ಕಾಪಿನಾಡು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮುಂದುವರಿದ ಗುಡುಗು, ಸಿಡಿಲು ಸಹಿತ ಮಳೆ
ಚಿಕ್ಕಮಗಳೂರು, ಮೇ, 23: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಈಗಾಗಲೇ ಮಳೆರಾಯನ ಆರ್ಭಟದಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಮತ್ತೆ ಇಂದು ಜಿಲ್ಲೆಯ ಕಳಸ, ಶೃಂಗೇರಿ, ಕೊಪ್ಪ, ಜಯಪುರ ಭಾಗದಲ್ಲಿ ಭಾರಿ ಮಳೆ ಸುರಿದ ಕಾರಣ ಇಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಕೊಪ್ಪ, ಜಯಪುರ ಭಾಗದಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜ್ಯದ ಹಲವೆಡೆ ಈಗಾಗಲೆ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದು, ಇದರ ಪರಿಣಾಮ ಸಾಕಷ್ಟು ಅನಾಹುತಗಳು ಸಂಭವಿಸುತ್ತಲೇ ಇವೆ. ಕೆಲವರು ಕೃಷಿ ಭೂಮಿ, ಮನೆ ಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇನ್ನು ಕೆಲವರು ಸಾವನಪ್ಪಿರುವ ದುರ್ಘಟನೆಗಳು ಕೂಡ ನಡೆದಿವೆ. ಇದೀಗ ಜಿಲ್ಲೆಯಲ್ಲಿ ಸುರಿದಿರುವ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದರೆ, ಕೆಲವೆಡೆ ಜನರ ಜೀವನ ಮಳೆ ನೀರಿನಲ್ಲಿ ಮುಳುಗಿದಂತಾಗಿದೆ.

ಮನೆ ಕಳೆದುಕೊಂಡು ಕಣ್ಣೀರಿಟ್ಟ ಕುಟುಂಬ
ಇನ್ನು ಹಾಸನ ಜಿಲ್ಲೆಯಲ್ಲೂ ಕೀಡ ಮಳೆರಾಯ ಭಾರಿ ಅವಾಂತರ ಸೃಷ್ಟಿಸಿದ್ದಾನೆ. ಹಾಸನದಲ್ಲಿ ಬಡ ಮುಸ್ಲಿಂ ಕುಟುಂಬವೊಂದು ಸಾಲಸೋಲ ಮಾಡಿ ಮನೆಯಲ್ಲಿದ್ದ ಹೆಣ್ಣುಮಗಳ ಮದುವೆಯನ್ನು ಜೂನ್ 4ಕ್ಕೆ ದಿನಾಂಕ ನಿಗದಿ ಮಾಡಿದ್ದರು. ಅಲ್ಲದೆ ಮದುವೆಗೆ ಬೇಕಾದ ಬಟ್ಟೆ ಸೇರಿ ಎಲ್ಲಾ ವಸ್ತುಗಳನ್ನು ತಂದಿದ್ದರು.
ಆದರೆ ಗುಡುಗು ಸಹಿತ ಭಾರೀ ಮಳೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲವೂ ಸಂಪೂರ್ಣ ಜಲಾವೃತವಾಗಿವೆ. ಹೀಗೆ ನೀರಿನಲ್ಲಿ ನೆನೆದಿದ್ದ ಎಲ್ಲಾ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಟ್ಟು, ಮದುವೆಗೆ ತಯಾರಿ ಮಾಡಲು ಆಗದೇ ಬೀದಿಯಲ್ಲಿ ನಿಂತು ಕಣ್ಣೀರಿಡುತ್ತಿದ್ದಾರೆ.
ಮದುವೆ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ವರುಣ ಅವಕೃಪೆಯಿಂದ ಆತಂಕದ ಛಾಯೆ ಆವರಿಸಿದೆ. ಸಾಲಸೋಲ ಮಾಡಿ ತಂದಿದ್ದ ಬಟ್ಟೆ ಬರೆಗಳೆಲ್ಲವೂ ನೀರುಪಾಲಾಗಿವೆ. ಸುಣ್ಣಬಣ್ಣ ಬಳಿಯುವ ಪ್ಲಾನ್ ಮಾಡಿದ್ದ ಕುಟುಂಬ ಈಗ ಮುರಿದುಬಿದ್ದಿರುವ ಮನೆ ರೆಡಿ ಮಾಡುವುದಕ್ಕೆ ಮುಂದಾಗಬೇಕಿದೆ. ಇನ್ನು ಇದಕ್ಕೆ ಸಂಬಂಧಪಟಗಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಸೂಕ್ತ ಪರಿಹಾರ ಕೊಡಿಸಬೇಕು ಎಂದು ಕುಟುಂಬ ಕಣ್ಣೀರಿಡುತ್ತಾ ಒತ್ತಾಯ ಮಾಡಿದೆ.
ಮದುವೆಗೆ ತಂದಿದ್ದ ಹೊಸ ಬಟ್ಟೆಗಳೂ ಕೂಡ ನೀರಿನಲ್ಲಿ ಹರಿದುಕೊಂಡು ಹೋಗಿವೆ. ಅಷ್ಟೇ ಅಲ್ಲದೇ ಅವರಿದ್ದ ಜಾಗದಲ್ಲಿ ವರುಣಾರ್ಭಟ ಹೆಚ್ಚಿದ್ದ ಕಾರಣ, ಮನೆಗಳ ಹೆಂಚು, ಶೀಟ್‌ಗಳು ಗಾರಿಗೆ ಹಾರಿಹೋಗಿವೆ. ವಿದ್ಯುತ್ ಕಂಬಗಳು ಧರೆಗುರುಳಿವೆ. ಇಷ್ಟೆಲ್ಲ ಅವಾಂತರವಾಗಿದ್ದರೂ ಬಂದು ನೋಡದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಬಡಾವಣೆಯ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ನಗರದ ಹೊರ ವಲಯ ದೇವೇಗೌಡ ನಗರದಲ್ಲಿ ನಿನ್ನೆ ಬಿರುಗಾಗಿ ಸಮೇತ ಭಾರಿ ಮಳೆ ಸುರಿದ ಪರಿಣಾಮ ಮನೆಯ ಮೇಲ್ಚಾವಣಿಗಳು ಹಾರಿಹೋಗಿವೆ. ಹೀಗೆ ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಇದರಿಂದ ಹಲವು ಕುಟುಂಬಗಳು ಬೀದಿಗೆ ಬಂದ ಘಟನೆಯೂ ನಡೆದಿದೆ. ಅಲ್ಲದೆ ಗುಡುಗು, ಗಾಳಿ ಸಹಿತದ ಭಾರೀ ಮಳೆಗೆ ಬಡಾವಣೆಯ ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಲವೆಡೆ ಮಳೆ
ಇತ್ತೀಚೆಗಷ್ಟೇ ಚಿತ್ರದುರ್ಗ ಜಿಲ್ಲೆಯ ಬಿರುಗಾಳಿ ಮಳೆಗೆ ಜಿಲ್ಲೆಯ ಹಲವೆಡೆ ಗಿಡಮರಗಳು ಧರೆಗುರುಳಿದ್ದು, ಇದರಿಂದ ಸಾಕಷ್ಟು ಅನಾಹುತಗಳು ಸಂಭವಿಸಿದ್ದವು. ಅಲ್ಲದೆ ಹಲವೆಡೆ ಕೃಷಿ ಭೂಮಿಗಳು ಜಲಾವೃತವಾಗಿದ್ದವು. ಮತ್ತೊಂದೆಡೆ ಓರ್ವ ಮಹಿಳೆ ಸಿಡಿಲಿಗೆ ಬಲಿಯಾದ ಘಟನೆಯೂ ಜಿಲ್ಲೆಯಲ್ಲಿ ನಡೆದಿತ್ತು.
ಚಿತ್ರದುರ್ಗ ಜಿಲ್ಲೆಯ ಚಿಕ್ಕಗೊಂಡನಹಳ್ಳಿ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯಮ್ಮ (47) ವರ್ಷ ಸಿಡಿಲಿಗೆ ಬಲಿಯಾಗಿದ್ದರು. ಬಿರುಗಾಳಿ ಸಮೇತ ಮಳೆ ಸುರಿದ ಹಿನ್ನೆಲೆಯಲ್ಲಿ ಜಮೀನಿನಲ್ಲಿದ್ದ ಹುಣಸೆ ಮರದ ಅಡಿಯಲ್ಲಿ ನಿಂತುಕೊಂಡಾಗ ಸಿಡಿಲು ಬಡಿದು ಭಾಗ್ಯಮ್ಮ ಸಾವನ್ನಪ್ಪಿದ್ದರು.
ಇನ್ನು ಹಿರಿಯೂರು ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಡರಾತ್ರಿ ಬಿರುಗಾಳಿ ಮಳೆಯ ಆರ್ಭಟಕ್ಕೆ ಅಪಾರ ಗಿಡಮರಗಳು ಧರೆಗುರುಳಿವೆ. ಗುಡುಗು, ಸಿಡಿಲು, ಮಿಂಚು ಸಹಿತ ಮಳೆಯಾದ ಹಿನ್ನೆಲೆ ಬಾಳೆ, ತೆಂಗು, ಅಡಿಕೆ, ದಾಳಿಂಬೆ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ. ತಾಲೂಕಿನ ಮ್ಯಾಕ್ಲೂರಹಳ್ಳಿ ವ್ಯಾಪ್ತಿಯ ಹೊಸಹಟ್ಟಿ ಗ್ರಾಮದ ರಂಗಸ್ವಾಮಿ ಅವರಿಗೆ ಸೇರಿದ ಫಸಲಿಗೆ ಬಂದಿದ್ದ ಬಾಳೆ ತೋಟ ಸಂಪೂರ್ಣವಾಗಿ ನೆಲಕಚ್ಚಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನುವ ಮಾಹಿತಿ ತಿಳಿದುಬಂದಿತ್ತು.












Click it and Unblock the Notifications