Rain: ಬರದಿಂದ ತತ್ತರಿಸಿದ ಮಲೆನಾಡು: ಕೊಪ್ಪ ಮೇರುತಿ ಶಿಖರದಲ್ಲಿ ವರುಣನಿಗೆ ಹೋಮ-ಹವನ
ಚಿಕ್ಕಮಗಳೂರು, ಮಾರ್ಚ್ 29: ಈ ಬಾರಿಯ ಬರಗಾಲ ಹಾಗೂ ಬಿರು ಬೇಸಿಗೆಯಿಂದ ಜನರು ತತ್ತರಿಸಿದ್ದು ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ.ಬೆಳೆಗಳು ಸಂಪೂರ್ಣ ಒಣಗಿದ್ದು, ಕುಡಿಯುವ ನೀರಿಗೂ ಎಲ್ಲೆಡೆ ಸಮಸ್ಯೆ ಆರಂಭವಾಗಿದೆ. ಹೀಗಾಗಿ ವರುಣ ದೇವನ ಕೃಪೆಗಾಗಿ ಜನರು ಗಗನದತ್ತ ಕೈ ಮುಗಿದು ಒಮ್ಮೆ ಮಳೆಯಾಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಈ ಬಾರಿಯ ಬೇಸಿಗೆಗೆ ಮಲೆನಾಡು ತತ್ತರಿಸಿದ್ದು, ಮಳೆಗಾಗಿ ರಾಜ್ಯದ ನಾಲ್ಕನೇ ಅತಿ ಎತ್ತರ ಶಿಖರದಲ್ಲಿ ಹೋಮ-ಹವನ ನಡೆಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಮೇರುತಿ ಪರ್ವತದಲ್ಲಿ ಮಳೆಗಾಗಿ ಹೋಮ ನಡೆಸಲಾಗಿದೆ.

ಜಯಪುರ ಸಮೀಪದ ಮೇರುತಿ ಪರ್ವತದಲ್ಲಿ ಈ ಹಿಂದೆ ಋಷಿಮುನಿಗಳು ತಪಸ್ಸು ಮಾಡಿದ್ದರು, ಹೀಗಾಗಿ ಇದೊಂದು ಪುಣ್ಯದ ಸ್ಥಳ ಇಲ್ಲಿ ಹೋಮ ನಡೆಸುವುದರಿಂ ಇಷ್ಟಾರ್ಥಗಳು ನೆರವೇರುತ್ತದೆ ಎನ್ನುವುದು ಜನರ ನಂಬಿಕೆಯಾಗಿದೆ. ಮೇರುತಿ ಪರ್ವತದಲ್ಲಿ ಹಲವು ಜಲಮೂಲಗಳಿದ್ದು, ಇಲ್ಲಿ ಹೋಮ ನಡೆಸಿ ಬೇಡಿಕೊಂಡರೆ ಮಳೆಯಾಗುತ್ತದೆ ಎನ್ನುವುದು ಜನರ ಬಲವಾದ ನಂಬಿಕೆಯಾಗಿದೆ.
ಹೀಗಾಗಿ ಈ ವರ್ಷ ಚಿಕ್ಕಮಗಳೂರು ಮಲೆನಾಡು ಸೇರಿದಂತೆ ರಾಜ್ಯದೆಲ್ಲೆಡೆ ಬರ ಆವರಿಸಿರುವುದರಿಂದ ಚಿಕ್ಕಮಗಳೂರಿನ 20ಕ್ಕೂ ಹೆಚ್ಚು ಋತ್ವಿಜರ ನೇತೃತ್ವದಲ್ಲಿ ಕೊಪ್ಪದ ಜಯಪುರ ಸಮೀಪದ ಮೇರುತಿ ಪರ್ವತದಲ್ಲಿ ಹೋಮ ಹವನ ನೆರವೇರಿಸಲಾಗಿದ್ದು, ವರುಣ ದೇವನ ಕೃಪೆಗಾಗಿ ಪ್ರಾರ್ಥಿಸಲಾಗಿದೆ.
ಲೋಕಸಭಾ ಚುನಾವಣೆ: ಸಿಆರ್‌ಪಿಎಫ್ ಯೋಧರ ಪಥ ಸಂಚಲನ
ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್ ಯೋಧರು ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಮತ್ತು ಬಿಳೇಕಲ್ಲಹಳ್ಳಿ ಗ್ರಾಮದಲ್ಲಿ ಪಥ ಸಂಚಲನ ನಡೆಸಿದರು.

ಅಸಿಸ್ಟೆಂಟ್ ಕಮಾಂಡೆಂಟ್ ಸಂಜಯ್.ಡಿ. ನೇತೃತ್ವದಲ್ಲಿ ಪಥಸಂಚಲನ ನಡೆಸಲಾಯಿತು. ಚುನಾವಣೆ ಭದ್ರತೆಗಾಗಿ ಆಗಮಿಸಿರುವ ಯೋಧರು
ತಾಲೂಕಿನ ಉದ್ದೇಬೋರನಹಳ್ಳಿ ಮತ್ತು ಬಿಳೇಕಲ್ಲಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಪಥಸಂಚನ ನಡೆಸಿ, ಚುನಾವಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ರು, ಸಾರ್ವಜನಿಕರಲ್ಲಿ ವಿಶ್ವಾಸ ತುಂಬಲು ಹಾಗೂ ಏರಿಯಾ ಗುರುತಿಸುವಿಕೆಗಾಗಿ ಯೋಧರು ಪಥಸಂಚಲನ ನಡೆಸಿದರು. ಈ ವೇಳೆ ಸ್ಥಳೀಯ ಸಖರಾಯಪಟ್ಟಣ ಪೊಲೀಸರು ಉಪಸ್ಥಿತರಿದ್ದರು.












Click it and Unblock the Notifications