ಸಿಎಂ ಇಷ್ಟೊಂದು ಪೌರುಷದ ಮಾತುಗಳನ್ನು ಆಡುವ ಅವಶ್ಯಕತೆ ಇಲ್ಲ:ಸಿಟಿ ರವಿ
Recommended Video

ಚಿಕ್ಕಮಗಳೂರು, ಸೆಪ್ಟೆಂಬರ್.20: ಸಿ.ಎಂ. ಕುಮಾರಸ್ವಾಮಿ ಹತಾಶರಾಗಿದ್ದಾರೆ. ದಂಗೆಗೆ ಕರೆ ಕೊಡುವ ಹೇಳಿಕೆ ಸಂವಿಧಾನ ಬಾಹಿರ ಹಾಗೂ ಖಂಡನೀಯ. ಕೂಡಲೇ ಅವರು ಕ್ಷಮೆ ಯಾಚಿಸಬೇಕು ಎಂದು ಶಾಸಕ ಸಿಟಿ ರವಿ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕುಮಾರಸ್ವಾಮಿ ನೈತಿಕ ದಾರಿಯಲ್ಲಿ ಮುಖ್ಯಮಂತ್ರಿ ಆಗಿಲ್ಲ. ಅಧಿಕಾರಕ್ಕಾಗಿ ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳುವವರು ಇಷ್ಟೊಂದು ಪೌರುಷದ ಮಾತುಗಳನ್ನು ಆಡುವ ಅವಶ್ಯಕತೆ ಇಲ್ಲ.
ಆಪರೇಷನ್, ಬಂಡಾಯ ನೀವು ಮಾಡದಿರುವ ಕೆಲಸ ಅಲ್ಲ. ನೀವು ಮಾಡಿದ್ರೆ ಪ್ರಜಾಪ್ರಭುತ್ವ ಮಾರ್ಗ. ಬೇರೆಯವರು ಮಾಡಿದ್ರೆ ಪ್ರಜಾಪ್ರಭುತ್ವ ವಿರೋಧಿ ಎನ್ನುವುದು ಸಿ.ಎಂ ದ್ವಂದ್ವ ನಿಲುವನ್ನು ತೋರಿಸುತ್ತದೆ.

ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಚಟುವಟಿಕೆ ಬಿಜೆಪಿ ನಡೆಸಿಲ್ಲ. ಆಂತರಿಕ ಕುಸಿತದಿಂದ ಸರ್ಕಾರ ಬಿದ್ರೆ ಉಳಿಸುವ ಜವಾಬ್ದಾರಿ ನಮ್ಮದಲ್ಲ ಎಂದು ಸಿಟಿ ರವಿ ಕಿಡಿಕಾರಿದರು.
ಕಾಂಗ್ರೆಸ್‌ನ ಕಾರ್ಯಕರ್ತರು ಹಠಾತ್ತನೆ ಇಂದು (ಸೆ.20)ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ನಿವಾಸದ ಮುಂದೆ ಪ್ರತಿಭಟನೆ ಮಾಡಿದರು. ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರ ನಿವಾಸಲ್ಲಿದ್ದ ಬಿಜೆಪಿಯ ಶಾಸಕರಾದ ರೇಣುಕಾಚಾರ್ಯ, ವಿಶ್ವನಾಥ, ರವಿಕುಮಾರ್ ಹಾಗೂ ಇನ್ನು ಕೆಲವರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ನಡೆಸಿದರು.
ಆಗ ಬಿಜೆಪಿ ಶಾಸಕ ವಿಶ್ವನಾಥ ಅವರು ಸುದ್ದಿಗಾರರ ಜೊತೆ ಮಾತನಾಡಿ, 'ಕುಮಾರಸ್ವಾಮಿ ಅವರು ಮಧ್ಯಾಹ್ನ ನಾನೇ ಧಂಗೆ ಏಳಲು ಕರೆ ನೀಡುತ್ತೇನೆ' ಎಂದು ಹೇಳಿಕೆ ಕೊಟ್ಟಿರುವ ಬೆನ್ನಲ್ಲೆ ಹೀಗೆ ನಡೆದಿದೆ. ಇದು ಸರ್ಕಾರವೇ ಗೂಂಡಾಗಿರಿ ಮಾಡಲು ಪ್ರೇರೇಪಿಸುತ್ತಿದೆ ಎಂದು ಆರೋಪಿಸಿದರು.












Click it and Unblock the Notifications