ಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ಮೂಲಕ ಕೊಳಕು ನಿವಾರಣೆಯಾಗಿದೆ-ಬೈರತಿ ಸುರೇಶ್
ಚಿಕ್ಕಮಗಳೂರು, ಜೂನ್ 08: ಜಿಲ್ಲೆಯ ಜನತೆ ಬಿಜೆಪಿಯ ಐದು ಜನ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಕೊಳಕು ನಿವಾರಣೆ ಮಾಡಿದ್ದೀರಾ ಎಂದು ನಗರಾಭಿವೃದ್ದಿ ಮತ್ತು ನಗರ ಯೋಜನೆ ಇಲಾಖೆ ಸಚಿವ ಬೈರತಿ ಸುರೇಶ್ ಹೇಳಿದರು.
ಚಿಕ್ಕಮಗಳೂರು ನಗರದ ಕನಕ ಭವನದಲ್ಲಿ ಜಿಲ್ಲಾ ಕುರುಬರ ಸಂಘದಿಂದ ಏರ್ಪಡಿಸಿದ್ದ ಜಿಲ್ಲೆಯ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಿಟಿ.ರವಿ ಅವರು ದರ್ಪದಿಂದ ನೂರು ಜನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಂದರು ಸೋಲಿಸಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಕ್ಷೇತ್ರದ ಜನತೆ ಸಿ.ಟಿ.ರವಿಯನ್ನು ಸೋಲಿಸಿ, ಎಚ್.ಡಿ.ತಮ್ಮಯ್ಯ ಅವರನ್ನು ಗೆಲ್ಲಿಸುವ ಮೂಲಕ ದೊಡ್ಡ ನಾಯಕರ ಬಗ್ಗೆ ಮಾತನಾಡಿದರೇ ಏನಾಗುತ್ತದೆ ಎಂದು ಸಿ.ಟಿ.ರವಿಗೆ ತೋರಿಸಿಕೊಟ್ಟಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ಕುರುಬ ಸಮುದಾಯಕ್ಕೆ ಮಾತ್ರ ಸೀಮಿತರಾದವರಲ್ಲ. ರಾಜ್ಯದ ಎಲ್ಲಾ ಸಮುದಾಯಗಳ ನಾಯಕರು. ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಸಾಗರೋಪಾದಿಯಾಗಿ ಜನರು ಹರಿದು ಬಂದಿದ್ದು ದೊಡ್ಡ ಇತಿಹಾಸ ಸೃಷ್ಟಿಯಾಗಿದೆ ಎಂದು ಹೇಳಿದರು.
ಬಿಜೆಪಿ ಪಕ್ಷದವರು ಜಾತಿ ಮಧ್ಯೆ ವಿಷಬೀಜ ಬಿತ್ತಿ ರಾಜಕಾರಣ ಮಾಡುವವರು. ಜನರ ಬದುಕಿನ ಬಗ್ಗೆ ಕಾಳಜಿ ಹೊಂದಿರುವ ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ನೀಡಿದ್ದು, ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲಿದೆ. ಜಿಲ್ಲೆ ಐದು ಶಾಸಕರನ್ನು ನೀಡಿದ್ದು, ಇಲ್ಲಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ದಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ರಾಜ್ಯ ದೇಶಕಂಡ ಪ್ರಾಮಾಣಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನನಗೆ ಟಿಕೆಟ್ ಕೊಟ್ಟು ನನ್ನನ್ನೂ ವಿಧಾನಸೌದಕ್ಕೆ ಕಳಸಿ ಸಿ.ಟಿ.ರವಿ ಮನೆಗೆ ಕಳಿಸಿ ಎಂದು ಹೇಳಿದ್ದರು. ಇಂದು ಅವರ ಆಶೀರ್ವಾದದ ಜೊತೆಗೆ ಜನರ ಬೆಂಬಲದಿಂದ ಶಾಸಕನಾಗಿಸಿದ್ದು ಅದೇ ರೀತಿ ಸಿದ್ದರಾಮಯ್ಯನವರ ಮಾನಸಪುತ್ರರೆಂದೆ ಹೆಸರುಗಳಿಸಿರುವ ಸಚಿವ ಭೈರತಿ ಸುರೇಶ್ ಅವರು ನನ್ನ ಕ್ಷೇತ್ರದ ಅಭಿವೃದ್ಧಿಗೆ ನನ್ನೊಂದಿಗೆ ಸಹಕರಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಜನ ಈ ಚುನಾವಣೆಯಲ್ಲಿ ಮತ ನೀಡಿದ್ದು, ವಿಶೇಷವಾಗಿ ಮುಸ್ಲಿಂ ಹಾಗೂ ಕುರುಬ ಸಮುದಾಯ ನನ್ನ ಕೈ ಹಿಡಿದು ಆಶೀರ್ವಾದ ಮಾಡಿದ ಫಲವಾಗಿ ಶಾಸಕನಾಗಿದ್ದೇನೆ. ಜನರ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೂತನ ಶಾಸಕರು ಮತ್ತು ಸಚಿವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಶಾಸಕ ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ್, ಕೆ.ಎಸ್.ಆನಂದ್, ಕೆ.ಪಿ.ಸಿ.ಸಿ. ಮಹಿಳಾ ವಿಭಾಗದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಶಾಂತೇಗೌಡ, ಕುರುಬರ ಸಂಘದ ರಾಜ್ಯ ನಿರ್ದೇಶಕ ಡಿ.ಸಿ.ಪುಟ್ಟೇಗೌಡ, ಸಿ.ಡಿ.ಎ. ಮಾಜಿ ಅಧ್ಯಕ್ಷ ಡಿ.ಎಸ್.ಚಂದ್ರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಕೆ.ವಿ..ಮಂಜುನಾಥ್, ಭದ್ರೇಗೌಡ, ಎ.ಎನ್.ಮಹೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.












Click it and Unblock the Notifications