Breaking; ಚಿಕ್ಕಮಗಳೂರಿನಲ್ಲಿ ಮಳೆ, ಜುಲೈ 12ರ ತನಕ ಶಾಲಾ-ಕಾಲೇಜಿಗೆ ರಜೆ
ಚಿಕ್ಕಮಗಳೂರು, ಜುಲೈ 10; ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್. ಆರ್. ಪುರ, ಮೂಡಿಗೆರೆ, ಕಳಸ ಮತ್ತು ಚಿಕ್ಕಮಗಳೂರು ತಾಲೂಕಿನ ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಿಗೆ ಜುಲೈ 11 ಮತ್ತು 12ರಂದು ರಜೆ ಘೋಷಿಸಲಾಗಿದೆ.
ಭಾನುವಾರ ಚಿಕ್ಕಮಗಳೂರು ಜಲ್ಲಾಧಿಕಾರಿ ಕೆ. ಎನ್. ರಮೇಶ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಮೊದಲು ಮಳೆಯ ಕಾರಣ ಜುಲೈ 6 ರಿಂದ 9ರವರೆಗೆ ಅಂಗನವಾಡಿ, ಶಾಲೆ, ಪ್ರೌಢ ಶಾಲೆಗೆ ರಜೆ ನೀಡಲಾಗಿತ್ತು. ಈಗ ಮಳೆಯ ಅಬ್ಬರ ಜೋರಾದ ಹಿನ್ನಲೆಯಲ್ಲಿ ರಜೆ ಮುಂದುವರಿಸಲಾಗಿದೆ.

ತುಂಬಿ ಹರಿಯುತ್ತಿರುವ ತುಂಗಾ ನದಿ; ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆ ಮುಂದುವರಿದಿದೆ. ತುಂಗಾ ನದಿ ಒಳ ಹರಿವಿನಲ್ಲಿ ಭಾರೀ ಹೆಚ್ಚಳವಾಗಿದೆ. ಶೃಂಗೇರಿ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗಿವೆ.
ದೇವಾಲಯದ ಪ್ಯಾರಲ್ ರಸ್ತೆ, ಪಾರ್ಕಿಂಗ್ ಪ್ರದೇಶಕ್ಕೆ ನದಿ ನೀರು ನುಗ್ಗಿದೆ. ನದಿ ಪಕ್ಕದ ಅಂಗಡಿಗಳಿಗೂ ನೀರು ನುಗ್ಗಿದೆ. ಪ್ರವಾಹದ ಮಟ್ಟ ಮೀರಿ ತುಂಗಾ ನದಿ ಹರಿಯುತ್ತಿದೆ.
ಚಾರ್ಮಾಡಿ ಘಾಟ್‌ನಲ್ಲಿ ಭೂ ಕುಸಿತ; ಚಾರ್ಮಾಡಿ ಘಾಟ್ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದಿದೆ. ಇದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ಥವಾಗಿದೆ. ಸುಮಾರು ಒಂದು ಕಿಲೋ ಮೀಟರ್ ಗೂ ಹೆಚ್ಚು ಟ್ರಾಫಿಕ್ ಜಾಮ್, ಕಿ. ಮೀ. ದಧೂರ ವಾಹನಗಳು ಸಾಲುಗಟ್ಟಿ ನಿಂತಿವೆ. ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆಯ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.
ಮತ್ತೊಂದು ಕಡೆ ಕೊಳಗಾಮೆ-ಮುತ್ತೋಡಿ ಸಂಪರ್ಕ ಕಲ್ಪಿಸುವ ಗಿರಿ ಭಾಗದ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದೆ. ಬಂಡೆಗಳು ರಸ್ತೆಗೆ ಬೀಳುತ್ತಿರುವುದರಿಂದ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ತೋಟದ ಕೆಲಸಕ್ಕೆ ತೆರಳಿದ ಕಾರ್ಮಿಕರು ಪರದಾಟ ನಡೆಸುತ್ತಿದ್ದಾರೆ.












Click it and Unblock the Notifications