Karnataka assembly election 2023: ಸುಳ್ಳೇ ಬಿಜೆಪಿಯ ಮನೆ ದೇವರು: ಬಿ.ಕೆ.ಹರಿಪ್ರಸಾದ್ ಟೀಕೆ
ಚಿಕ್ಕಮಗಳೂರು, ಮಾರ್ಚ್, 05: ಬಿಜೆಪಿಯವರು ಚುನಾವಣೆಗಳಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುತ್ತಿಲ್ಲ. ಮತ್ತು ಸುಳ್ಳುಗಳಿಂದಲೇ ಸೌಧವನ್ನು ಕಟ್ಟುದ್ದಾರೆ. ಈ ಮೂಲಕ ಅವರು ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಚಿಕ್ಕಮಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೈಮರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ 4 ವರ್ಷ ಆಡಳಿತ ನಡೆಸಿರುವ ಬಿಜೆಪಿ ನೇತೃತ್ವದ ಸರ್ಕಾರ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಅದೇ ರೀತಿಯಲ್ಲಿ 9 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯೂ ಸಾಮಾನ್ಯ ಜನರು, ವಿದ್ಯಾರ್ಥಿಗಳು, ನಿರುದ್ಯೋಗಿಗಳಿಗೆ ಮತ್ತು ಬಡವರಿಗೆ ಸ್ಪಂದಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಿಡಿಕಾರಿದರು.

ಒಂದು ಲಕ್ಷ ಜನರಿಗೂ ಉದ್ಯೋಗ ಕೊಡಲಿಲ್ಲ
ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದರು. ವರ್ಷಕ್ಕೆ 2 ಕೋಟಿಯಂತೆ 9 ವರ್ಷಕ್ಕೆ 18 ಕೋಟಿ ಉದ್ಯೋಗ ಕೊಡಬೇಕಿತ್ತು. ಆದರೆ, ಅವರಿಂದ ಲಕ್ಷ ಉದ್ಯೋಗವನ್ನು ಕೊಡಲು ಸಾಧ್ಯವಾಗಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುವುದಾಗಿ ಹೇಳಿದ್ದರು. ಆದರೆ, ಒಂದಾಣಿಯನ್ನು ಜಮಾ ಮಾಡಲಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.
ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ
ಒಂದು ಲಕ್ಷ ಉದ್ಯೋಗ ಸೃಷ್ಟಿಗಾಗಿ ಬೆಂಗಳೂರಿನಲ್ಲಿ ಆಪಲ್ ಕಂಪನಿ ಸ್ಥಾಪನೆಗೆ ಅವಕಾಶ ನೀಡುತ್ತಿರುವುದಾಗಿ ರಾಜ್ಯ ಸರ್ಕಾರದ ಮಂತ್ರಿಯೊಬ್ಬರು ಹೇಳಿದ್ದಾರೆ. ಆದರೆ, ಆಪಲ್ ಕಂಪನಿ ಕೇಳಿದರೆ ಅದು ಸುಳ್ಳು ಎಂದು ಹೇಳಿದೆ. ಅಂದರೆ, ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಒಳಗೊಂಡಂತೆ ಮಂತ್ರಿಗಳು, ಮುಖಂಡರು ಸುಳ್ಳು ಹೇಳುತ್ತಾರೆ. ಕಾರಣ ಅವರಿಗೆ ಸುಳ್ಳೇ ಮನೆ ದೇವರು ಎಂದು ಟೀಕೆಗಳ ಸುರಿಮಳೆಗೈದರು.
ಸುಳ್ಳು ಹೇಳುವವರ ಗುಂಪಿನಲ್ಲಿ ಈ ಕ್ಷೇತ್ರದ ಶಾಸಕ ಸಿ.ಟಿ. ರವಿ ಇದ್ದಾರೆ. ಅವರ ಗುಂಪಿನಲ್ಲಿ ಸ್ಯಾಂಟ್ರೋ ರವಿ, ಬ್ರೋಕರ್ ರವಿ ಸೇರಿದಂತೆ ಹಲವರು ಇದ್ದಾರೆ. ಸುಳ್ಳುಗಳು ಮತ್ತು ಭಾವನಾತ್ಮಕ ವಿಚಾರಗಳ ಮೂಲಕ ರಾಜಕಾರಣ ಮಾಡುತ್ತಿರುವ ಶಾಸಕ ರವಿಯವರನ್ನು ಸೋಲಿಸಲು ನೀವೆಲ್ಲರೂ ಶಪಥ ಮಾಡಬೇಕಾಗಿದೆ ಎಂದು ಹೇಳಿದರು.

ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ದುರಾಡಳಿತದಿಂದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದವಸ ಧಾನ್ಯಗಳ ಬೆಲೆಗಳು ಗಗನಕ್ಕೇರಿವೆ. ಇದರಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜನರ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಮತ್ತು ಮಕ್ಕಳ ಅಕ್ಷರ ಕಲಿಕೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಕುಟುಂಬಕ್ಕೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಒಬ್ಬ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ರೂ.ಗಳನ್ನು ನೀಡಲಾಗುವುದು. ಮತ್ತು ಕುಟುಂಬದ ಪ್ರತಿ ಸದಸ್ಯನಿಗೆ ತಲಾ ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಕಾಂಗ್ರೆಸ್ ಭರವಸೆಯೊಂದಿಗೆ ಗ್ಯಾರಂಟಿ ಕಾರ್ಡ್ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.
ಬಿಜೆಪಿಗೆ ಗೊತ್ತು ಗುರಿ ಇಲ್ಲ
ನಂತರ ವಿಧಾನ ಪರಿಷತ್ ಸದಸ್ಯ ಮತ್ತು ಚಿಕ್ಕಮಗಳೂರು ಉಸ್ತುವಾರಿ ಮಂಜುನಾಥ ಭಂಡಾರಿ ಮಾತನಾಡಿ, ಬಿಜೆಪಿಗೆ ಗೊತ್ತು ಗುರಿ ಇಲ್ಲ. ಅವರು ಕೇವಲ ಧರ್ಮ, ಜಾತಿ, ದೇವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ. ಅವರಿಗೆ ಜನರ ಸಮಸ್ಯೆ, ಬೆಲೆ ಏರಿಕೆಯ ಪರಿಣಾಮಗಳಿಂದ ಆಗುತ್ತಿರುವ ಸಂಕಷ್ಟಗಳು ಗೊತ್ತಿಲ್ಲ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಲೆನಾಡು ಮತ್ತು ಕರಾವಳಿಯ ಜನರ ಅಭಿವೃದ್ಧಿಗಾಗಿ ಹತ್ತು ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ಬಂಟರು ಮತ್ತು ಬಿಲ್ಲವರ ಸರ್ವಾಂಗಿಣ ಅಭಿವೃದ್ಧಿಗಾಗಿ ಸಮುದಾಯಕ್ಕೆ ವಾರ್ಷಿಕ 250 ಕೋಟಿ ರೂ.ಗಳನ್ನು ತೆಗೆದಿರಿಸಲು ಕಾಂಗ್ರೆಸ್ ಪಣತೊಟ್ಟಿದೆ. ಆದ್ದರಿಂದ ಈ ಬಾರಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.












Click it and Unblock the Notifications