ಕಾಫಿನಾಡಿನಲ್ಲಿ ಜೋರಾದ ಮಳೆಯ ಆರ್ಭಟ: ಶೃಂಗೇರಿಯಲ್ಲಿ ಭೂಕುಸಿತ
ಚಿಕ್ಕಮಗಳೂರು, ಜುಲೈ 08: ಮಲೆನಾಡಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಮಳೆಯ ಆರ್ಭಟಕ್ಕೆ ಮನೆ ಮುಂದೆ ಭೂ ಕುಸಿತ ಉಂಟಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೇಗಲುಬೈಲು ಗ್ರಾಮದಲ್ಲಿ ನಡೆದಿದೆ.
ಮನೆ ಮುಂದೆ ಭೂ ಕುಸಿತದಿಂದ ಕುಟುಂಬಸ್ಥರಲ್ಲಿ ಆತಂಕ ಉಂಟಾಗಿದೆ, ಅವೈಜ್ಞಾನಿಕ ರಸ್ತೆ ನಿರ್ಮಾಣ ದಿಂದ ಭೂ ಕುಸಿತವಾಗಿದೆ ಎಂದು ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆ ಮುಂದೆಯೇ ಭೂ ಕುಸಿತದಿಂದ ಬಡ ಕುಟುಂಬಗಳು ಭಯದಲ್ಲೇ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೇಗಲುಬೈಲು ಗ್ರಾಮದ ವೇದಾ, ಪುಟ್ಟ ಎಂಬುವರಿಗೆ ಸೇರಿದ ಮನೆ ಮುಂದೆ ಭೂ ಕುಸಿತವಾಗಿದ್ದು ಸೂಕ್ತ ಪರಿಹಾರ ನೀಡುವಂತೆ ಕುಟುಂಬಸ್ಥರು ಆಗ್ರಹ ಮಾಡಿದ್ದಾರೆ.

ಮಳೆಯ ಆರ್ಭಟಕ್ಕೆ ಮನೆ ಮುಂದಿದ್ದ ತಡೆಗೋಡೆ ಕುಸಿತ
ಮಳೆಯಿಂದ ಸಾಕಷ್ಟು ಅನಾವುತಗಳೇ ಸೃಷ್ಟಿಯಾಗುತ್ತಿವೆ. ಮಳೆಯ ಆರ್ಭಟಕ್ಕೆ ಮನೆಯ ಮುಂದೆ ನಿರ್ಮಿಸಿದ್ದ ತಡೆಗೋಡೆ ಕುಸಿತವಾಗಿದೆ. ಜಿಲ್ಲೆಯ ಕೊಪ್ಪ ತಾಲೂಕಿನ ಹೊಸಮನೆ ಕೆಸವೆ ಗ್ರಾಮದಲ್ಲಿ ಘಟನೆ ನಡೆದಿದ್ದು ಕುಟುಂಬಸ್ಥರು ಕಂಗಲಾಗಿದ್ದಾರೆ. ಧಾರಾಕಾರವಾಗಿ ಸುರಿದ ಮಳೆಯಿಂದ ಮನೆಯ ತಡೆಗೋಡೆ ಕುಸಿತವಾಗಿದ್ದು ಮಲೆನಾಡಿಗರು ಭಯದಲ್ಲೇ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಮರ, ಮನೆಯ ಮೇಲ್ಚಾವಣಿಗೆ ಹಾನಿ
ಗಾಳಿ-ಮಳೆಗೆ ಮನೆ ಮೇಲೆ ಮರ ಬಿದ್ದು ಮನೆಯ ಮೇಲ್ಚಾವಣಿಗೆ ಹಾನಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೆಗ್ಗಾರುಕುಡಿಗೆ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು ಮಳೆಯ ಆರ್ಭಟಕ್ಕೆ ಅಲ್ಲಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಜೋರಾದ ಗಾಳಿ-ಮಳೆಗೆ ಮನೆ ಮೇಲೆ ಮರ ಬಿದ್ದು ಮನೆಯ ಮೇಲ್ಚಾವಣಿ ಸಂಪೂರ್ಣ ಹಾನಿಯಾಗಿದ್ದು ಮನೆ ಮಾಲೀಕರು ಕಂಗಲಾಗಿದ್ದಾರೆ
ಉಕ್ಕಿ ಹರಿಯುತ್ತಿರುವ ಹಳ್ಳ ದಾಟಲು ಕಾಲು ಸಂಕವೇ ಆಸರೆ, ಸ್ವಲ್ಪ ಯಾಮಾರಿದ್ರು ಜೀವಕ್ಕೆ ಕುತ್ತು!
ಮಲೆನಾಡಲ್ಲಿ ಸುರಿಯುತ್ತಿರುವ ಮಳೆಯಿಂದ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಇನ್ನು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕೊಣಬೈಲು, ಹಡ್ಲು ಮನೆ ಗ್ರಾಮಸ್ಥರು ಹಳ್ಳವನ್ನ ದಾಟಿಯೇ ಊರಿಗೆ ಹೋಗಬೇಕು, ಹಳ್ಳ ದಾಟಲು ಕಾಲು ಸಂಕವೇ ಇವರಿಗೆ ಆಸರೆಯಾಗಿದ್ದು ಸ್ವಲ್ಪ ಯಾಮಾರಿದರೂ ಜೀವಕ್ಕೆ ಕುತ್ತು ಬರಲಿದೆ.

ಮಳೆ ಆರಂಭವಾಗುತ್ತಿದ್ದಂತೆ ಈ ಗ್ರಾಮದ ಜನರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕು, ಕೊಣಬೈಲು, ಹಡ್ಲುಮನೆಯ 15 ಕುಟುಂಬಗಳು ಪ್ರಾಣಭಯದಲ್ಲೇ ಸಂಚಾರ ಮಾಡಬೇಕಿದೆ. ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಎಲ್ಲರೂ ಈ ಹಳ್ಳವನ್ನ ದಾಟಿ ಮನೆ ಸೇರಬೇಕಾಗಿದೆ. ಇನ್ನು ಹತ್ತಾರು ವರ್ಷಗಳಿಂದ ಕಿರು ಸೇತುವೆ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರಿಂದ ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲ ಮುಗಿದ ಮೇಲಾದರೂ ನಮಗೆ ಕಿರು ಸೇತುವೆಯೊಂದು ನಿರ್ಮಿಸಿ ಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.












Click it and Unblock the Notifications