ವಂಚನೆ ಪ್ರಕರಣ: ಕುಂದಾಪುರ ಚೈತ್ರಾಗೆ ಸಾಥ್ ನೀಡಿದ ಮಾಸ್ಟರ್ ಮೈಂಡ್ ಇವ್ನು, ಈತನ ಗನಂಧಾರಿ ಕೆಲ್ಸ ಏನು ಗೊತ್ತಾ?
ಚಿಕ್ಕಮಗಳೂರು, ಸೆಪ್ಟೆಂಬರ್, 13: ಉದ್ಯಮಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಹಾಗೂ ಮಾಸ್ಟರ್ ಮೈಂಡ್ ಆಗಿದ್ದ ಕಾಫಿನಾಡಿನ ಗಗನ್ ಎಂಬಾತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ಗಗನ್ ಹಿನ್ನೆಲೆ ಏನು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ವಂಚನೆ ಪ್ರಕರಣದಲ್ಲಿ ಲಾಕ್ ಆಗಿರುವ ಗಗನ್‌ನನ್ನು ಕಳೆದ ಒಂದು ತಿಂಗಳ ಹಿಂದೆ ಜಿಲ್ಲಾ ಕಮಿಟಿಯು ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದು ಹಾಕಿತ್ತು. ಗಗನ್ ಈ ಹಿಂದೆ ಜಿಲ್ಲೆಯಲ್ಲಿ ನಾನು ಹೈಕಮಾಂಡ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ನನಗೆ ಅವರು ಗೊತ್ತು, ಇವರು ಗೊತ್ತು ಹಾಗೆ ಹೀಗೆ ಅಂತಾ ಪುಂಗುತ್ತಾ ಬಿಲ್ಡಪ್ ಕೊಡಿತ್ತಿದ್ದನಂತೆ.

ಇದೀಗ ವಂಚನೆ ಪಕರಣಕ್ಕೆ ಸಂಬಂಧಿಸಿದಂತೆ ಗಗನ್‌ನನ್ನು ಪೊಲೀಸರು ಬಂಧಿಸಿದ್ದು, ಇನ್ನು ವಂಚನೆಗೆ ಕಾಫಿನಾಡಿನ ರಮೇಶ್, ಧನರಾಜ್ ಸಾಥ್ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಚೈತ್ರಾಗೆ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಆಶ್ರಯ
ವಂಚನೆ ಪ್ರಕರಣದಲ್ಲಿ ಬಂಧನವಾಗಿರುವ ಚೈತ್ರಾ ಕುಂದಾಪುರಗೆ ಆಶ್ರಯ ನೀಡಿದ್ದ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಮ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಬಿಜೆಪಿ ಶಾಸಕ ಸ್ಥಾನದ ಟಿಕೆಟ್‍ಗಾಗಿ ಉದ್ಯಮಿಯೊಬ್ಬರ ಬಳಿ 7 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾಳೆ ಎಂಬ ಆರೋಪದ ಮೇಲೆ ಚೈತ್ರಾ ಕುಂದಾಪುರ ಮತ್ತಿ ಆಕೆಯ ಸ್ನೇಹಿತ ಶ್ರೀಕಾಂತ ನಾಯ್ಕ್ ಅವರನ್ನು ಬಂಧಿಸಲಾಗಿದೆ. ಬಂಧನದಲ್ಲಿರುವ ಚೈತ್ರಾ ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದಳು. ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಮ್ ಅವರ ಅಪಾರ್ಟ್‍ಮೆಂಟ್‍ನಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಡಗಿಕೊಂಡಿದ್ದಳು ಎನ್ನವ ಮಾಹಿತಿ ಲಭ್ಯವಾಗಿದೆ.
ಅಂಜುಮ್ ಚೈತ್ರಾಳ ಸ್ನೇಹಿತೆಯಾಗಿದ್ದು, ಈ ಹಿಂದೆ ಇಬ್ಬರು ಸಹೋದ್ಯೋಗಿಯಾಗಿದ್ದರು. ಆರೋಪಿಗೆ ಆಶ್ರಯ ನೀಡಿದ ವಿಚಾರವಾಗಿ ಅಂಜುಮ್ ಅವರಿಗೆ ಸಿಸಿಬಿ ಈಗ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಬಂಧನಕ್ಕೊಳಗಾಗಿರುವ ಆರೋಪಿಗಳನ್ನು ಬೆಂಗಳೂರಿಗೆ ಕರೆತರಲಾಗುತ್ತಿದ್ದು, ಸಂಜೆ ವೇಳೆಗೆ ಕೋರ್ಟ್‍ಗೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ತಿರ್ಮಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ ಚೈತ್ರಾ ಬಂಧನದ ಬಳಿಕ ಒಡೆದ ಬಳೆ ಹಾಗೂ ಉಂಗುರವನ್ನು ನುಂಗಲು ಯತ್ನಿಸಿದ್ದಳು. ಇದರಿಂದಾಗಿ ಪೊಲೀಸ್ ಸಿಬ್ಬಂದಿ ಆಕೆಯನ್ನು ಅಜ್ಞಾತ ಸ್ಥಳದಲ್ಲಿ ರಾತ್ರಿ ಪೂರ್ತಿ ಕಾವಲು ಕಾದಿದ್ದಾರೆ. ವಂಚನೆ ವಿಚಾರವಾಗಿ ಉದ್ಯಮಿ ಬೆಂಗಳೂರಿನಲ್ಲಿ ದೂರು ನೀಡಿದ್ದು, ಪ್ರಕರಣ ಸಂಬಂಧ ಈವರೆಗೆ ನಾಲ್ವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications