ಮತಾಂತರ ಆರೋಪ; ಹೋಟೆಲ್ ಮೇಲೆ ಬಜರಂಗದಳ ದಾಳಿ
ಚಿಕ್ಕಮಗಳೂರು, ಮೇ30 : ಅಕ್ರಮವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಹೋಟೆಲ್ ಮೇಲೆ ದಾಳಿ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ನಗರದ ಬಾರ್‍ಲೈನ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಯುತ್ತಿತ್ತು. ಈ ವೇಳೆ ದಾಳಿ ಕಾರ್ಯಕರ್ತರು ನಡೆಸಿದ್ದಾರೆ. ಮತಾಂತರ ಸಂಬಂಧ ಚರ್ಚ್‍ವೊಂದರ ಪಾದ್ರಿ ಹಾಗೂ ನೂರಾರು ಜನರು ಸಭೆ ನಡೆಸುತ್ತಿದ್ದರು ಎಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ.
ಏಕಾಏಕಿ ದಾಳಿ ನಡೆಸಿ ಸಭೆ ನಡೆಸಲು ಅನುಮತಿ ನೀಡಿದವರು ಯಾರು?. ಧಾರ್ಮಿಕ ಸಭೆ ನಡೆಸಲು ಚರ್ಚ್ ಇದೆ. ಇಲ್ಲೇಕೆ ಸಭೆ ನಡೆಸಲಾಗುತ್ತಿದೆ? ಎಂದು ಬಜರಂಗದಳ ಕಾರ್ಯಕರ್ತರು ಪ್ರಶ್ನಿಸಿದರು. ಈ ವೇಳೆ ಅಲ್ಲಿ ಸೇರಿದ್ದವರ ನಡುವೆ ಮಾತಿನ ಚಕಮಕಿ ನಡೆಯಿತು.
ಅನುಮತಿ ಇಲ್ಲದೆ ಸಭೆ ನಡೆಸಲಾಗುತ್ತಿದೆ. ಮತಾಂತರಕ್ಕೆ ಪ್ರಚೋದನೆ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರನ್ನು ಗುರಿಯಾಗಿಸಿಕೊಂಡು ಮತಾಂತರಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದರು.
ಏಕಾಏಕಿ ದಾಳಿ ನಡೆಸಿದ್ದರಿಂದ ಗೊಂದಲದ ವಾತವರಣ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ಸದ್ಯ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿದ್ದು ಪೊಲೀಸರ ತನಿಖೆಯಿಂದ ಸತ್ಯ ಸತ್ಯತೆ ಹೊರಬರಬೇಕಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಜರಂಗದಳ ಕಾರ್ಯಕರ್ತ ಶ್ಯಾಮ್, "ನನ್ನ ಸ್ನೇಹಿತನನ್ನು ಮತಾಂತರಕ್ಕೆ ಕರೆದಿದ್ದರು. ಈ ವೇಳೆ ನಾವು ಹೋಟೆಲ್ ಹೋಗಿ ನೋಡಿದ್ದಾಗ ಪ್ರಾರ್ಥನೆ ಸಲ್ಲಿಸುತ್ತಿದ್ದರು, ಹೋಟೆಲ್‌ನಲ್ಲಿ ಪ್ರಾರ್ಥನೆ ಮಾಡುವುದಕ್ಕೆ ಅನುಮತಿ ನೀಡಿದವರು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ನಾನು ನಗರ ಠಾಣೆಗೆ ದೂರು ನೀಡಿದ್ದೇವೆ" ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಹೋಟೆಲ್ & ಲಾಡ್ಜ್ ಮಾಲೀಕ ಪ್ರದೀಪ್, "ನಮಗೆ ಬಾಡಿಗೆ ಎಂದು ಹಾಲ್ ಕೇಳಿದರು, ಹಾಲ್ ನೀಡಿದೆವು. ಪ್ರಾರ್ಥನೆ ಮಾಡುವ ಬಗ್ಗೆ ಮಾಹಿತಿ ಇರಲಿಲ್ಲ" ಎಂದರು.
ಖುಷಿ ಕುಮಾರ ಸ್ವಾಮೀಜಿ ಹೇಳಿಕೆ; "ಮಳಲಿ ಮತ್ತು ಶ್ರೀರಂಗಪಟ್ಟಣದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತದೆ" ಎಂದು ಕಾಳಿಮಠದ ಋಷಿಕುಮಾರ ಸ್ವಾಮೀಜಿ ತಿಳಿಸಿದರು.
"ಮಳಲಿಯಲ್ಲಿ ಒಂದು ಇಟ್ಟಿಗೆಯನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ" ಎಂಬ ಎಸ್‍ಡಿಪಿಐ ಮುಖಂಡನ ಹೇಳಿಕೆಗೆ ಭಾನುವಾರ ಕಡೂರಿನಲ್ಲಿ ಪ್ರತಿಕ್ರಿಯಿಸಿದ ಅವರು, "ನಮಗೆ ಇಟ್ಟಿಗೆ ಬೇಡ, ಇಟ್ಟಿಗೆ ಬೇಕಾಗಿರುವುದು ಅವರಿಗೆ ಇಟ್ಟಿಗೆ ಯಾರು ಉಪಯೋಗಿಸುತ್ತಾರೆ ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ" ಎಂದರು.
"ಇಟ್ಟಿಗೆಯನ್ನು ನೀವು ಉಪಯೋಗಿಸಿಕೊಳ್ಳಿ ಕಲ್ಲಿನಲ್ಲಿ ನಾವು ದೇವಸ್ಥಾನ ಕಟ್ಟಿಕೊಳ್ಳುತ್ತೇವೆ. ಮಳಲಿಯಲ್ಲಿ ತಾಂಬೂಲ ಪ್ರಶ್ನೆ ಕೇಳುವ ಅವಶ್ಯಕತೆ ಇತ್ತು. ಆದರೆ, ಶ್ರೀರಂಗ ಪಟ್ಟಣದಲ್ಲಿ ತಾಂಬೂಲ ಪ್ರಶ್ನೆ ಕೇಳುವ ಅವಶ್ಯಕತೆ ಇಲ್ಲ. ಅಲ್ಲಿ ಕಂಬಗಳು ಇವೆ" ಎಂದು ತಿಳಿಸಿದರು.