ದುಗ್ಲಾಪುರದ ಕಡಲೆಕೆರೆಯಲ್ಲಿ ಬೀಡುಬಿಟ್ಟ ಆನೆ ನೋಡಲು ಜನವೋ ಜನ
ಚಿಕ್ಕಮಗಳೂರು, ಜುಲೈ 15: ಜಿಲ್ಲೆಯ ತರೀಕೆರೆ ತಾಲೂಕಿನ ದುಗ್ಲಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿಯಿಂದಲೇ ಜನರಲ್ಲಿ ಆತಂಕ ಮನೆ ಮಾಡಿತ್ತು. ಗ್ರಾಮದ ಕಡಲೆಕೆರೆಯಲ್ಲಿ ಆನೆ ಕಾಣಿಸಿಕೊಂಡಿದೆ ಎಂಬ ಸುದ್ದಿ ಬಾಯಿಂದ ಬಾಯಿಗೆ ಹರಡಿ, ಅತ್ತ ಸುಳಿದಾಡಲು ಸಹ ಕೆಲವರು ಹೆದರಿದರೆ, ಆನೆಯನ್ನು ಕಾಡಿಗೆ ಅಟ್ಟಿದರೆ ಸಾಕೆಂಬ ಚಿಂತೆ ಹಲವರದಾಗಿತ್ತು.
ಗ್ರಾಮದ ಕಡಲೆಕೆರೆಯಲ್ಲಿ ಆನೆ ಇದೆ ಎಂಬ ಸುದ್ದಿ ಅರಣ್ಯ ಇಲಾಖೆಗೆ ತಲುಪಿ, ಅದನ್ನು ಕಾಡಿಗೆ ಅಟ್ಟಲು ಸಿಬ್ಬಂದಿ ಬರುವ ವೇಳೆಗೆ ಅದಾಗಲೇ ಆನೆಯನ್ನು ನೋಡುವ ಸಲುವಾಗಿ ಅಂಥ ಹಳ್ಳಿಯಲ್ಲೂ ಜನರು ಬರಲು ಆರಂಭಿಸಿದ್ದರು. ಅಂತೂ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದರು.

ಎಷ್ಟೇ ಹರಸಾಹಸ ಪಟ್ಟರೂ ಕೆರೆ ಬಿಟ್ಟು ಬರಲೊಲ್ಲದ ಆನೆ ಒಂದು ಕಡೆ, ಊರಿಗೆ ಬಂದಿರುವ ಕಾಡಾನೆಯನ್ನು ನೋಡಲು ಸೇರುತ್ತಿರುವ ಅಪಾರ ಸಂಖ್ಯೆಯ ಜನರು ಮತ್ತೊಂದು ಕಡೆ. ಇದೀಗ ಇನ್ನೂ ಎಷ್ಟು ಸಮಯ ಈ ಕಾರ್ಯಾಚರಣೆ ಮುಂದುವರಿಯತ್ತದೋ ಕಾದು ನೋಡಬೇಕಾಗಿದೆ. ಒಂದು ಸಲ ಕೆರೆಯಿಂದ ಆಚೆ ಬಂದು, ಕಾಡಿಗೆ ಆನೆಯನ್ನು ಅಟ್ಟಿದರೆ ಗ್ರಾಮಸ್ಥರಿಗೆ ನೆಮ್ಮದಿ.












Click it and Unblock the Notifications