Kadur Constituency: ಕೈ ಆಕಾಂಕ್ಷಿಗೆ JDS ಟಿಕೆಟ್, ತೆನೆ ಇಳಿಸಿದ ದತ್ತ ಬೆನ್ನಿಗೆ ಕಾಂಗ್ರೆಸ್, ಕ್ಷೇತ್ರದಲ್ಲಿ ಉಳಿಯುವುದೇ ಕಮಲ?
ಚಿಕ್ಕಮಗಳೂರು, ಮಾರ್ಚ್ 15: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ನಾಯಕರು ಟಿಕೆಟ್ ಹಂಚಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಹಾಲಿ ಶಾಸಕರು ಕ್ಷೇತ್ರದಲ್ಲಿ ತಮ್ಮ ಪ್ರಭಾವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹೀಗೆ ಚಿಕ್ಕಮಗಳೂರಿನಲ್ಲಿ ಈ ಬಾರಿ ಆಸಕ್ತಿ ಕೆರಳಿಸಿರುವ ಕ್ಷೇತ್ರವೆಂದರೆ ಅದು ಕಡೂರು ವಿಧಾನಸಭಾ ಕ್ಷೇತ್ರ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬೆಳ್ಳಿ ಪ್ರಕಾಶ್ ಈ ಬಾರಿಯೂ ಬಿಜೆಪಿಯಿಂದ ಕಣ್ಕಕೆ ಇಳಿಯಲಿದ್ದು, ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಾಹಸದಲ್ಲಿದ್ದಾರೆ. ಇಷ್ಟು ವರ್ಷ ಜೆಡಿಎಸ್ ಜೊತೆಗಿದ್ದ ವೈಎಸ್‌ವಿ ದತ್ತ ತೆನೆ ಇಳಿಸಿ ಕಾಂಗ್ರೆಸ್ ಸೇರಿದ್ದಾರೆ. ಇನ್ನು, ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿಎಂ ಧನಂಜಯ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ.

ಚಿಕ್ಕಮಗಳೂರಿನಲ್ಲಿದ್ದರೂ ಬಯಲು ಸೀಮೆಯ ಭಾಗವಾಗಿರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಈ ಭಾರಿ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಒಂದು ಕಾಲದಲ್ಲಿ ಜಾತ್ಯಾತೀತ ಜನತಾದಳದ ಭದ್ರಕೋಟೆಯಾಗಿದ್ದ ಕಡೂರು, ಈಗ ಬಿಜೆಪಿಗೆ ತನ್ನ ಸ್ಥಾನ ಬಿಟ್ಟುಕೊಟ್ಟಿದೆ. ತಮ್ಮ ವೈಯಕ್ತಿಕ ವರ್ಚಸ್ಸಿನಿಂದಲೇ ಕೆಎಂ ಕೃಷ್ಣಮೂರ್ತಿ ಜನತಾ ದಳ, ಜೆಡಿಎಸ್, ಕಾಂಗ್ರೆಸ್‌ನಿಂದಲೂ ಸ್ಪರ್ಧಿಸಿ ಗೆಲುವು ಸಾಧಿಸಿ ಇಲ್ಲಿ ಇತಿಹಾಸ ಬರೆದಿದ್ದಾರೆ.
ಜೆಡಿಎಸ್‌ನ ಪ್ರಭಾವಿ ನಾಯಕ ಎಂದು ಗುರುತಿಸಿಕೊಂಡಿದ್ದ ಮಾಜಿ ಶಾಸಕ ವೈ. ಎಸ್. ವಿ. ದತ್ತ (ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ) ಈ ಬಾರಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕಾಂಗ್ರೆಸ್‌ನಿಂದ ಚುನಾವಣೆಗೆ ಇಳಿಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಚಿಕ್ಕದಿದ್ದರೂ ಕೂಡ ಟಿಕೆಟ್‌ಗಾಗಿ ಪೈಪೋಟಿಯಂತೂ ಇದೆ.
ಕಳೆದ ವಿಧಾನಸಭಾ ಚುನಾವಣೆ ಎದುರಿಸಿದ್ದ ಕೆಎಸ್ ಆನಂದ್ ನಿರಂತರವಾಗಿ ಕ್ಷೇತ್ರದಲ್ಲಿ ಜನರ ಜೊತೆಗೆ ಬೆರಯುವ ಕೆಲಸ ಮಾಡುತ್ತಿದ್ದಾರೆ. ಇವರ ಜೊತೆಗೆ ಹಿರಿಯ ಕಾಂಗ್ರೆಸ್ ಮುಖಂಡ ಕೆಎಂ ವಿನಾಯಕ, ಮಾಜಿ ಶಾಸಕ ಕೆಎಂಕೆ ಪುತ್ರ ಶರತ್ ಕೃಷ್ಣ ಮೂರ್ತಿ ಸಹ ತಾಔಉ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, 2013ರ ಚುನಾವಣೆಯಲ್ಲಿ ಭರ್ಜರಿ ಜಯಗಳಿದ್ದು, ಕಳೆದ 2018ರ ಚುನಾವಣೆಯಲ್ಲಿ 46,860 ಮತಗಳನ್ನು ಪಡೆದು ಸೋಲು ಅನುಭವಿಸಿರುವ ವೈ. ಎಸ್. ವಿ. ದತ್ತ ಕೂಡ ಸ್ಪರ್ಧೆಯಲ್ಲಿದ್ದಾರೆ ಎನ್ನಲಾಗಿದೆ.

2018ರ ಚುನಾವಣೆಯಲ್ಲಿ ಗೆಲುವ ಸಾಧಿಸಿರುವ ಬಿಜೆಪಿ ಈ ಬಾರಿಯು ತನ್ನ ಹಾಲಿ ಶಾಸಕ ಮತ್ತು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿಯೂ ಗುರುತಿಸಿಕೊಂಡಿರುವ ಬೆಳ್ಳಿ ಪ್ರಕಾಶ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಪ್ರಭಾವಿ ನಾಯಕ ವೈಎಸ್‌ವಿ ದತ್ತ ವಿರುದ್ಧ ಗೆಲುವು ಸಾಧಿಸಿದ್ದರು. ಹೀಗಾಗಿ ಈ ಬಾರಿಯೂ ಟಿಕೆಟ್ ಗಟ್ಟಿ ಎಂಬ ನಿರೀಕ್ಷೆಯಲ್ಲಿ ಕ್ಷೇತ್ರದಲ್ಲಿ ಬಿರುಸಿನ ಓಡಾಟ, ಪ್ರಚಾರ ನಡೆಸುತ್ತಿದ್ದಾರೆ. ಇನ್ನೂ ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಪೈಪೋಟಿ ಇಲ್ಲದ ಕಾರಣ ಅವರ ನಂಬಿಕೆ ಕೂಡ ಗಟ್ಟಿಯಾಗಿದೆ.
ಹಾಸನದ ಪ್ರಭಾವಿರುವ ಕ್ಷೇತ್ರವಾದ ಕಾರಣ ಇದು ಜೆಡಿಎಸ್ ಭದ್ರಕೋಟೆ ಎನ್ನಲಾಗುತ್ತಿತ್ತು. ಆದರೆ ಕಳೆದ ಬಾರಿ ಇಲ್ಲಿ ಜೆಡಿಎಸ್ ಅಭ್ಯರ್ಥಿಯ ಸೋಲು ಮತ್ತು ಈ ಬಾರಿ ತಮ್ಮ ಪ್ರಭಾವಿ ನಾಯಕ ಪಕ್ಷಾಂತರವಾಗಿರುವುದು ಜೆಡಿಎಸ್‌ಗೆ ಪೆಟ್ಟು ನೀಡಿದೆ. ಹೀಗಾಗಿ ಈ ಬಾರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಸಿ.ಎಂ. ಧನಂಜಯ ಅವರನ್ನು ಘೋಷಿಸಿದೆ. ಇದು ಭಾರೀ ಅಚ್ಚರಿಗೆ ಕಾರಣವಾಗಿದೆ. ಜೆಡಿಎಸ್ ಅಭ್ಯರ್ಥಿ ಸಿ.ಎಂ. ಧನಂಜಯ ಅವರು ಬೆಂಗಳೂರಿನ ಚನ್ನಸಂದ್ರದವರು. ಇವರು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಯಸಿದ್ದರು.

ಆದರೆ, ಜೆಡಿಎಸ್ ಚಟುವಟಿಕೆಗಳಲ್ಲಿ ಹಿಡಿತ ಸಾಧಿಸಿರುವ ಶಾಸಕ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ಅವರು ಮುಖಂಡರ ಸಮ್ಮುಖದಲ್ಲಿ ಕಡೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಸಿ.ಎಂ. ಧನಂಜಯ ಅವರನ್ನು ಘೋಷಣೆ ಮಾಡಿ ಅಚ್ಚರಿಗೆ ಕಾರಣವಾಗಿದ್ದಾರೆ. ವೈ.ಎಸ್.ವಿ. ದತ್ತ ಅವರನ್ನು ಸೋಲಿಸಲು ಜೆಡಿಎಸ್ ಪಣತೊಟ್ಟಿದೆ. ಅಚ್ಚರಿಯೆಂದರೆ, ಧನಂಜಯ ಕುರುಬ ಸಮುದಾಯದವರಾಗಿದ್ದು, ಸಿದ್ದರಾಮಯ್ಯ ಅವರ ಬೆಂಬಲಿಗರಾಗಿದ್ದರು.
ಇನ್ನು, ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಸ್ವಂತ ವರ್ಷಸ್ಸು ಹೆಚ್ಚು ಕೆಲಸ ಮಾಡುತ್ತದೆ ಎಂಬ ನಂಬಿಕೆಯಿದೆ. ಇದಕ್ಕೆ ಸಾಕ್ಷಿಯಾಗಿ ನಾಲ್ಕು ಬಾರಿ ಕೆಎಂ ಕೃಷ್ಣಮೂರ್ತಿ ಗೆಲುವು ಸಾಕ್ಷಿಯಾಗಿದೆ. 1994, 1999, 2004 ಮತ್ತು 2008ರಲ್ಲಿ ಕೆ.ಎಂ. ಕೃಷ್ಣಮೂರ್ತಿ ಗೆಲುವು ದಾಖಲಿಸಿದ್ದಾರೆ. ಅವರನ್ನು ಕ್ಷೇತ್ರದಲ್ಲಿ ಚಾಣಕ್ಯ ಎಂದು ಕರೆಯಲಾಗುತ್ತದೆ. ಆದರೆ ಈ 2023ರ ವಿಧಾನಸಭಾ ಚುನಾವಣೆಯಲ್ಲಿ ಯಾರು ಚಾಣಕ್ಯರಾಗಲಿದ್ದಾರೆ ಎಂಬುದು ಕಾದು ನೋಡಬೇಕಿದೆ.












Click it and Unblock the Notifications