Mansoon rain: ಚಿಕ್ಕಮಗಳೂರಿನಲ್ಲಿ ಪ್ರಾಕೃತಿಕ ಅವಘಡಗಳ ನಿಯಂತ್ರಣ ಕುರಿತು ಸಭೆ, ಮುಂಜಾಗ್ರತಾ ಕ್ರಮಗಳ ವಿವರ ಇಲ್ಲಿದೆ
ಚಿಕ್ಕಮಗಳೂರು, ಜೂನ್, 02: ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ನೀಡಲಿದೆ. ಆದ್ದರಿಂದ ಈಗಾಗಲೇ ಜಿಲ್ಲಾವಾರು ಮುಂಜಾಗ್ರತಾ ಕ್ರಮ ಕೈಗೊಳ್ಳುಲು ಅಧಿಕಾರಿಗಳು ಮುಂದಾಗಿದ್ದಾರೆ. ಅದೇ ರೀತಿ ಚಿಕ್ಕಮಗಳೂರಿನಲ್ಲಿಯೂ ಪ್ರಾಕೃತಿಕ ಅವಘಡಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಹಾಗಾದರೆ ಸಭೆಯಲ್ಲಿ ಏನೆಲ್ಲ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಜಿಲ್ಲಾದ್ಯಂತ ಮಳೆಯಿಂದಾದ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡಿದರೇ ಸಿಎಂ ಬಳಿ ಚರ್ಚಿಸಿ ಶೀಘ್ರ ಪರಿಹಾರ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.

ಶೃಂಗೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಗೆ ಒಳಪಟ್ಟಿರುವ ಚಿಕ್ಕಮಗಳೂರು ತಾಲೂಕಿನ ಕೆಲ ಗ್ರಾಮಗಳಿಗೆ ಸಂಬಂಧಿಸಿದಂತೆ ತಾಲೂಕು ಪಂಚಾಯತ್ ಕಚೇರಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಗುರುವಾರ ಪ್ರಾಕೃತಿಕ ಅವಘಡಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದಲ್ಲಿ ಸಾರ್ವಜನಿಕರ ಆಸ್ತಿಗಳೂ ಸೇರಿದಂತೆ ಬೆಳೆ, ಪ್ರಾಣ ಹಾನಿ ಸಂಭವಿಸಿವೆ. ಈ ಬಾರಿ ಮುಂಗಾರು ಪೂರ್ವದಲ್ಲೂ ಭಾರೀ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದ್ದು, ಮುಂಗಾರು ಆರಂಭಕ್ಕೂ ಮುನ್ನ ಸಂಬಂಧಿಸಿದ ಇಲಾಖಾಧಿಕಾರಿಗಳು ಪ್ರಾಕೃತಿಕ ಅವಘಡಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕಿದೆ ಎಂದರು.
ಮಳೆ, ಗಾಳಿಯಿಂದಾಗುವ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಶೃಂಗೇರಿ ಕ್ಷೇತ್ರದಲ್ಲಿ ಈಗಾಗಲೇ ವಾರ್ ಟೀಮ್ ರಚಿಸಲಾಗಿದೆ. ತುರ್ತು ಪರಿಹಾರ ಕ್ರಮಗಳಿಗಾಗಿ 30-40 ಲಕ್ಷ ರೂಪಾಯಿ ಅನುದಾನವನ್ನು ಮೀಸಲಿಡಲಾಗಿದೆ. ಅಲ್ಲದೇ ಪ್ರಾಕೃತಿಕ ಅವಘಡಗಳನ್ನು ಎದುರಿಸಲು ಅಗತ್ಯವಿರುವ ಗಂಜಿ ಕೇಂದ್ರ, ಬೋಟ್‍ಗಳು, ಮುಳುಗುತಜ್ಞರು, ರೋಪ್, ಕಟಿಂಗ್ ಮಿಶನ್, ಲೈಫ್ ಜಾಕೆಟ್, ಜೆಸಿಬಿ, ಹಿಟಾಚಿ ಸೇರಿದಂತೆ ಲಭ್ಯ ಇರುವ ಅಗತ್ಯ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ಇರುವ ಕೈಪಿಡಿಯನ್ನೂ ಸಿದ್ಧಪಡಿಸಲಾಗಿದೆ.
ಅಲ್ಲದೆ ಚಿಕ್ಕಮಗಳೂರು ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳೂ ಇದೇ ಮಾದರಿಯ ಮಾಹಿತಿ ಕೈಪಿಡಿಯನ್ನು ಸಿದ್ಧಪಡಿಸಬೇಕು. ಕೈಪಿಡಿಯಲ್ಲಿ ರಕ್ಷಣಾ ತಂಡಗಳ ಮಾಹಿತಿ, ಮೊಬೈಲ್ ಸಂಖ್ಯೆ ಎಲ್ಲವನ್ನೂ ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಆಲ್ದೂರು ಅರಣ್ಯ ವಲಯದ ಆರ್‍ಎಫ್‍ಇ ಹರೀಶ್ ಮಾತನಾಡಿ, ಮಳೆ ಹಾನಿ, ಪರಿಹಾರ ಕ್ರಮಗಳಿಗಾಗಿ ಈಗಾಗಲೇ ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಲಾಗಿದೆ. ಈ ತಂಡ 24*7 ಕಾರ್ಯನಿರ್ವಹಿಸಲಿದೆ. ಇಲಾಖೆಯಿಂದ ರೈತರಿಗೆ 25 ಸಾವಿರ ಗಿಡ ವಿತರಣೆಗೆ ವಿವಿಧ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕ ರಾಜೇಗೌಡ ಮಾತನಾಡಿ, ಮನೆ ಸಮೀಪದಲ್ಲಿರುವ ಮರಗಳು ಬೀಳುವ ಹಂತದಲ್ಲಿದ್ದರೇ ಅಂತಹ ಮರಗಳನ್ನು ತೆರವು ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನಿನ ನೆಪ ಹೇಳಿ ಅಡ್ಡಿ ಮಾಡಬಾರದು. ಭಾರೀ ಗಾಳಿ, ಮಳೆಗೆ ಬೀಳುವ ಹಂತದಲ್ಲಿರುವ ಮರಗಳ ತೆರವಿಗೆ ಸಾರ್ವಜನಿಕರು ಮನವಿ ಮಾಡಿದರೇ ಯಾವುದೇ ನೆಪ ಹೇಳದೇ ತೆರವು ಮಾಡಬೇಕು ಎಂದು ಸೂಚಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಕುಮಾರ್ ಮಾತನಾಡಿ, ಕಳೆದ ಮಳೆಗಾಲದಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶಗಳನ್ನು ಗುರುತಿ, ಹಾಗೆಯೆ ಭೂಕುಸಿತ ಸಂಭವಿಸುವ ಸಾಧ್ಯತೆ ಇದ್ದಲ್ಲಿ ಮರಳಿನ ಚೀಲಗಳ ಮೂಲಕ ತಡೆಗೋಡೆ ನಿರ್ಮಿಸಲು ತಯಾರಿ ಮಾಡಲಾಗಿದೆ. ಕೆರೆ ಕಟ್ಟೆಗಳಲ್ಲಿ ಬಿರುಕು ಇದ್ದಲ್ಲಿ ಮರಳಿನ ಚೀಲದ ಮೂಲಕ ಕೆರೆ ಒಡೆಯದಂತೆ ಕ್ರಮವಹಿಸಲಾಗುವುದು. ಈ ಹಿಂದೆ ರಸ್ತೆ ಕುಸಿತವಾಗಿದ್ದ ಸ್ಥಳಗಳಲ್ಲೂ ಈ ಬಾರಿ ನಿಗಾ ವಹಿಸಲಾಗುತ್ತಿದೆ ಎಂದರು.
ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಚರಣ್‍ರಾಜ್ ಮಾತನಾಡಿ, ತಾಲೂಕಿನಲ್ಲಿ 394 ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ 34 ಅಂಗನವಾಡಿ ಕೇಂದ್ರಗಳು ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿವೆ. 45 ಅಂಗನವಾಡಿಗಳು ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿದ್ದು, ಮಳೆಗಾಳಿ ಸಂದರ್ಭದಲ್ಲಿ ಮಕ್ಕಳ ಸಂರಕ್ಷಣೆ ಹೇಗೆ ಮಾಡಬೇಕೆಂದು ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಶಿಥಿಲ ಅಂಗನವಾಡಿ ಕಟ್ಟಡಗಳನ್ನು ದುರಸ್ತಿ ಮಾಡಲಾಗಿದೆ. ಮತ್ತು ಮಕ್ಕಳ ಸುರಕ್ಷತೆಗೆ ಒತ್ತು ನೀಡಲಾಗಿದೆ ಎಂದರು.
ಕೃಷಿ ಅಧಿಕಾರಿ ಸುರೇಶ್ ಮಾತನಾಡಿ, ಖಾಂಡ್ಯ ಹೋಬಳಿಯಲ್ಲಿ ಭಾರೀ ಮಳೆಯಿಂದಾಗಿ ಭತ್ತದ ಗದ್ದೆಗಳಿಗೆ ಹಾನಿಯಾಗಿದ್ದು, ವರದಿ ಸಿದ್ಧಪಡಿಸಲಾಗಿದೆ. ಉಳಿದಂತೆ ಬಿತ್ತನೆ ಬೀಜ, ರಸಗೊಬ್ಬರಗಳ ದಾಸ್ತಾನು ಮಾಡಲಾಗಿದ್ದು, ಸದ್ಯ 1200 ಟನ್ ಗೊಬ್ಬರ ದಾಸ್ತಾನು ಇದೆ ಎಂದರು.
ಸಭೆಯಲ್ಲಿ ಪಶುಸಂಗೋಪನೆ, ಮೆಸ್ಕಾಂ, ಕೆಪಿಟಿಸಿಎಲ್, ನೀರು ಸರಬರಾಜು, ಆರೋಗ್ಯ, ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳು ಮಳೆ ಹಾನಿ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ತಾಲೂಕು ಪಂಚಾಯತಿ ಇಒ ತಾರಾನಾಥ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಇಂಜಿನಿಯರ್ ವಿನಾಯಕ ಹುಲ್ಲೂರ ಸೇರಿದಂತೆ ಮತ್ತತರರು ಉಪಸ್ಥಿತರಿದ್ದರು.












Click it and Unblock the Notifications