ಮಲೆನಾಡಿನಲ್ಲಿ ಅಬ್ಬರಿಸಿದ ವರ್ಷದ ಮೊದಲ ಮಳೆ; ಭಾರೀ ಗಾಳಿಗೆ ಮನೆಗಳಿಗೆ ಹಾನಿ
ಚಿಕ್ಕಮಗಳೂರು, ಮಾರ್ಚ್ 19: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ವರ್ಷದ ಮೊದಲ ಮಳೆ ಅಬ್ಬರಿಸಿ ಬೊಬ್ಬಿರಿದಿದೆ. ಇದರಿಂದ ಕಳೆದ ಮೂರು ವರ್ಷಗಳಿಂದ ಮಳೆಯಲ್ಲಿ ತೊಯ್ದು ಬದುಕಿದ್ದ ಮಲೆನಾಡಿಗರು ವರ್ಷದ ಮೊದಲ ಮಳೆಯೇ ಹೀಗಾದರೆ ಮುಂದೆ ಹೇಗೋ ಎಂದು ಆತಂಕಕ್ಕೀಡಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಕೆಲವೆಡೆ ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿದಿದೆ. ಕಳಸ, ಮೂಡಿಗೆರೆ, ಶೃಂಗೇರಿ ಹಾಗೂ ಎನ್.ಆರ್. ಪುರದಲ್ಲಿ ಭಾರೀ ಮಳೆ ಸುರಿದಿದ್ದು, ಮಳೆ ಕಂಡು ಜನ ಭವಿಷ್ಯದ ಭಯದಲ್ಲಿದ್ದಾರೆ.
ಕಳಸದಲ್ಲಿ ಭಾರೀ ಮಳೆಗೆ ರಸ್ತೆ ಬದಿಯ ವಿದ್ಯುತ್ ಕಂಬಗಳು ಧರೆಗುರುಳಿವೆ. ರಸ್ತೆಯ ಬದಿಯ ಮರಗಳು ಕೂಡ ಅಕ್ಕಪಕ್ಕದ ಮನೆ-ಅಂಗಡಿಗಳ ಮೇಲೆ ಮುರಿದು ಬಿದ್ದಿವೆ. ಕಳಸ ತಾಲೂಕಿನ ಮೇಲಂಗಡಿ ಗ್ರಾಮದ ರಾಜಶೇಖರ್ ಎಂಬುವರ ಮನೆ ಮೇಲೆ ತೆಂಗಿನ ಮರವೊಂದು ಬುಡಸಮೇತ ಬಿದ್ದು ಮನೆ ಹಾಗೂ ಗೃಹಪಯೋಗಿ ವಸ್ತುಗಳು ಸಂಪೂರ್ಣ ಜಖಂಗೊಂಡಿವೆ.

ಮನೆಯವರು ಮಳೆ ಬರುತ್ತಿದೆ ಎಂದು ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗಿದ್ದರು. ಈ ವೇಳೆ ಮನೆ ಮೇಲೆ ಮರ ಬಿದ್ದಿದ್ದರಿಂದ ಭಾರೀ ಅನಾಹುತವೊಂದು ಕೂದಲೆಳೆ ಅಂತರದಿಂದ ಪಾರಾಗಿದೆ. ಅದೃಷ್ಟವಶಾತ್ ಮರ ಬಿದ್ದಾಗ ಮನೆಯಲ್ಲಿ ಯಾರೂ ಇರಲಿಲ್ಲ.
ಕಳಸದಲ್ಲಿ ಬೀಸಿದ ಭಾರೀ ಗಾಳಿಗೆ ರಸ್ತೆ ಬದಿಯ ಮುಗಿಲೆತ್ತರದ ತೆಂಗಿನಮರಗಳ ಗರಿಗಳು ಮುರಿದು ಬಿದ್ದಿವೆ. ಮನೆ ಮೇಲೆ ಹಾಕಿದ್ದ ಕಬ್ಬಿಣದ ತಗಡಿನ ಶೀಟ್‌ಗಳು ಕೂಡ ಗಾಳಿಗೆ ಹಾರಿ ಹೋಗಿವೆ. ಮೊದಲ ವರ್ಷಧಾರೆಯ ಅಬ್ಬರ ಕಂಡು ಮಲೆನಾಡಿಗರು ಹೈರಾಣಾಗಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ನಮ್ಮ ಬದುಕು ಸಂಪೂರ್ಣ ಮಳೆಯಲ್ಲಿ ನೆನೆಯುತ್ತಿದೆ. ಕಳೆದುಕೊಂಡಿದ್ದನ್ನು ಇನ್ನೂ ಗಳಿಸಲು ಸಾಧ್ಯವಾಗಿಲ್ಲ. ಸರ್ಕಾರ ಕೂಡ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಎಷ್ಟೋ ಕುಟುಂಬಗಳು ಇನ್ನೂ ಅಲೆಮಾರಿಗಳಂತೆ ಬದುಕುತ್ತಿದ್ದಾರೆ. ಆದರೆ, ಈ ವರ್ಷವೂ ಆರಂಭದಲ್ಲಿ ಹೀಗೆ ಸುರಿಯುತ್ತಿರುವ ಈ ಮಳೆರಾಯ ಮುಂದಿನ ದಿನಗಳಲ್ಲಿ ಮತ್ತಿನ್ನೇನು ಅವಾಂತರ ಸೃಷ್ಟಿಸುತ್ತಾನೋ ಎಂದು ಮಲೆನಾಡಿಗರು ಈಗಲೇ ಆತಂಕಕ್ಕೀಡಾಗಿದ್ದಾರೆ.
ಇಳೆಗೆ ತಂಪೆರೆದ ವರುಣ
ಈ ಮಳೆ ಹಾಗೂ ಜನರ ಆತಂಕದ ಮಧ್ಯೆಯೂ ಭಾರೀ ಬಿಸಿಲಿನಿಂದ ಕಾದ ಕಾವಲಿಯಂತಾಗಿದ್ದ ಭೂಮಿ ತಾಯಿಗೆ ವರುಣದೇವ ತಂಪೆರೆದಿದ್ದಾನೆ. ತೋಟಕ್ಕೆ ನೀರಾಯಿಸಲು ಹೋರಾಡುತ್ತಿದ್ದ ಕಾಫಿ-ಅಡಿಕೆ-ಮೆಣಸು ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ. ವರ್ಷದ ಮೊದಲ ಮಳೆ ಮಲೆನಾಡಲ್ಲಿ ಆಶಾದಾಯಕವಾಗಿ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಮಳೆರಾಯ ಕೋಪ-ತಾಪ ಹೇಗಿರುತ್ತದೋ ಕಾದುನೋಡಬೇಕು.
ಕ್ರೀಡಾಂಗಣದಲ್ಲಿ ಸಿಕ್ಕ ಬ್ರಾಸ್‌ಲೇಟ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಯುವಕ
ಕ್ರೀಡಾಂಗಣದಲ್ಲಿ ಸಿಕ್ಕ ಬ್ರಾಸ್‌ಲೇಟ್‌ನ್ನು ಯುವಕನೋರ್ವ ಎರಡು ದಿನಗಳ ಬಳಿಕ ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ಮೂಡಿಗೆರೆ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಪತ್ನಿ ಜೊತೆ ವಾಯುವಿಹಾರಕ್ಕೆಂದು ಹೋದ ಸಂದರ್ಭದಲ್ಲಿ ಮೂಡಿಗೆರೆ ನಿವಾಸಿ ಪವನ್ ಎಂಬುವರು ಕೈಯಲ್ಲಿದ್ದ 11 ಗ್ರಾಂ ತೂಕದ ಬ್ರಾಸ್‌ಲೇಟ್ ಕಳೆದುಕೊಂಡಿದ್ದರು. ಎರಡು ದಿನಗಳ ಕಾಲ ಎಷ್ಟೇ ಹುಡುಕಾಡಿದರೂ ಬ್ರಾಸ್‌ಲೇಟ್ ಸಿಕ್ಕಿರಲಿಲ್ಲ.
ಎರಡು ದಿನದ ಬಳಿಕ ಅದೇ ಬ್ರಾಸ್‌ಲೇಟ್ ಪ್ರದೀಪ್ ಎಂಬ ಯುವಕನಿಗೆ ಸಿಕ್ಕಿದೆ. ತಕ್ಷಣ ಆ ಯುವಕ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರನ್ನು ಕೇಳಿದ್ದಾನೆ. ಯಾರಾದರೂ ಬ್ರಾಸ್‌ಲೇಟ್ ಕಳೆದುಕೊಂಡು ಹುಡುಕುತ್ತಿದ್ದಾರಾ ಎಂದು ಕೇಳಿದ್ದಾನೆ. ಆಗ ಕ್ರಿಕೆಟ್ ಆಡುತ್ತಿದ್ದ ಹುಡುಗರು ಪವನ್ ಕಳೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಬಳಿಕ ಬ್ರಾಸ್‌ಲೇಟ್ ಸಿಕ್ಕ ಯುವಕ ಪವನ್‌ರಿಂದ ಡಿಸೈನ್ ಹಾಗೂ ತೂಕದ ಮಾಹಿತಿ ಪಡೆದು ಬ್ರಾಸ್‌ಲೇಟ್ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾನೆ. ಶುಕ್ರವಾರ ಕ್ರೀಡಾಂಗಣದಲ್ಲಿ ಪವನ್ ದಂಪತಿಗೆ ಪ್ರದೀಪ್ ಬ್ರಾಸ್‌ಲೇಟ್ ಹಿಂದಿರುಗಿಸಿದ್ದಾರೆ.
ಬ್ರಾಸ್‌ಲೇಟ್ ಬೆಲೆ ಸುಮಾರು 70 ಸಾವಿರ ರೂ. ಬೆಲೆ ಬಾಳಲಿದೆ. ಆಧುನಿಕ ಜಗತ್ತಿನಲ್ಲಿ ಹಣ, ಚಿನ್ನಕ್ಕಾಗಿ ದರೋಡೆ, ಕೊಲೆ, ಕಳ್ಳತನ ನಡೆಯುತ್ತಿವೆ. ಚಿನ್ನದ ಬೆಲೆ ಗಗನ ಮುಟ್ಟಿದೆ. ಹೀಗಿರುವಾಗ ಕೈಗೆ ಸಿಕ್ಕ ಚಿನ್ನವನ್ನು ಅದರ ವಾರಸುದಾರರನ್ನು ಹುಡುಕಿ ಹಿಂದಿರುಗಿಸಿರುವ ಯುವಕ ಪ್ರದೀಪ್ ನಡೆ ಸಮಾಜಕ್ಕೆ ಮಾದರಿಯಾಗಿದೆ. ಬ್ರಾಸ್‌ಲೇಟ್ ಕಳೆದುಕೊಂಡಿದ್ದ ದಂಪತಿ ಪ್ರದೀಪ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.












Click it and Unblock the Notifications