ಕೆಲವು ನಿಬಂಧನೆಗಳೊಂದಿಗೆ ಜು.1ರಿಂದ ಹೊರನಾಡು ದೇವಾಲಯ ಓಪನ್
ಚಿಕ್ಕಮಗಳೂರು, ಜೂನ್ 25: ಜೂನ್ 8 ರಿಂದ ರಾಜ್ಯಾದ್ಯಂತ ಎಲ್ಲಾ ದೇವಾಲಯಗಳಲ್ಲೂ ಭಕ್ತರ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿದ್ದರೂ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಭಕ್ತರ ದರ್ಶನಕ್ಕೆ ಬ್ರೇಕ್ ಹಾಕಿತ್ತು. ಇದೀಗ ಜುಲೈ 1 ರಿಂದ ಅನ್ನಪೂರ್ಣೇಶ್ವರಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಿರುವುದಾಗಿ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ದೇವಸ್ಥಾನಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬಂದ ಭಕ್ತರಿಗೆ ಅವಕಾಶ ನೀಡಲಾಗಿದೆ. ಭಕ್ತರು ಆನ್ ಲೈನ್ ಮೂಲಕ ಟಿಕೆಟ್ ಪಡೆದು ಬರಬೇಕು ಎಂದು ತಿಳಿಸಲಾಗಿದೆ. ಆನ್ ಲೈನ್ ಬುಕ್ಕಿಂಗ್ ಇಲ್ಲದವರಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಆನ್ ಲೈನ್ ನಲ್ಲಿ ಭಕ್ತರಿಗೆ ನೀಡಿದ ಟೈಂ ನಲ್ಲಷ್ಟೇ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿದುಬಂದಿದೆ.

ಲಾಕ್ ಡೌನ್ ನಿಂದ ಅನ್ನಪೂರ್ಣೇಶ್ವರಿ ದರ್ಶನ ಸ್ಥಗಿತವಾಗಿತ್ತು. ಭಕ್ತರ ಹಿತದೃಷ್ಟಿ ಹಾಗೂ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇವಸ್ಥಾನ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿತ್ತು. ಕೆಲವೊಂದು ಧಾರ್ಮಿಕ ಕೈಂಕರ್ಯಗಳಿಗೆ ಸಮಸ್ಯೆ ಆಗುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ತೆರೆಯುವುದಿಲ್ಲ ಎಂದು ಧರ್ಮದರ್ಶಿ ಭೀಮೇಶ್ವರ ಜೋಶಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದರು. ಇದೀಗ ಜುಲೈ ಒಂದರಿಂದ ಕೆಲವು ನಿಬಂಧನೆಗಳೊಂದಿಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications