ಗ್ಯಾಸ್ ಸಿಲಿಂಡರ್ ಸ್ಫೋಟ : ಬಾಣೂರು ಗ್ರಾಮದಲ್ಲಿ ಎರಡು ಹಸು, ಒಂದು ಕುರಿ ಸಜೀವ ದಹನ
ಚಿಕ್ಕಮಗಳೂರು, ಆಗಸ್ಟ್, 01: ಮನೆಯ ಗ್ಯಾಸ್ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಜೀವ ದಹನವಾದ ಘಟನೆ ಅಜ್ಜಂಪುರ ತಾಲೂಕಿನ ಶಿವನಿ ಸಮೀಪದ ಬಾಣೂರು ಗ್ರಾಮದಲ್ಲಿ ನಡೆದಿದೆ. ಇನ್ನು ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಬಾಣೂರು ಗ್ರಾಮದಲ್ಲಿ ಇಂದು ಸಿಲಿಂಡರ್‌ಗೆ ಬೆಂಕಿ ತಗುಲಿ ಕೊಟ್ಟಿಗೆ ಹಾಗೂ ಎರಡು ಮನೆಗೆ ಹಾನಿಯಾಗಿದೆ. ಅಲ್ಲದೆ ಈ ವೇಳೆ ಕೊಟ್ಟಿಗೆಯಲ್ಲಿದ್ದ ಎರಡು ಹಸು, ಒಂದು ಕುರಿ ಬೆಂಕಿಗಾಹುತಿಯಾಗಿವೆ. ಹಾಗೂ ಕೆಲ ವಸ್ತುಗಳು ಸುಟ್ಟು ಕರಕಲಾಗಿವೆ. ಇನ್ನು ಮನೆಯಲ್ಲಿದ್ದವರು ಪ್ರಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಈ ಘಟನೆ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಹಾಗೆಯೇ ಕಲುಷಿತ ನೀರು ಕುಡಿದು ಓರ್ವ ಮಹಿಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ ಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಕವಾಡಿಡರಹಟ್ಪಿ ಬಡಾವಣೆಯಲ್ಲಿ ನಡೆದಿದೆ.
ನೀರು ಕುಡಿದು ಅಸ್ವಸ್ಥಗೊಂಡಿದ್ದ ಮಂಜುಳಾ (21) ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ದುರಾದೃಷ್ಟವಶಾತ್ ಮಂಜುಳಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇನ್ನು 20 ಜನರು ಅಸ್ವಸ್ಥಗೊಂಡಿದ್ದು, ಇದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದಾರೆ ಎಂದು ವರದಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಕವಾಡಿಗರಹಟ್ಟಿ ಬಡಾವಣೆಗೆ ನಗರಸಭೆಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು. ಈ ನೀರು ಸೇವಿಸಿ ಜನರು ಏಕಾಏಕಿ ಅಸ್ವಸ್ಥಗೊಂಡಿದ್ದಾರೆ.
ಅಸ್ವಸ್ಥಗೊಂಡವನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ , ಚಿಕಿತ್ಸೆ ನೀಡಲಾಗುತ್ತಿದೆ. ನಗರಸಭೆಯಿಂದ ನೀರು ಸರಬರಾಜು ಮಾಡಲಾಗಿದ್ದು, ನೀರಿನ ಟ್ಯಾಂಕರ್ ಸ್ವಚ್ಚಗೊಳಿಸದೇ ನೀರು ಸರಬರಾಜು ಮಾಡಿರುವುದು ಈ ಘಟನೆಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಕವಾಡಿಗರಹಟ್ಟಿಯ ಜನರು ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆ ನಂತರ ತಿಳಿದು ಬರಬೇಕಿದೆ.












Click it and Unblock the Notifications