಖಂಡಿಸಿದ್ದಾರೆ.
ಬಿಜೆಪಿ ನಾಯಕ ಸಿ.ಟಿ.ರವಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಂಗನವಾಡಿಗೆ ಕಾರ್ಯಕರ್ತೆಯನ್ನು ನೇಮಕಾತಿ ಮಾಡುವಾಗ ಉರ್ದು ಭಾಷೆ ಬರುವುದು ಕಡ್ಡಾಯ ಅನ್ನುವ ಹೊಸ ನೀತಿ ಯಾವಾಗ ಜಾರಿಗೆ ಬಂತು? ಕರ್ನಾಟಕ ರಾಜ್ಯದಲ್ಲಿ ಅಂಗನವಾಡಿಯ ಕಾರ್ಯಕರ್ತೆಗೆ ಕನ್ನಡ ಬಂದರೆ ಸಾಕಾಗುವುದಿಲ್ಲವೇ? ಉರ್ದು ಬರಲೇಬೇಕು ಅನ್ನುವ ಕಡ್ಡಾಯ ಈ ಹುದ್ದೆಯನ್ನು ಯಾರೋ ಒಬ್ಬರಿಗೆ ಮಾತ್ರ ಸಿಗುವ ಹಾಗೆ ಮಾಡುವ ಹುನ್ನಾರವೇ? ಈ ರೀತಿಯ ನೀತಿ "ಕನ್ನಡಿಗರಿಗೆ" ಮಾಡುವ ಅನ್ಯಾಯವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೂಡಿಗೆರೆ ಮತ್ತು ಚಿಕ್ಕಮಗಳೂರಿನಲ್ಲಿ ಅರ್ಜಿ ಸಲ್ಲಿಸುವ ಎಲ್ಲಾ ಅಂಗನವಾಡಿ ಶಿಕ್ಷಕರಿಗೆ ಉರ್ದು ಜ್ಞಾನವನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಕನ್ನಡ ಪ್ರಧಾನವಾಗಿರುವ ರಾಜ್ಯದಲ್ಲಿ ಉರ್ದು ಕಡ್ಡಾಯಗೊಳಿಸುವುದು ದೋಷಪೂರಿತವಾಗಿದೆ ಎಂದಿದ್ದಾರೆ. ಈ ಬಗ್ಗೆ ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಈ ನಿಯಮ ಹಿಂತೆಗೆದುಕೊಳ್ಳುವಂತೆ ತಾಕೀತು ಮಾಡಿವೆ.












Click it and Unblock the Notifications