ಚಿಕ್ಕಮಗಳೂರು: ಜಾತಿ, ಧರ್ಮ ಪಕ್ಕಕ್ಕಿಟ್ಟು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮುಸ್ಲಿಂ ಮಹಿಳೆ
ಚಿಕ್ಕಮಗಳೂರು, ಸೆಪ್ಟೆಂಬರ್, 01: ವಾದ-ವಿವಾದ, ಪ್ರತಿರೋಧಗಳ ಮಧ್ಯೆ ರಾಜ್ಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಈ ಬಾರಿ ವಿವಿಧ ರೀತಿಯಲ್ಲಿ ಗಣೇಶ ಹಬ್ಬ ಮೂರ್ತಿಗಳು ಮೂಡಿ ಬಂದಿದ್ದು, ಅಪ್ಪು ಗಣೇಶೋತ್ಸವ ಎಲ್ಲೆಡೆ ಗಮನ ಸೆಳೆದಿದೆ. ಹೀಗೆ ಈ ವರ್ಷ ನಾನಾ ರೂಪದಲ್ಲಿ ವಿಘ್ನ ವಿನಾಯಕನ ಹಬ್ಬವನ್ನು ಆಚರಿಸುತ್ತಿದ್ದಾರೆ. ಆದರೆ ಕಾಫಿನಾಡಿನ ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯಕ್ಷೆ ಆಗಿದ್ದು, ಗಣೇಶನಿಗೆ ಪೂಜೆ ಮಾಡಿ ನಾವೆಲ್ಲಾ ಭಾರತೀಯರು ಎನ್ನುವ ಸಂದೇಶವನ್ನು ಸಾರಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಜುಬೇದಾ ಎನ್ನುವ ಮುಸ್ಲಿಂ ಮಹಿಳೆ ಗಣಪತಿ ಸೇವಾ ಸಮಿತಿಗೆ ಅಧ್ಯಕ್ಯೆ ಆಗಿ ಗಮನ ಸೆಳೆದಿದ್ದಾರೆ. ಇವರು ಪ್ರಸ್ತುತ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಗಿದ್ದು, ಎನ್.ಆರ್.ಪುರ ತಾಲೂಕಿನ ರಾಜೀವ್ ನಗರದ ಗಣಪತಿ ಸೇವಾ ಸಮಿತಿಯಲ್ಲಿ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅಧ್ಯಕ್ಷತೆಯಲ್ಲಿ ಈ ವರ್ಷವೂ ಕೂಡ ಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಒಬ್ಬ ಮಹಿಳೆ ಮನೆಯಿಂದ ಹೊರಗಡೆ ದುಡಿಯುವುದಕ್ಕೆ ನಿರ್ಬಂಧಗಳೂ ಇವೆ. ಆದರೆ ಜುಬೇದಾ ಅವರು ಮಾತ್ರ ಸಮುದಾಯದ ಕಟ್ಟುಪಾಡುಗಳನ್ನು ವಿರೋಧಿಸಿ ಕಳೆದ ಎರಡು ದಶಕಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.

ಮುಸ್ಲಿಂ ಮಹಿಳೆಯ ಸಮಾಜಮುಖಿ ಕಾರ್ಯಗಳು
ಕಳೆದ 13 ವರ್ಷಗಳಿಂದ ಗ್ರಾಮದ ಯುವಕರ ಜೊತೆಗೂಡಿ ಗಣಪತಿಯನ್ನು ಕೂರಿಸಿ ನಾವೆಲ್ಲಾ ಭಾರತೀಯರು, ನಾವೆಲ್ಲ ಒಂದು ಎಂಬ ಸಾಮಾಜಿಕ ಸಾಮರಸ್ಯದ ಸಂದೇಶವನ್ನ ಸಾರುತ್ತಿದ್ದಾರೆ. ನಮ್ಮ ಮನೆಯವರು ನಮಗೆ ಧರ್ಮದ ಕಟ್ಟುಪಾಡುಗಳನ್ನ ತುಂಬಿಲ್ಲ. ನಾವು ಯುವ ಪೀಳಿಗೆಗೆ ಧರ್ಮದ ಕಟ್ಟುಪಾಡುಗಳನ್ನು ತುಂಬುವುದು ಬೇಡ. ಜಾತಿ, ಧರ್ಮ, ಸಂಪ್ರದಾಯ ಮನೆಗಳಲ್ಲಿ ಇರಲಿ. ದೇಶದ ಅಭಿವೃದ್ಧಿ, ಸಮಾಜದ ಶಾಂತಿ, ಸಾಮರಸ್ಯಕ್ಕೆ ಜಾತಿ, ಧರ್ಮಗಳ ಕಟ್ಟುಪಾಡುಗಳು ಅಡ್ಡಿ ಆಗಬಾರದು ಎಂದು ಯುವ ಜನತೆಗೆ ಮನವಿ ಮಾಡಿದರು.

ಮುಸ್ಲಿಂ ಮಹಿಳೆಯಿಂದ ಗಣೇಶ ಹಬ್ಬ ಆಚರಣೆ
ಜುಬೇದಾ ಅವರ ಉತ್ತೇಜನದಿಂದ ರಾಜೀವ್ ನಗರದ ಎಲ್ಲಾ ಧರ್ಮದ ಯುವಕರು ಕೂಡ ಒಂದಾಗಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದ, ಭಾವ ಇಲ್ಲ. ಇವರು ಕೇವಲ ಗಣಪತಿ ಹಬ್ಬವನ್ನಷ್ಟೇ ಅಲ್ಲದೆ ಎಲ್ಲಾ ಧರ್ಮದ ಹಬ್ಬಗಳನ್ನು ಇದೇ ರೀತಿ ನಗರದ ಯುವಕರ ಜೊತೆ ಸೇರಿ ಆಚರಿಸುತ್ತಾರೆ. ಈ ವರ್ಷ ಗಣಪತಿ ಜೊತೆ ನಮ್ಮನ್ನೆಲ್ಲ ಅಗಲಿದ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಫೋಟೋವನ್ನು ಇಟ್ಟು ಪೂಜೆ ಮಾಡಿ ಗಮನ ಸೆಳೆದರು.

ಜುಬೇದಾರಿಂದ ಅನಾಥ ಶವಗಳಿಗೆ ಅಂತ್ಯಸಂಸ್ಕಾರ
ಜುಬೇದಾ ಅವರ ಸಮಾಜಮುಖಿ ಕಾರ್ಯಗಳಿಗೆ ಸ್ಥಳೀಯರು ಸಾಥ್ ನೀಡುತ್ತಾ ಬಂದಿದ್ದಾರೆ. ಮುಸ್ಲಿಂ ಸಮುದಾಯಲ್ಲಿ ಮಹಿಳೆಯರು ಸ್ಮಶಾನಕ್ಕೆ ಹೋಗುವುದಿಲ್ಲ. ಆದರೆ ಜುಬೇದಾ ಹತ್ತಾರು ಅನಾಥ ಶವಗಳಿಗೆ ತಾನೇ ಮುಂದೆ ನಿಂತು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಜಾತಿ, ಧರ್ಮಗಳ ಸಂಘರ್ಷದಲ್ಲಿ ಇಂಹತ ಮನಸ್ಥಿತಿ ಉಳ್ಳವರು ಈ ದೇಶಕ್ಕೆ ಬೇಕಾಗಿರುವುದು ಎಂದು ಸ್ಥಳೀಯರ ಅಭಿಪ್ರಾಯ ಆಗಿದೆ.

ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟ ಜುಬೇದಾ
ಒಟ್ಟಾರೆ ದಿನದಿಂದ ದಿನಕ್ಕೆ ಸಮಾಜದಲ್ಲಿ ಜನರು ಆತಂಕದಲ್ಲೇ ಬದುಕುವ ಸ್ಥಿತಿ ನಿರ್ಮಾಣ ಆಗಿದೆ. ಸ್ವಾರ್ಥ ಮನಸ್ಥಿತಿಗಳು ಹೆಚ್ಚಾಗುತ್ತಲೇ ಇವೆ. ಹಾಗಾಗಿ ನಾವೆಲ್ಲ ಭಾರತೀಯರು, ನಾವೆಲ್ಲ ಒಂದು ಎಂಬಂತಹ ವಿವಿಧತೆಯಲ್ಲಿ ಏಕತೆ ಇರಬೇಕಾದ ಮನಸ್ಥಿತಿ ಉಳ್ಳವರು ಪ್ರಸ್ತುತ ಸಮಾಜಕ್ಕೆ ಅತ್ಯಗತ್ಯವಾಗಿದೆ ಎನ್ನುವು ಜನರ ಅಭಿಪ್ರಾಯ ಆಗಿದೆ. ಇದರಂಯತೆಯೇ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಜುಬೇದಾ ಎನ್ನುವ ಮುಸ್ಲಿಂ ಮಹಿಳೆ ಜಾತಿ, ಧರ್ಮ ನೋಡದೇ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ದೇಶಕ್ಕೆ ಇಂತಹ ಮನಸ್ಥಿತಿ ಉಳ್ಳವರು ಬೇಕಾಗಿದೆ ಎಂದು ಜನರು ಅಭಿಪ್ರಯವನ್ನು ವ್ಯಕ್ತಪಡಿಸಿದ್ದಾರೆ.












Click it and Unblock the Notifications