ಕಡೂರು: ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವಾದರೆ ಅಂತಹವರ ಪಟ್ಟಿ ತಯಾರಿಸಿ ವರದಿ ನೀಡಿ: ಶಾಸಕ ಆನಂದ್
ಚಿಕ್ಕಮಗಳೂರು, ಅಕ್ಟೋಬರ್, 04: ಸರ್ಕಾರದ ಗೃಹಲಕ್ಷ್ಮಿ, ಅನ್ನಭಾಗ್ಯ ಮುಂತಾದ ಯೋಜನೆಗಳ ಹಣವನ್ನು ಯಾವುದೇ ಬ್ಯಾಂಕುಗಳು ಸಾಲಕ್ಕೆ ಜಮಾ ಮಾಡಿಕೊಳ್ಳುವಂತಿಲ್ಲ. ಯಾರಿಗಾದರೂ ಹಣ ಬಂದಿಲ್ಲವಾದರೆ ಅಂತಹವರ ಪಟ್ಟಿ ತಯಾರಿಸಿ ವರದಿ ನೀಡಿ ಎಂದು ಶಾಸಕ ಆನಂದ್ ಅಧಿಕಾರಿಗಳಿಗೆ ಸೂಚಿಸಿದರು.
ಕಡೂರಿನಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಸಂಪೂರ್ಣ ಅನುಷ್ಟಾನವಾಗಬೇಕು. ಸರ್ಕಾರ ನೀಡುವ ಹಣ ಅರ್ಹರಿಗೆ ಸಕಾಲದಲ್ಲಿ ತಲುಪಬೇಕು. ಅಕಸ್ಮಾತ್ ಯಾರಿಗಾದರೂ ಹಣ ತಲುಪುವಲ್ಲಿ ವಿಳಂಬವಾಗಿದ್ದರೆ ಆಶಾ ಕಾರ್ಯಕರ್ತೆಯರ ಸಹಕಾರ ಪಡೆದು ಅಂತಹವರ ವಿವರ ಸಂಪಾದಿಸಿ ಶೀಘ್ರಕ್ರಮ ಕೈಗೊಳ್ಳಿ ಎಂದು ಸಿಡಿಪಿಓ ಶಿವಪ್ರಕಾಶ್ ಅವರಿಗೆ ಸೂಚನೆ ನೀಡಿದರು.
ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ. ಯಾವುದೇ ಕಾರಣವಿರಲಿ ಗುತ್ತಿಗೆದಾರರಿಗೆ ಚುರುಕು ಮುಟ್ಟಿಸಿ ಕಾಮಗಾರಿ ಶೀಘ್ರ ಮುಗಿಯುವಂತೆ ಕ್ರಮ ಕೈಗೊಳ್ಳಬೇಕು. ಎರಡೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಮಗಾರಿಗಳನ್ನು ಮುಗಿಸಿ ಒಟ್ಟಿಗೆ ಉದ್ಘಾಟನೆ ಮಾಡುವಂತೆ ಕಾರ್ಯಕ್ರಮ ರೂಪಿಸಿ ಎಂದು ಸೂಚನೆ ನೀಡಿದರು.
ಕೆಲವರಿಗೆ ಹಣ ಬಂದಿಲ್ಲ ಎಂಬ ದೂರುಗಳು ಬಂದಿವೆ
ಗೃಹಲಕ್ಷ್ಮಿ ಯೋಜನೆಯಲ್ಲಿ ಕೆಲವರಿಗೆ ಹಣ ಬಂದಿಲ್ಲ ಎಂಬ ದೂರುಗಳು ಬಂದಿವೆ. ಕೆಲ ಕುಟುಂಬದ ಯಜಮಾನಿ ಯಾರೆಂಬ ಗೊಂದಲದಲ್ಲಿ ಅವರು ಇನ್ನೂ ಅರ್ಜಿ ಹಾಕಿಲ್ಲ. ಇದರ ಜೊತೆ ಯಾವ ಖಾತೆಗೆ ಹಣ ಹೋಗಿದೆಯೆಂಬ ಬಗ್ಗೆ ಹಲವಾರು ಜನರು ಗೊಂದಲಕ್ಕೊಳಗಾಗಿದ್ದಾರೆ. ಯೋಜನೆಯಲ್ಲಿ ಯಾವುದೇ ಲೋಪವಾಗದಂತೆ ಅರ್ಹ ಫಲಾನುಭವಿಗಳಿಗೆ ಹಣ ತಲುಪುವಂತೆ ಎಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಖರಾಯಪಟ್ಟಣದ ಕೃಷಿ ಇಲಾಖೆ ಕಟ್ಟಡ ಶಿಥಿಲವಾಗಿದ್ದು, ಅಲ್ಲಿ ನಿವೇಶನ ದೊರೆತಿದೆ. ಕಟ್ಟಡಕ್ಕಾಗಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಕೃಷಿ ಸಹಾಯಕ ನಿರ್ದೇಶಕ ತಿಮ್ಮನಗೌಡ ಪಾಟೀಲ್ ಅವರು ತಿಳಿಸಿದಾಗ, ಶಾಸಕನಾಗಿ ನಾಲ್ಕು ತಿಂಗಳು ಕಳೆದರೂ ಈ ಬಗ್ಗೆ ನಮ್ಮ ಬಳಿ ಚರ್ಚೆ ನಡೆಸಬೇಕೆಂದು ಅನಿಸಿಲ್ಲವೆ ಎಂದು ಶಾಸಕ ತಮ್ಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications