Gram Panchayat; ಪಂಚಾಯಿತಿಗೆ ಜೆಸಿಬಿ ತಂದ ಮಾಲೀಕ, ಇದೆಂಥ ಪ್ರತಿಭಟನೆ
ಚಿಕ್ಕಮಗಳೂರು, ನವೆಂಬರ್ 22: ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾಡಿದ ಕೆಲಸಕ್ಕೆ ಬಿಲ್ ನೀಡದ ಹಿನ್ನೆಲೆ ಯುವಕನೊಬ್ಬ ಗ್ರಾಮ ಪಂಚಾಯತಿ ಕಛೇರಿಗೆ ಜೆಸಿಬಿಯೊಂದಿಗೆ ಬಂದು, ಜೆಸಿಬಿ ಮುಂದೆ ಕುಳಿತು ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಗ್ರಾಮದಲ್ಲಿ ನಡೆದಿದೆ.
ವಸ್ತಾರೆ ಗ್ರಾಮದ ಯುವಕ ಪವನ್ ಬದುಕಿಗಾಗಿ ಜೆಸಿಬಿ ಇಟ್ಟುಕೊಂಡಿದ್ದಾರೆ. ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓ ಯಾವುದೇ ವರ್ಕ್ ಆರ್ಡರ್ ನೀಡದೆ ನಾವಿದ್ದೇವೆ ಕೆಲಸ ಮಾಡು ಎಂದು ಹೇಳಿ ಹಳ್ಳಿ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ಕ್ಲೀನ್ ಮಾಡಿಸಿದ್ದರು.

ಜೆಸಿಬಿ ಇಟ್ಟುಕೊಂಡಿರುವ ಪವನ್ ಗಂಟೆಗೆ 1 ಸಾವಿರದಂತೆ 56 ಗಂಟೆ ಕೆಲಸ ಮಾಡಿದ್ದ. ಆತ ಕೆಲಸ ಮಾಡಿರುವ ಎಲ್ಲಾ ವಿಡಿಯೋ ಹಾಗೂ ಫೋಟೋಗಳು ಆತನ ಬಳಿ ಇವೆ. ಈ ಜನರಲ್ ಬಾಡಿ ಮೀಟಿಂಗ್‌ನಲ್ಲಿ ಕೆಲಸದ ಮಾಹಿತಿ ಇಟ್ಟು ಬಿಲ್ ಪಾಸ್ ಮಾಡಿ ಹಣ ಕೊಡುತ್ತೇವೆ ಎಂದು ಪಂಚಾಯಿತಿ ಅಧಿಕಾರಿಗಳು ಹೇಳಿ ಎರಡು ವರ್ಷ ಕಳೆದಿದೆ, ಹಣ ಮಾತ್ರ ಬಂದಿಲ್ಲ.
ಯುವಕನ 45 ಸಾವಿರ ಬಿಲ್ ಬರುವುದರಲ್ಲಿ ಇಬ್ಬರು ಪಿಡಿಓ ಹಾಗೂ ಮೂವರು ಅಧ್ಯಕ್ಷರೇ ಬದಲಾಗಿದ್ದಾರೆ. ಆತನಿಗೆ ಹಣ ಮಾತ್ರ ಬಂದಿಲ್ಲ. ಈ ಹಿಂದೆ ಪಿಡಿಓ ಇಲ್ಲದ ಕಾರಣ ಪಂಚಾಯಿತಿಯ ಕಾರ್ಯದರ್ಶಿಯನ್ನೇ ಪ್ರಭಾರಿಯಾಗಿ ಹಾಕಲಾಗಿತ್ತು. ಆಗಿನಿಂದಲೂ ಈ ಯುವಕ ಬಿಲ್ ನೀಡಿ ಎಂದು ಕೇಳುತ್ತಿದ್ದಾನೆ. ಆದರೆ ಪಂಚಾಯಿತಿ ಹಣ ಮಾತ್ರ ನೀಡಿಲ್ಲ.
9 ಸಾವಿರ ಕೊಟ್ಟಿದ್ದಾರೆ; 45 ಸಾವಿರ ಹಣದಲ್ಲಿ ಹಿಂದಿನ ಪಿಡಿಓ ಹಾಗೂ ಅಧ್ಯಕ್ಷರು ಚೆಕ್ ಮೂಲಕ 9 ಸಾವಿರ ಹಣ ನೀಡಿದ್ದಾರೆ. ಉಳಿದ ಹಣಕ್ಕಾಗಿ ವರ್ಷಗಳಿಂದ ಅಲೆದಾಟ ನಡೆಸುತ್ತಿದ್ದಾನೆ. ಈಗ ಬೇರೆ ಪಿಡಿಓ ಬಂದಿದ್ದಾರೆ, ಅವರಿಗೆ ಹಣ ಕೇಳಿದರೆ ವರ್ಕ್ ಆರ್ಡರ್ ಕೊಡಿ ಹಣ ಕೊಡುತ್ತೀನಿ ಎಂದು ಹೇಳುತ್ತಿದ್ದಾರೆ. ಆದರೆ ಹಿಂದಿನ ಪಿಡಿಒ ಹಾಗೂ ಅಧ್ಯಕ್ಷರು ಬಾಯಿ ಮಾತಿನಲ್ಲಿ ನಾವಿದ್ದೇವೆ ಅಂತ ಹೇಳಿ ಕೆಲಸ ಮಾಡಿಸಿದ್ದಾರೆ. ಯಾವುದೇ ವರ್ಕ್ ಆರ್ಡರ್ ಕೊಟಿಲ್ಲ. ಅಧ್ಯಕ್ಷರು ಹಾಗೂ ಪಿಡಿಒ ಅವರೇ ಹೇಳಿದ್ದಾರೆ ಎಂದು ಕೆಲಸ ಮಾಡಿದ್ದಾರೆ. ಆದರೆ ಹಣ ಮಾತ್ರ ಸಿಕ್ಕಿಲ್ಲ.
ಕೆಲಸ ಮಾಡಿ ಬಾಕಿ ಹಣಕ್ಕಾಗಿ ಯುವಕ ಪಂಚಾಯಿತಿಗೆ ಅಲೆಯುತ್ತಿದ್ದಾನೆ. ಆದರೆ ಹಣ ಕೊಡುವವರು ಯಾರು? ಎಂಬುದು ಇನ್ನೂ ತೀರ್ಮಾನವಾಗಿಲ್ಲ. ವರ್ಕ್ ಆರ್ಡರ್ ಕೊಟ್ಟರೆ ಹಣ ಕೊಡುವೆ ಎಂದು ಹೇಳುತ್ತಿದ್ದಾರೆ. ಆದರೆ ಆತನ ಬಳಿ ವರ್ಕ್ ಆರ್ಡರ್ ಇಲ್ಲ. ಮೇಲ್ನೋಟಕ್ಕೆ ಇದು ಹಿಂದಿನ ಅಧ್ಯಕ್ಷರು ಹಾಗೂ ಹಿಂದಿನ ಪಿಡಿಒ ಕೆಲಸ ಮಾಡಿಸಿ ಹಣವನ್ನು ನೀಡಿದೆ ಗುಳಂ ಮಾಡಿರುವಂತಿದೆ. ಮೇಲಾಧಿಕಾರಿಗಳ ಸೂಕ್ತ ತನಿಖೆಯಿಂದ ಯುವಕನಿಗೆ ನ್ಯಾಯ ಸಿಗಬೇಕಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡ ನಾನಾ ಯೋಜನೆ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಹಣ ನೀಡುತ್ತಿದೆ. ಆದರೆ ಆ ಹಣದಿಂದ ನಿಜಕ್ಕೂ ಹಳ್ಳಿಗಳು ಅಭಿವೃದ್ಧಿ ಆಗುತ್ತಿದೆಯೇ? ಎನ್ನುವ ಪ್ರಶ್ನೆ ಮೂಡಿದೆ.
ಹಲವು ಪಂಚಾಯಿತಿಗಳಲ್ಲಿ ಕೆಲಸವೇ ಇಲ್ಲದೆ ಬಿಲ್ ಪಾಸ್ ಆಗುತ್ತದೆ. ಆದರೆ ಇಲ್ಲಿ ಕೆಲಸ ಮಾಡಿಯೂ ಸಹ ಬಿಲ್ ನೀಡಿಲ್ಲ. 9 ಸಾವಿರ ಕೊಟ್ಟಿದ್ದಾರೆ. ಉಳಿದ ಹಣ ಏನಾಯ್ತು?., ಕೆಲಸ ಮಾಡಿದವನಿಗೆ ಹಣ ಏಕೆ ನೀಡಿಲ್ಲ ಎಂಬುದಕ್ಕೆ ಅಧಿಕಾರಿಗಳೇ ಉತ್ತರಿಸಬೇಕಿದೆ.












Click it and Unblock the Notifications