ಚಿಕ್ಕಮಗಳೂರು : ಬೆಂಗಳೂರಿಂದ ಚಾರಣಕ್ಕೆ ಬಂದಿದ್ದ ಯುವಕ ಶವವಾಗಿ ಪತ್ತೆ
ಚಿಕ್ಕಮಗಳೂರು, ಡಿಸೆಂಬರ್ 10; ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಪ್ರವಾಸಿ ತಾಣ ರಾಣಿಝರಿ ಬಳಿಯಲ್ಲಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಶನಿವಾರ ಕತ್ತಲಾದ ಹಿನ್ನೆಲೆ ಮೃತದೇಹವನ್ನು ಮೇಲೆತ್ತುವ ಕಾರ್ಯಚರಣೆ ಸ್ಥಗಿತಗೊಳಿಸಲಾಗಿದೆ. ಪ್ರಪಾತದಲ್ಲಿ ಬಿದ್ದಿರುವ ಮೃತದೇಹವನ್ನು ಭಾನುವಾರ ಮೇಲೆ ತರಲಾಗುತ್ತದೆ.
ರಾಣಿಝರಿ ಬಳಿಯ ಬೆಟ್ಟವೊಂದರಿಂದ ಸುಮಾರು 3 ಸಾವಿರ ಅಡಿ ಆಳಕ್ಕೆ ಬಿದ್ದು ಯುವಕ ಭರತ್ (30) ಮೃತಪಟ್ಟಿದ್ದಾನೆ. ಯುವಕ ಬೆಟ್ಟದಿಂದ ಪ್ರಪಾತಕ್ಕೆ ನಗೆದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.

ಬೆಂಗಳೂರು ಮೂಲದ ಭರತ್ ಸಾವನ್ನಪ್ಪಿರುವ ಯುವಕ. ಡಿಸೆಂಬರ್ 6 ರಂದು ಬೆಂಗಳೂರಿನಿಂದ ದುರ್ಗದಹಳ್ಳಿ ಸಮೀಪದ ರಾಣಿಝರಿಗೆ ಟ್ರಕ್ಕಿಂಗ್ ಬಂದಿದ್ದ ಭರತ್ ನಾಪತ್ತೆಯಾಗಿದ್ದ. ಕುಟುಂಬದವರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮೊಬೈಲ್ ನಾಟ್ ರೀಚಬಲ್ ಆಗಿತ್ತು. ರಾಣಿಝರಿ ಬಳಿ ಯುವಕನ ಬೈಕ್ ನಿಲ್ಲಿಸಲಾಗಿತ್ತು.
ಬೈಕ್ ಬಳಿ ಐಡಿ ಕಾರ್ಡ್ ಪತ್ತೆ; ಭರತ್ ನಿಲ್ಲಿಸಿದ್ದ ಬೈಕ್ ಬಳಿಯಲ್ಲಿ ಮೊಬೈಲ್, ಟೀ ಶರ್ಟ್, ಚಪ್ಪಲಿ ಸಿಕ್ಕಿದ್ದವು. ಬೈಕ್‌ಗೆ ಐಡಿ ಕಾರ್ಡ್ ಮತ್ತು ಬ್ಯಾಗ್ ಸಿಕ್ಕಿಸಿ ನಾಪತ್ತೆಯಾಗಿದ್ದ. ಶುಕ್ರವಾರ ಬೆಂಗಳೂರಿನಿಂದ ಅವರ ಕುಟುಂಬದವರು ಆಗಮಿಸಿದ್ದರು. ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಶನಿವಾರ ಬೆಳಗ್ಗೆಯಿಂದ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗಿತ್ತು.
ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಧರ್ಮಸ್ಥಳ ವಿಪತ್ತು ನಿರ್ವಹಣ ತಂಡ, ಬಣಕಲ್ ಸಮಾಜ ಸೇವಕ ಆರೀಫ್ ಮತ್ತು ಅವರ ಸ್ನೇಹಿತರು ಶೋಧ ಕಾರ್ಯದಲ್ಲಿ ತೊಡಗಿದ್ದರು. ಡ್ರೋಣ್ ಕ್ಯಾಮರಾಗಳನ್ನು ಬಳಸಿಯೂ ಶೋಧ ನಡೆಸಲಾಗಿತ್ತು.
ಶನಿವಾರ ಮಧ್ಯಾಹ್ನದ ಹೊತ್ತಿಗೆ ಯುವಕ ಭರತ್ ಶವ ಪ್ರಪಾತದಲ್ಲಿ ಪತ್ತೆಯಾಗಿದೆ. ಶೋಧ ಕಾರ್ಯ ನಡೆಸುತ್ತಿದ್ದ ತಂಡದ ಸುಮಾರು 25 ಮಂದಿ ಮೈದಾಡಿ ಕಡೆಯಿಂದ ಬೆಟ್ಟವನ್ನು ಇಳಿದು ಬೆಳ್ತಂಗಡಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಶವವನ್ನು ಪತ್ತೆ ಹಚ್ಚಿದೆ.
ಸುಮಾರು 4 ಸಾವಿರ ಅಡಿಯಿಂದ ಯುವಕ ಕೆಳಗೆ ಬಿದ್ದಿದ್ದು, ಆತನ ದೇಹ ಛಿದ್ರವಾಗಿದೆ. ಶನಿವಾರ ಕತ್ತಲಾದ ಹಿನ್ನಲೆ ಪ್ರಪಾತದಲ್ಲಿ ಇಳಿದು ಮೃತದೇಹ ಹೊರತರಲು ಕಷ್ಟ ಎಂದು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಭಾನುವಾರ ಮೃತದೇಹವನ್ನು ಮೇಲಕ್ಕೆ ತರಲಾಗುತ್ತದೆ.












Click it and Unblock the Notifications