Madagada kere: ಬರದ ನಡುವೆಯೂ ತುಂಬಿ ಹರಿಯುತ್ತಿರುವ ಇತಿಹಾಸ ಪ್ರಸಿದ್ಧ ಮದಗದ ಕೆರೆಗೆ ಬಾಗಿನ ಅರ್ಪಣೆ
ಚಿಕ್ಕಮಗಳೂರು, ಅಕ್ಟೋಬರ್, 05: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಮದಗದ ಕೆರೆ ಬರದ ನಡುವೆಯೂ ತುಂಬಿ ಹರಿಯುತ್ತಿದ್ದು, ಸಾವಿರಾರು ರೈತರಲ್ಲಿ ಮಂದಹಾಸ ಮೂಡಿಸಿದೆ.
ಪಶ್ಚಿಮಘಟ್ಟಗಳ ಸಾಲಿನಲ್ಲಿ ಸುರಿದ ಸಾಧಾರಣ ಮಳೆಗೆ ಮತ್ತೊಮ್ಮೆ ಕೆರೆ ಭರ್ತಿಯಾಗಿದ್ದು, ಕೆರೆ ತುಂಬಿ ಕೋಡಿ ಬಿದ್ದಿದೆ. ಈ ಕೆರೆ ತುಂಬಿರುವುದರಿಂದ ಸುತ್ತಮುತ್ತಲಿನ 23 ಹಳ್ಳಿಯ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಸರೆಯಾದಂತಾಗಿದೆ. ಹೊಲಗದ್ದೆ-ತೋಟ ಹಾಗೂ ಬೋರ್ಗಳಿಗೆ ಚೈತನ್ಯ ಬಂದಂತಾಗಿದೆ.

ಕೆರೆಗೆ ನೀರು ಬಂದಿರುವುದರಿಂದ ಸುತ್ತಮುತ್ತಲಿನ ಸಾವಿರಾರು ಎಕರೆ ತೋಟಗಳಿಗೆ ನೀರಿನ ಸಮಸ್ಯೆ ನೀಗಿದಂತಾಗಿದೆ. ಇಲ್ಲಿ ಕೋಡಿ ಬಿದ್ದ ನೀರು ವೇದಾವತಿ ನದಿ ಸೇರಿ ಚಿತ್ರದುರ್ಗ ಜಿಲ್ಲೆಯ ಮಾರಿಕಣಿವೆ ಡ್ಯಾಂ ಸೇರಲಿದೆ. ಸುಮಾರು 2 ಸಾವಿರ ಎಕರೆ ವಿಸ್ತೀರ್ಣ, 80 ಅಡಿ ಆಳದ ಬೃಹತ್ ಕೆರೆ ತುಂಬಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಇನ್ನು ಕೆರೆ ಭರ್ತಿಯಾದ ಹಿನ್ನೆಲೆ ಕಡೂರು ಶಾಸಕ ಕೆ.ಎಸ್.ಆನಂದ್ ನೇತೃತ್ವದಲ್ಲಿ ಇಂದು ಕೆರೆಗೆ ಬಾಗಿನ ಅರ್ಪಿಸಲಾಯ್ತು. ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಕೆರೆಗೆ ಬಾಗಿನ ಅರ್ಪಿಸಿದರು. ಬರದ ನಡುವೆಯೂ ಅದರಲ್ಲೂ ಬರದ ತಾಲೂಕು ಕಡೂರಿನಲ್ಲಿರುವ ಕೆರೆ ತುಂಬಿರುವುದು ಸಾವಿರಾರು ರೈತರಲ್ಲಿ ಹರ್ಷ ಮನೆ ಮಾಡಿದೆ.
ತಾಯಿ ಕೆಂಚಮ್ಮನವರಿಗೆ ಪೂಜೆ ಸಲ್ಲಿಸಿ ಮದಗದ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಕಡೂರು ಶಾಸಕ ಕೆ. ಎಸ್. ಆನಂದ್, ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ ಎಂಬ ಇತಿಹಾಸವನ್ನು ಹೊಂದಿರುವುದು ಈ ಕೆರೆಯೇ. ಬರದ ಛಾಯೆಯ ನಡುವೆಯೂ ಈ ಕೆರೆ ತುಂಬಿರುವುದರಿಂದ ಸುತ್ತಮುತ್ತಲಿನ 23 ಹಳ್ಳಿಯ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಸರೆಯಾದಂತಾಗಿದೆ. ಅಲ್ಲದೆ ಹೊಲಗದ್ದೆ-ತೋಟ ಹಾಗೂ ಬೋರ್‌ವೆಲ್‌ಗಳಿಗೆ ಚೈತನ್ಯ ಬಂದಂತಾಗಿದೆ. ಎಂದರು.
ಕೆರೆಗೆ ನೀರು ಬಂದಿರೋದರಿಂದ ಸುತ್ತಮುತ್ತಲಿನ ಸಾವಿರಾರು ಎಕರೆ ತೋಟಗಳಿಗೆ ನೀರಿನ ಸಮಸ್ಯೆ ನೀಗಿದಂತಾಗಿದೆ. ಕಳೆದ ವರ್ಷದಲ್ಲಿ ಕೆರೆಗೆ ಬಾಗಿನ ಕೊಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಶಿಷ್ಟಾಚಾರದಿಂದ ಮತ್ತು ಶಿಸ್ತಿನಿಂದ ಎಲ್ಲರೂ ಕೂಡಿ ಸಂತೋಷವಾಗಿ ಬಾಗಿನವನ್ನು ಕೊಟ್ಟಿದ್ದೇವೆ ಎಂದರು. ಕೆರೆಯ ಕೋಡಿ ಬಿದ್ದ ನೀರು ಹರಿದರೆ ರೈತರ ಸಂಕಷ್ಟವನ್ನು ಪರಿಹರಿಸಲು ಸಹಕಾರವಾಗುತ್ತದೆ. ಬರ ಛಾಯೆ ಇರುವುದರಿಂದ ಕುಡಿಯುವ ನೀರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಟಾಸ್ಕ್ ಫೋರ್ಸ್ ಸಭೆಯನ್ನು ಕರೆದು ಅದನ್ನ ಪರಿಹರಿಸಲಾಗುವುದು ಎಂದರು.
ಮದಗದ ಕೆರೆಗೆ ಕೋಡಿ ಬಿದ್ದ ಹಿನ್ನೆಲೆ ಹರ್ಷ ವ್ಯಕ್ತಪಡಿಸಿದ ಸ್ಥಳೀಯ ರೈತರುಗಳು ಈ ಭೂಭಾಗದ ಜನರ ಜೀವನಾಡಿ ಈ ಮಗದದಕೆರೆ. ಕೆ.ಆರ್.ಎಸ್ ಕಾವೇರಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆ ಈ ಕೆರೆಗೂ ಕೂಡ ಇದೆ. ಜಿಲ್ಲೆಯಲ್ಲಿ ನೂರಾರು ಗ್ರಾಮಗಳಿಗೆ ನೀರಿನ ಕೊರತೆ ನೀಗಿಸುವ ಜೊತೆಗೆ ಸಮೃದ್ಧ ಕೃಷಿ ಚಟುವಟಿಕೆಗೆ ಅವಕಾಶ ಲಭಿಸಲಿದೆ ಎಂದರು. ಇನ್ನು ಈ ಕೆರೆಯು ಕೋಡಿಬಿದ್ದು ಎರಡು ತಿಂಗಳುಗಳು ಕಳೆದಿದೆ. ಇನ್ನು ಹೆಚ್ಚಿನ ಮಳೆ ಬಂದರೆ ಇನ್ನೂ ಕೆರೆ ತುಂಬುತ್ತಿತ್ತು. ಸುಮಾರು 2 ಸಾವಿರ ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆಯು ಸುತ್ತಮುತ್ತಲ ತಾಲೂಕುಗಳಾದ ಕಡೂರು, ಬೀರೂರು ಜನರಿಗೆ ಆಸರೆಯಾಗಿದೆ ಎಂದು ಹೇಳಿದರು.












Click it and Unblock the Notifications