ಎಲ್ಲಾ ಬ್ಯಾಂಕುಗಳ ಇಎಂಐಗೆ ವಿನಾಯಿತಿ ನೀಡಲಿ; ಡಿಕೆಶಿ
ಚಿಕ್ಕಮಗಳೂರು, ಮಾರ್ಚ್ 19: ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿದರು.
ಮಠದ ಆವರಣದಲ್ಲಿರುವ ರಂಭಾಪುರಿ ಕ್ಷೇತ್ರದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ರಂಭಾಪುರ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ರಂಭಾಪುರಿ ಶ್ರೀಗಳು ಮಠದ ಹಿರಿಯ ಶ್ರೀಗಳಾದ ಶ್ರೀಮದ್ ರಂಭಾಪುರಿ ವೀರ ಗಂಗಾಧರ ಜಗದ್ಗುರುಗಳ ಫೋಟೋ ನೀಡಿ ಸನ್ಮಾನಿಸಿದರು. "ಮಠದ ಹಿರಿಯ ಗುರುಗಳಾದ ವೀರ ಗಂಗಾಧರ ಜಗದ್ಗುರುಗಳು ನನಗೆ ಹೈಕಮಾಂಡ್ ಇದ್ದಂತೆ, ಅವರ ಫೋಟೊವನ್ನು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಡಿ" ಎಂದು ಜಿಲ್ಲಾಧ್ಯಕ್ಷರಿಗೆ ಡಿಕೆಶಿ ಸೂಚಿಸಿದರು.
ನಂತರ ಮಾಧ್ಯಮದವರ ಜೊತೆ ಮಾತನಾಡಿದ ಡಿಕೆಶಿ, "ರಾಜ್ಯಾದ್ಯಂತ ಕೊರೊನಾದಿಂದ ಆರ್ಥಿಕ ನಷ್ಟ ಉಂಟಾಗಿದ್ದು, ಜನಸಾಮಾನ್ಯರಿಗೆ ಬದುಕುವುದು ದುಸ್ಥರವಾಗಿದೆ. ಸಾಮಾನ್ಯ ಜನರು ಆರ್ಥಿಕವಾಗಿ ಉಸಿರಾಡಲು ಆಗುತ್ತಿಲ್ಲ. ವ್ಯಾಪಾರಸ್ಥರು, ಸಣ್ಣ ಉದ್ಯಮಿಗಳು, ತೀವ್ರ ಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಗಳಿಂದ ಅವರು ಕಿರುಕುಳ ಅನುಭವಿಸುವಂತಾಗಿದೆ. ಇದರಿಂದ ಎಲ್ಲಾ ಬ್ಯಾಂಕ್ ಗಳ ಇಎಂಐಗೆ ವಿನಾಯಿತಿ ನೀಡುವಂತೆ ಸೂಚಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ನಂತರ ರಂಭಾಪುರಿ ಪೀಠದಿಂದ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಮಗಳ ಮದುವೆಗೆ ತೆರಳಿದ ಡಿ.ಕೆ ಶಿವಕುಮಾರ್ ನವಜೋಡಿಗೆ ಶುಭಾಶಯ ತಿಳಿಸಿದರು.












Click it and Unblock the Notifications