ಚಿಕ್ಕಮಗಳೂರು-ಹಾಸನ ನೂತನ ರೈಲು ಮಾರ್ಗ: ಅಪ್‌ಡೇಟ್
ಚಿಕ್ಕಮಗಳೂರು, ಮಾರ್ಚ್ 09: ಚಿಕ್ಕಮಗಳೂರು-ಹಾಸನ ನಡುವಿನ ಹೊಸ ರೈಲು ಮಾರ್ಗದ ಕುರಿತು ಅಪ್‌ಡೇಟ್ ಸಿಕ್ಕಿದೆ. ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ವ್ಯಾಪ್ತಿಗೆ ಒಳಪಡುವ ಯೋಜನೆ ಇದಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ 50ರ ವೆಚ್ಚ ಹಂಚಿಕೆ ಪಾಲುದಾರಿಕೆಯಲ್ಲಿ ಈ ಯೋಜನೆಯನ್ನು ಕೈಗೊಂಡಿವೆ. ಸದ್ಯ 10 ಕಿ. ಮೀ. ಮಾರ್ಗ ರೈಲುಗಳ ಪ್ರಾಯೋಗಿಕ ಸಂಚಾರಕ್ಕೆ ಮುಕ್ತವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಚಿಕ್ಕಮಗಳೂರು-ಹಾಸನ ನಡುವಿನ ಹೊಸ ರೈಲು ಮಾರ್ಗದ ಇತ್ತೀಚಿನ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಹಾದಿಹಳ್ಳಿ ತನಕದ 10 ಕಿ. ಮೀ. ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ ಎಂದು ಮಾಹಿತಿ ನೀಡಲಾಗಿದೆ. ಈ ಯೋಜನೆಗೆ ಮೊದಲ ಹಂತದಲ್ಲಿ ಈ ಪ್ರದೇಶದ ಭೂ ಸ್ವಾಧೀನ ನಡೆದಿತ್ತು, ಈಗ ಕಾಮಗಾರಿ ಪೂರ್ಣಗೊಂಡಿದೆ.

ಚಿಕ್ಕಮಗಳೂರು-ಹಾಸನ ನಡುವಿನ ಹೊಸ ರೈಲು ಮಾರ್ಗ ವಯಾ ಬೇಲೂರು, ಆಲೂರು ಮೂಲಕ ಹಾದು ಹೋಗುತ್ತದೆ. ಈ ಮಾರ್ಗದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಯೋಜನೆ ಪೂರ್ಣಗೊಂಡರೆ ಎರಡು ಜಿಲ್ಲೆಗಳ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ. ಎರಡೂ ಜಿಲ್ಲೆಗಳು ಪ್ರವಾಸಿ ಕೇಂದ್ರಗಳಾಗಿದ್ದು, ಪ್ರವಾಸಿಗರಿಗೂ ಸಹಾಯಕವಾಗಲಿದೆ.
ಹೊಸ ರೈಲು ಮಾರ್ಗ: ಚಿಕ್ಕಮಗಳೂರು-ಹಾಸನ ನಡುವೆ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ 2019-20ರಲ್ಲಿ ಅನುಮೋದನೆ ದೊರೆಯಿತು. 54 ಕಿ. ಮೀ. ನಡುವಿನ ರೈಲು ಮಾರ್ಗವನ್ನು ಕೇಂದ್ರ, ರಾಜ್ಯ ಸರ್ಕಾರಗಳು ವೆಚ್ಚ ಹಂಚಿಕೆ ಆಧಾರದ ಮೇಲೆ ಕೈಗೊಂಡಿವೆ. ಸುಮಾರು 748.85 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ.
ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅದನ್ನು ರೈಲ್ವೆ ಇಲಾಖೆಗೆ ಉಚಿತವಾಗಿ ಹಸ್ತಾಂತರ ಮಾಡುವುದು ಸಹ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಈ ಯೋಜನೆಗೆ ಮೊದಲು ಚಿಕ್ಕಮಗಳೂರು-ಹಾದಿಹಳ್ಳಿ ನಡುವಿನ ಭೂ ಸ್ವಾಧೀನ ಪೂರ್ಣಗೊಳಿಸಿ ಚಿಕ್ಕಮಗಳೂರು ಜಿಲ್ಲಾಡಳಿತ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಿತ್ತು.
ಟೆಂಡರ್ ಪಡೆದವರಿಗೆ 2024ರ ಮಾರ್ಚ್‌ಗೆ ಚಿಕ್ಕಮಗಳೂರು-ಹಾದಿಹಳ್ಳಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುರಿ ನೀಡಿತ್ತು. ಈಗ ಕಾಮಗಾರಿ ಮುಕ್ತಾಯಗೊಂಡಿದೆ. ಹಾದಿಹಳ್ಳಿ-ಬೇಲೂರು ನಡುವಿನ ಕಾಮಗಾರಿಯನ್ನು 2026ರ ಮಾರ್ಚ್‌ಗೆ ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಬೇಲೂರು-ಹಾಸನ ನಡುವಿನ ಕಾಮಗಾರಿಗೆ 554 ಎಕರೆ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಚಿಕ್ಕಮಗಳೂರು-ಹಾಸನ ನಡುವೆ ರೈಲು ಸಂಚಾರ ಆರಂಭವಾದರೆ ಜಿಲ್ಲೆಯ ಅಭಿವೃದ್ಧಿ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಹಾಸನ-ಬೆಂಗಳೂರು, ಹಾಸನ-ಮೈಸೂರು ನಡುವೆ ನೇರ ರೈಲು ಮಾರ್ಗವಿದೆ. ಹಾಸನ-ಚಿಕ್ಕಮಗಳೂರು ನಡುವೆ ಈಗ ರೈಲು ಮಾರ್ಗ ನಿರ್ಮಾಣವಾಗುತ್ತಿದೆ. ಎರಡೂ ಜಿಲ್ಲೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ರೈಲು ಸೇವೆ ಅನುಕೂಲ ಮಾಡಿಕೊಡಲಿದೆ.
ಸದ್ಯ ಚಿಕ್ಕಮಗಳೂರಿಗೆ ಬೆಳಗ್ಗೆ ಮತ್ತು ಸಂಜೆ ರೈಲು ಬರುತ್ತದೆ. ಶಿವಮೊಗ್ಗ, ಕಡೂರಿನಿಂದ ಬರುವ ರೈಲು ಸೇವೆ ಮಾತ್ರವಿದೆ. ಹಾಸನ-ಚಿಕ್ಕಮಗಳೂರು ನೂತನ ರೈಲು ಮಾರ್ಗ ಪೂರ್ಣಗೊಂಡರೆ ಹಲವು ರೈಲುಗಳು ಜಿಲ್ಲೆಗೆ ಆಗಮಿಸಬಹುದು. ಆಗ ಜಿಲ್ಲೆಯ ಜನರು ಹಾಸನ, ಮೈಸೂರು, ಬೆಂಗಳೂರಿಗೆ ಪ್ರಯಾಣ ಬೆಳೆಸಲು ಸಹ ಅನುಕೂಲವಾಗಲಿದೆ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೆಲವು ದಿನಗಳ ಹಿಂದೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಭೇಟಿಯಾಗಿದ್ದರು. ಚಿಕ್ಕಮಗಳೂರು-ತಿರುಪತಿ ವಯಾ ಬೆಂಗಳೂರು ಹೊಸ ರೈಲು ಓಡಿಸಬೇಕು ಎಂದು ಮನವಿಯನ್ನು ಸಲ್ಲಿಸಿದ್ದರು. ಇದರಿಂದಾಗಿ ಚಿಕ್ಕಮಗಳೂರು-ಬೆಂಗಳೂರು ಸಂಪರ್ಕ ಸುಲಭವಾಗುವ ಜೊತೆಗೆ ಪುಣ್ಯಕ್ಷೇತ್ರ ತಿರುಪತಿಗೆ ಸಂಚಾರ ನಡೆಸುವ ಭಕ್ತರಿಗೆ ಸಹ ಅನುಕೂಲವಾಗಲಿದೆ ಎಂದು ವಿವರಣೆ ನೀಡಿದ್ದರು.
ಚಿಕ್ಕಮಗಳೂರು-ತಿರುಪತಿ ನಡುವೆ ಹೊಸ ರೈಲು ಮಂಜೂರಾತಿಗೆ ರೈಲ್ವೆ ಸಚಿವರಾದ ಶ್ರೀ ವಿ. ಸೋಮಣ್ಣರವರ ಜೊತೆಗೆ ಚರ್ಚಿಸಲಾಯಿತು. ಚಿಕ್ಕಮಗಳೂರಿನಿಂದ ಹೊರಟು ಬೆಂಗಳೂರು ಮಾರ್ಗವಾಗಿ ಹಿಂದುಗಳ ಪವಿತ್ರ ಯಾತ್ರಾಸ್ಥಳವಾದ ತಿರುಪತಿಗೆ ನೂತನ ರೈಲನ್ನು ಮಂಜೂರು ಮಾಡಬೇಕೆಂದು ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರೊಂದಿಗೆ ಚರ್ಚೆ ನಡೆಸಿ ಮನವಿ ನೀಡಲಾಯಿತು ಎಂದು ಸಂಸದರು ಹೇಳಿದ್ದರು.












Click it and Unblock the Notifications