ದತ್ತಪೀಠಕ್ಕೆ ಅರ್ಚಕರನ್ನು ನೇಮಿಸಿದ ರಾಜ್ಯ ಸರ್ಕಾರ: ಬಿಜೆಪಿ ಕಾರ್ಯಕರ್ತರ ಸಂಭ್ರಮ
ಚಿಕ್ಕಮಗಳೂರು, ಡಿಸೆಂಬರ್ 4: ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಬಾಬಾಬುಡನ್ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠಕ್ಕೆ ಇಬ್ಬರು ಅರ್ಚಕರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ಈ ಮೂಲಕ ರಾಜ್ಯ ಬಿಜೆಪಿ ಸರ್ಕಾರ 2018ರ ಚುನಾವಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಕೊಟ್ಟ ಮಾತನ್ನು 2023ರ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗ ನಡೆಸಿಕೊಟ್ಟಿದೆ.
ದತ್ತಪೀಠಕ್ಕೆ ವ್ಯವಸ್ಥಾಪನ ಸಮಿತಿ ರಚನೆ ಬೆನ್ನಲ್ಲೇ ಎದುರಾದ ಮತ್ತೊಂದು ಸಂಕಷ್ಟ
ದತ್ತಪೀಠಕ್ಕೆ ಅರ್ಚಕರನ್ನು ನೇಮಕ ಮಾಡುವ ಸಂಬಂಧ ರಾಜ್ಯ ಸರ್ಕಾರ ಓರ್ವ ಮುಸ್ಲಿಂ ಸದಸ್ಯ ಸೇರಿದಂತೆ ಒಟ್ಟು 8 ಸದಸ್ಯರನ್ನು ಒಳಗೊಂಡ ಆಡಳಿತ ಮಂಡಳಿಯನ್ನು ರಚಿಸಿತ್ತು. ಈ ಸಮಿತಿ ಇತ್ತೀಚೆಗೆ ಸಭೆ ನಡೆಸಿ ಹಿಂದೂ ಅರ್ಚಕರ ನೇಮಕ ಸಂಬಂಧ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಶನಿವಾರ ಸಂಜೆ ದತ್ತಪೀಠದಲ್ಲಿ ಪೂಜಾ ವಿಧಾನಗಳನ್ನು ನೆರವೇರಿಸಲು ಇಬ್ಬರು ಅರ್ಚಕರನ್ನು ನೇಮಕ ಮಾಡಿದೆ.

ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು
ಶೃಂಗೇರಿ ಮೂಲದ ಶ್ರೀಕಾಂತ್ ಹಾಗೂ ಚಿಕ್ಕಬಳ್ಳಾಪುರದ ಸಂದೀಪ್ ಅವರನ್ನು ದತ್ತಪೀಠಕ್ಕೆ ಅರ್ಚಕರನ್ನಾಗಿ ನೇಮಕ ಮಾಡಲಾಗಿದೆ. ಸದ್ಯ 2018ರ ಚುನಾವಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ರಾಜ್ಯ ಸರ್ಕಾರ ದತ್ತಪೀಠಕ್ಕೆ ಅರ್ಚಕರನ್ನು ನೇಮಕ ಮಾಡಿದ್ದು, ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ದತ್ತಪೀಠದಲ್ಲಿ ಈ ಬಾರಿ ಹಿಂದೂ ಅರ್ಚಕರ ಪೂಜೆಯೊಂದಿಗೆ ದತ್ತಜಯಂತಿ ನಡೆಯಲಿದೆ ಎಂದು ಇತ್ತೀಚೆಗೆ ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದ್ದು, ಮುಂದಿನ ಒಂದು ವಾರದಲ್ಲಿ ಸರ್ಕಾರದಿಂದ ಈ ಸಂಬಂಧ ಆದೇಶ ಹೊರಬೀಳಲಿದೆ ಎಂದು ತಿಳಿಸಿದ್ದರು.

ಡಿಸೆಂಬರ್ 6, 7, 8 ಅದ್ಧೂರಿ ದತ್ತ ಜಯಂತಿ ಆಚರಣೆ
ಇನ್ನು ಬಾಬಾ ಬುಡನ್ ಗಿರಿಯ ವಿವಾದಾತ್ಮಕ ದತ್ತ ಪೀಠದಲ್ಲಿ ಡಿಸೆಂಬರ್ 6, 7, ಹಾಗೂ 8 ಒಟ್ಟು ಮೂರು ದಿನಗಳ ಕಾಲ ದತ್ತ ಜಯಂತಿ ಆಚರಿಸಲು ಹೈಕೋರ್ಟ್ ಅನುಮತಿ ನೀಡಿದೆ. ದತ್ತಜಯಂತಿ ಕಾರ್ಯಕ್ರಮ ನವೆಂಬರ್ 28, ಸೋಮವಾರದಿಂದ ಆರಂಭವಾಗಿದ್ದು, ಡಿಸೆಂಬರ್ 8ರ ವರೆಗೂ ನಡೆಯಲಿದೆ. ಡಿಸೆಂಬರ್ 6ರಂದು ಮಹಿಳೆಯರಿಂದ ಅನುಸೂಯ ಜಯಂತಿ, ಶೋಭಾಯಾತ್ರೆ ಹಾಗೂ ದತ್ತ ಪಾದುಕೆ ದರ್ಶನ ನಡೆಯಲಿದೆ. ಡಿಸೆಂಬರ್ 7ರಂದು ದತ್ತಭಕ್ತರಿಂದ ಭಿಕ್ಷಾಟನೆ, ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾ ಯಾತ್ರೆ ನಡೆಯಲಿದೆ.

ದತ್ತಮಾಲೆ ಧರಿಸಿದ ಶಾಸಕ ಸಿಟಿ ರವಿ
ಇನ್ನು ನೂರಾರು ದತ್ತ ಭಕ್ತರು ನವೆಂಬರ್ 28, ಸೋಮವಾರದಂದು ದತ್ತಗೀತೆಗಳನ್ನು ಪಠಿಸುವ ಮೂಲಕ ದತ್ತಮಾಲೆಯನ್ನು ಧರಿಸಿದ್ದಾರೆ. ಈ ವೇಳೆ ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಗಣಪತಿ ಹೋಮ ನೆರವೇರಿಸಿದ ಅರ್ಚಕರು ಬಳಿಕ ದತ್ತಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ದತ್ತಮಾಲೆಯನ್ನು ಧರಿಸಿದ್ದರು. ದತ್ತ ಭಕ್ತರು ದತ್ತಮಾಲೆ ಧರಿಸುವ ಮೂಲಕ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಹಮ್ಮಿಕೊಂಡಿರುವ ದತ್ತ ಜಯಂತಿ ಕಾರ್ಯಕ್ರಮದ ಪೂಜಾ ಕೈಕಾರ್ಯಗಳು ಈಗಾಗಲೇ ಆರಂಭಗೊಂಡಿದೆ.

ಡಿ.5ರಿಂದ 9ರ ಬೆಳಗ್ಗೆವರೆಗೆ ಪ್ರವಾಸಿಗರ ನಿರ್ಬಂಧ
ದತ್ತಜಯಂತಿ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತರು ದತ್ತಪೀಠಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 5ರ ಬೆಳಗ್ಗೆ 9 ಗಂಟೆಯಿಂದ ಡಿಸೆಂಬರ್ 9ರ ಬೆಳಗ್ಗೆ 10 ಗಂಟೆಯವರೆಗೆ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರ, ಹೊನ್ನಮ್ಮನಹಳ್ಳ, ಮತ್ತು ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಭಾಗಗಳಿಗೆ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ಹೊರಡಿಸಿದ್ದಾರೆ.