ಚಿಕ್ಕಮಗಳೂರು; ಕಲ್ಲುಗಾರಿಕೆಯಿಂದ ಜನರಿಗೆ ಸಂಕಷ್ಟ
ಚಿಕ್ಕಮಗಳೂರು, ನವೆಂಬರ್ 26: ಚಿಕ್ಕಮಗಳೂರು ತಾಲೂಕಿನ ನಾಗರಹಳ್ಳಿ, ತಿಮ್ಮನಹಳ್ಳಿ ಜನರ ಪರಿಸ್ಥಿತಿ ಹೇಳ ತೀರದಂತಾಗಿದೆ. ಬರೋಬ್ಬರಿ 300ಕ್ಕೂ ಅಧಿಕ ಮನೆಗಳಿರುವ ಈ ಗ್ರಾಮದಲ್ಲಿ ಬಾಯ್ಬಿಡದ ಮನೆಗಳೇ ಇಲ್ಲ. ಈ ಗ್ರಾಮದಿಂದ ಕೇವಲ 1 ಕಿ.ಮೀ. ದೂರದಲ್ಲಿ ಬೃಹತ್ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದು ಅಕ್ರಮವೋ?, ಸಕ್ರಮವೋ?. ಆದರೆ ಸಮಸ್ಯೆ ಅಂತು ಗ್ಯಾರಂಟಿ.
ಕಲ್ಲು ಗಣಿಗಾರಿಕೆಯಿಂದ ಈ ಗ್ರಾಮದಲ್ಲಿ ಇತ್ತೀಚಿಗೆ ಕಟ್ಟಿದ ಮನೆಗಳು ಬಿರುಕು ಬಿಟ್ಟಿವೆ. ಕೆಲವರು ಬಿರುಕು ಬಿಟ್ಟ ಗೋಡೆಗಳನ್ನು ಎಷ್ಟು ಬಾರಿ ದುರಸ್ತಿ ಮಾಡಿಸುವುದು ಎಂದು ಹಾಗೇ ಸುಮ್ಮನಾಗಿದ್ದಾರೆ. ಮಕ್ಕಳಿಗಾಗಿ ಹೊಟ್ಟೆ-ಬಟ್ಟೆ ಕಟ್ಟಿ ಕಟ್ಟಿದ ಮನೆ ಕಥೆ ಹೀಗಾದರೆ, ಹೊಲದಲ್ಲಿ ಯಾವ ಬೆಳೆಯೂ ಸರಿಯಾಗಿ ಬರಲ್ಲ. ಬೆಳೆಗಳ ಮೇಲೆ ಧೂಳು ಕೂತು ಅರ್ಧ ಬೆಳೆ ಹಾಳಾಗುತ್ತಿದೆ. ಕುಡಿಯುವ ನೀರಿಗೂ ಸಮಸ್ಯೆ. ದನಕರುಗಳಿಗೂ ಮೇವು-ನೀರಿನ ಸಮಸ್ಯೆ. ಎಲ್ಲದಕ್ಕೂ ಮೂಲ ಧೂಳು, ಧೂಳು.

ಹೀಗಾದರೆ ನಾವು ಬದುಕೋದು ಹೇಗೆ? ಎಂಬುದು ಹಳ್ಳಿಗರ ಅಳಲು. ನಾಗರಾಳು ಸರ್ವೇ ನಂಬರ್ 167ರಲ್ಲಿ ಆರು ಕ್ರಷರ್ ಇದೆ. ಅನುಮತಿ ಪಡೆದಿರುವುದು ಒಂದಕ್ಕೆ ಮಾತ್ರ. ಅಲ್ಲಿ ಮಾಡುತ್ತಿರುವ ಕೆಲಸ ಮತ್ತೊಂದು ಎಂದು ಸ್ಥಳೀಯರು ಸರ್ಕಾರ ಹಾಗೂ ಕ್ರಷರ್ ಮಾಲೀಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸ್ಪೋಟಕಗಳ ಶಬ್ದ; ನೂರಾರು ಅಡಿ ಗುಂಡಿ ತೋಡಿ ಚೀಲಗಟ್ಟಲೇ ಡೈನಾಮೈಟ್ ಇಟ್ಟು ಸ್ಫೋಟ ನಡಸಲಾಗುತ್ತದೆ. ಇದರಿಂದ ನಾಗರಾಳು, ತಿಮ್ಮನಹಳ್ಳಿಯ ಜನ ಸಂಕಷ್ಟಕ್ಕೀಡಾಗಿದ್ದಾರೆ. ಯಾವುದೇ ಮಾರ್ಗಸೂಚಿಗಳನ್ನು ಪಾಲನೇ ಮಾಡದೇ ಸ್ಫೋಟ ನಡೆಸುತ್ತಿರುವುದರಿಂದ ಹಳ್ಳಿಗರಿಗೆ ಜೀವನ ಮಾಡೋದೇ ಕಷ್ಟವಾಗಿದೆ.
ವಾರದಲ್ಲಿ ಎರಡು ಅಥವ ಮೂರು ಬಾರಿ ಒಬ್ಬರಾದ ಮೇಲೊಬ್ಬರು ಸ್ಫೋಟ ಮಾಡುತ್ತಾರೆ. ಆಗ ಭಾರೀ ಶಬ್ಧ ಬರುತ್ತದೆ. ಭೂಮಿಯೇ ಅಲುಗಾಡಿದಂತೆ ಆಗುತ್ತದೆ. ಮನೆಯಲ್ಲಿ ಇರಲು ಆಗಲ್ಲ. ಪಾತ್ರೆಗಳೆಲ್ಲಾ ಕೆಳಗೆ ಬೀಳುತ್ತದೆ. ಬೆಳೆ ಇಲ್ಲ, ಜನ-ಜಾನುವಾರುಗಳಿಗೆ ಕುಡಿಯುವುದಕ್ಕೆ ನೀರಿಲ್ಲ. ಗ್ರಾಮದ ಚಿಕ್ಕಮಕ್ಕಳು ಸ್ಫೋಟದ ಶಬ್ಧಕ್ಕೆ ಬೆಚ್ಚಿ ಬೀಳುತ್ತಾರೆ. ಶಾಲೆಗೆ ಜಾಗ ಕೇಳಿದರೆ ಇಲ್ಲ ಅಂತಾರೆ. ಗಣಿಗಾರಿಕೆಗೆ ಕೇಳಿದ ಕೂಡಲೇ ಗೋಮಾಳ ಜಾಗ ಕೊಡುತ್ತಾರೆ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಒಟ್ಟಾರೆ, ಸಕ್ರಮದಲ್ಲೂ ಅಕ್ರಮವಾಗಿ ಅಳತೆ ಮೀರಿ ರಾಜರೋಷವಾಗಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯನ್ನು ನೋಡಿದರೆ ನಿಜಕ್ಕೂ ಎಂಥವರಿಗೂ ಕೂಡ ಒಂದು ಕ್ಷಣ ಎದೆ ಝಲ್ ಅನ್ನದೇ ಇರದು. ಅಷ್ಟು ದೊಡ್ಡ ಪ್ರಮಾಣದಲ್ಲಿ ಬಂಡೆಗಳನ್ನು ಸ್ಫೋಟಿಸಿ ಗಣಿಗಾರಿಕೆ ನಡೆಸಲಾಗುತ್ತಿದೆ. ಕೂದಲೆಳೆ ಅಂತರದಲ್ಲಿ ಗ್ರಾಮವಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಎಲ್ಲಾ ಗೊತ್ತಿದ್ದು ಗೊತ್ತಿಲ್ಲದಂತೆ ಜಾಣ ಕಿವುಡರಾಗಿರೋದು ನಿಜಕ್ಕೂ ದುರಂತ. ನೂರಾರು ವರ್ಷಗಳಿಂದ ನೆಮ್ಮದಿ ಬದುಕು ಕಟ್ಟಿಕೊಂಡಿದ್ದ ಹಳ್ಳಿಗರು ಆರೇ ವರ್ಷಕ್ಕೆ ಬದುಕಿನ ಬಗ್ಗೆ ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications