Monsoon Rain: ಮಾಯದಂತ ಮಳೆಗೆ ತುಂಬಿದ ಮದಗದ ಕೆರೆ, ರೈತರ ಮೊಗದಲ್ಲಿ ಮಂದಹಾಸ
ಚಿಕ್ಕಮಗಳೂರು, ಜುಲೈ, 24: ಭಾರೀ ಮಳೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ನದಿ, ಹಳ್ಳ ಕೊಳ್ಳ, ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಾಗೆಯೇ ಜಿಲ್ಲೆಯ ಮಾಯದಂತ ಮಳೆ ಬಂತಣ್ಣ ಮದಗದ ಕೆರೆ ಈಗ ತುಂಬಿದ್ದು, ನೀರಿನ ಬವಣೆಯಿಂದ ಜನರನ್ನು ಪಾರು ಮಾಡಿದೆ.
ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಮದಗದ ಕೆರೆ 2036 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಈ ಬೃಹತ್ ಕೆರೆ ಮಳೆಯ ಕೊರತೆಯಿಂದ 15 ದಿನಗಳ ಹಿಂದೆ ಸಂಪೂರ್ಣ ಖಾಲಿಯಾಗಿತ್ತು. ಈಗ ಭಾರೀ ಮಳೆ ಹಿನ್ನೆಲೆ ಅರ್ಧಕ್ಕಿಂತ ಹೆಚ್ಚು ತುಂಬಿದೆ. ಇದರಿಂದ ಕೆರೆಯನ್ನೇ ನಂಬಿದ್ದ ಸುಮಾರು 34 ಹಳ್ಳಿಗಳ ಜನ-ಜಾನುವಾರುಗಳಿಗೆ ಜೀವ ಬಂದಾಂತಾಗಿದೆ.

ಮೈದುಂಬಿ ಹರಿಯುತ್ತಿರುವ ಕಲ್ಲತ್ತಿಗಿರಿ ಫಾಲ್ಸ್
ಹಾಗೆಯೇ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಫಾಲ್ಸ್ ಮೈದುಂಬಿ ಹರಿಯುವ ಮೂಲಕ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಹೀಗೆ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಲೆನಾಡ ಭಾಗದ ನದಿ, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. 15 ದಿನಗಳ ಕಲ್ಲತ್ತಿಗಿರಿ ಜಲಪಾತ ನೀರಿಲ್ಲದೆ ಬರಿದಾಗಿತ್ತು. ಇದೀಗ ಭಾರೀ ಮಳೆ ಹಿನ್ನೆಲೆ ಉಕ್ಕಿ ಹರಿಯುತ್ತಿದೆ.
ಬಡವರ ಊಟಿ ಎಂದೇ ಪ್ರಸಿದ್ಧಿ ಪಡೆದಿರುವ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮುಳ್ಳಯ್ಯನಗಿರಿಗೆ ಬರುವ ಪ್ರವಾಸಿಗರು ಕಲ್ಲತ್ತಿಗಿರಿ ಜಲಪಾತ ನೋಡದೆ ವಾಪಸ್ ಆಗುವುದಿಲ್ಲ. ಇಲ್ಲಿನ ಧುಮ್ಮಿಕ್ಕುತ್ತಿರುವ ಗುಡ್ಡದ ಕೆಸರು ಮಿಶ್ರಿತ ಕೆಸರು ಮಣ್ಣಿನ ನೀರಿನಲ್ಲೇ ಪ್ರವಾಸಿಗರ ಮೋಜು ಮಾಡುತ್ತಿದ್ದಾರೆ. ಭಾರೀ ಪ್ರಮಾಣದಲ್ಲಿ ಹರಿಯುತ್ತಿರುವ ನೀರಿನಲ್ಲಿ ಮಧ್ಯೆ ನಿಂತು ಪ್ರವಾಸಿಗನೊಬ್ಬ ಹುಚ್ಚಾಟ ಮೆರೆದಿರುವ ದೃಶ್ಯ ವೈರಲ್ ಆಗಿದೆ.
ಒಂದೇ ಸ್ಥಳದಲ್ಲಿ ಎರಡು ವಾಹನಗಳು ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಎರಡು ವಾಹನಗಳು ಪಲ್ಟಿಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಣಕಲ್ ಸಮೀಪದ ಹೇಮಾವತಿ ನದಿಗೆ ಸೇರುವ ಹಳ್ಳಕ್ಕೆ ಶಿಫ್ಟ್ ಹಾಗೂ ಪುತ್ತೂರಿನಿಂದ ಚಿಕ್ಕಮಗಳೂರಿಗೆ ಹೊರಟಿದ್ದ ಇನೋವಾ ಕಾರು ಪಲ್ಟಿಯಾಗಿವೆ. ಈ ವೇಳೆ ಎರಡು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.











Click it and Unblock the Notifications