ಮಲೆನಾಡಿಗರ ನಿದ್ದೆಗೆಡಿಸಿದ್ದ ಕೊನೆಗೂ ಸೆರೆಯಾದ ಹಾವೇರಿ ಆನೆ ಟಸ್ಕರ್
ಚಿಕ್ಕಮಗಳೂರು, ಆಗಸ್ಟ್, 26: ಕಳೆದ ನಾಲ್ಕೈದು ತಿಂಗಳಿನಿಂದ ಮಲೆನಾಡಿಗರ ನಿದ್ದೆಗೆಡಿಸಿದ್ದ ಕಾಡಾನೆ ಹಾವೇರಿ ಟಸ್ಕರ್ ಅನ್ನು ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿ ಆಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎಲೆಮಡಲು ಗ್ರಾಮದಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಈ ಕಾಡಾನೆ ಹಾವಳಿ ಶುರು ಮಾಡಿತ್ತು. ಹಾವೇರಿಯಲ್ಲಿ ಸೆರೆ ಹಿಡಿದಿದ್ದ ಕಾಡಾನೆಗೆ ಹಾವೇರಿ ಟಸ್ಕರ್ ಎಂದು ಹೆಸರಿಟ್ಟು ಜಿಲ್ಲೆಯ ಭದ್ರಾ ಅಭಯಾರಣ್ಯಕ್ಕೆ ಬಿಟ್ಟಿದ್ದರು. ಆದರೆ ಭದ್ರಾ ಅಭಯಾರಣ್ಯದಿಂದ ಕೊಪ್ಪ ತಾಲೂಕಿನ ಜಯಪುರ ಸುತ್ತಮುತ್ತ ಬೀಡು ಬಿಟ್ಟಿದ್ದ ಕಾಡಾನೆ ನಾಲ್ಕೈದು ತಿಂಗಳಿನಿಂದ ಅಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಭಾರಿ ಸಮಸ್ಯೆಯನ್ನು ಮಾಡಿತ್ತು.
ಹೊಲ, ಗದ್ದೆ, ತೋಟಗಳಲ್ಲಿ ದಾಂದಲೆ ಮಾಡಿ ರೈತರು ಬೆಳೆದ ಬೆಳೆಗಳನ್ನು ಸಂಪೂರ್ಣವಾಗಿ ನಾಶಪಡಿಸಿ ಗೀಳಿಗಿಡುತ್ತಿತ್ತು. ಆನೆ ಕಾಟದಿಂದ ಅಲ್ಲಿನ ಸ್ಥಳೀಯರು ಹೈರಾಣಾಗಿದ್ದರು. ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಈ ಕಾಡಾನೆ ಎಲೆಮಡಿಲು ಗ್ರಾಮದ ಗುಡ್ಡದ ತುದಿಗೆ ಹೋಗಿ ನಿಲ್ಲುತ್ತಿತ್ತು. ಆನೆಯನ್ನು ಬೆದರಿಸಿದರೆ ಎಲ್ಲಿ ಅನಾಹುತಗಳು ಆಗಿಬಿಡುತ್ತವೆ ಎಂದು ಅಧಿಕಾರಿಗಳು ಸುಮ್ಮನಾಗಿದ್ದರು. ಮತ್ತೆ ಮತ್ತೆ ಗೀಳಿಗಿಡುತ್ತಾ ಕಾಡಾನೆ ರೈತರ ಬೆಳೆಗಳನ್ನು ನಾಶ ಮಾಡುತ್ತಿತ್ತು. ಬೇಸತ್ತ ಸ್ಥಳೀಯರು ಆನೆಯನ್ನ ಸೆರೆ ಹಿಡಿದು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಆಗ್ರಹಿಸಿದ್ದರು.

ರೈತರ ಬೆಳೆಗಳನ್ನು ನೆಲಸಮ ಮಾಡಿದ್ದ ಕಾಡಾನೆ
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯಾಧಿಕಾರಿಗಳು ಕಾಡಾನೆ ಸೆರೆಗೆ ಒಂದು ವಾರ ನಿರಂತರ ಪ್ರಯತ್ನವನ್ನು ಮಾಡಿದ್ದರು. ನಿರಂತರ ಕಾಡಾನೆ ಆರ್ಭಟದಿಂದ ಮಲೆನಾಡಿಗರು ಬೇಸತ್ತು ಹೋಗಿದ್ದರು. ಆನೆ ದಾಳಿಯಿಂದ ಕಾಫಿ, ಅಡಿಕೆ, ಮೆಣಸು ಸೇರಿದಂತೆ ಭತ್ತದ ಗದ್ದೆಗಳು ಕೂಡ ನಾಶ ಆಗಿದ್ದವು. ಈ ಹಿನ್ನೆಲೆ ಆನೆ ಸೆರೆ ಹಿಡಿಯಲು ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆ ಬಿಡಾರದಿಂದ ಐದು ಸಾಕಾನೆಗಳನ್ನು ಬಿಟ್ಟಿದ್ದರು.

ಭಾನುಮತಿ ಪ್ರೇಮಪಾಶಕ್ಕೆ ಕಾಡಾನೆ ಸೆರೆ
ಕಾಡಾನೆ ಸೆರೆಗೆ ಅರಣ್ಯಾಧಿಕಾರಿಗಳು ಸತತವಾಗಿ ಕಾರ್ಯಾಚರಣೆಗೆ ಮುಂದಾಗಿದ್ದರು. ಕೊನೆಗೂ ಭಾನುಮತಿ ಎಂಬ ಹೆಸರಿನ ಹೆಣ್ಣಾನೆಯನ್ನ ಕಟ್ಟಿಹಾಕಿದ್ದರು. ಈ ಆನೆಯನ್ನು ಬಳಸಿಕೊಂಡು ಮಲೆನಾಡಿಗರ ನಿದ್ದೆಗೆಡಿಸಿದ ಹಾವೇರಿ ಟಸ್ಕರ್ ಆನೆಯನ್ನ ಅರಣ್ಯ ಅಧಿಕಾರಿಗಳು ಬಲೆಗೆ ಬೀಳಿಸಿದ್ದಾರೆ.

ಕೊನೆಗೂ ಸೆರೆಯಾದ ಹಾವೇರಿ ಟಸ್ಕರ್
ಐದು ಸಾಕಾನೆಗಳು ಕೂಡ ಒಂದು ಒಂಟಿ ಸಲಗವನ್ನ ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ನಂತರ ಹೆಣ್ಣಾನೆ ಭಾನುಮತಿಯಿಂದ ಒಂಟಿ ಸಲಗನ ಸೆರೆ ಹಿಡಿಯಲು ಮುಂದಾದ ಅರಣ್ಯ ಅಧಿಕಾರಿಗಳ ಪ್ಲಾನ್ ಕೂಡ ಉಲ್ಟಾ ಹೊಡೆದಿತ್ತು. ಭಾನುಮತಿ ಭೇಟಿಯಾಗಿದ್ದ ಹಾವೇರಿ ಟಸ್ಕರ್ ಸುಮಾರು ಒಂದು ಗಂಟೆಗಳ ಕಾಲ ಅಲ್ಲೇ ನೀತಿತ್ತು. 11 ಮಾವುತರು ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಅಧಿಕಾರಿಗಳು ಒಂದು ವಾರದಿಂದ ಒಂಟಿ ಸಲಗದ ಹಿಂದೆ ಬಿದ್ದಿದ್ದರು. ಆದರೆ ಇದೀಗ ಎಲೆಮಡಿಲು ಗ್ರಾಮದ ಕಾಫಿ ತೋಟವೊಂದರಲ್ಲಿ ಅದೇ ಭಾನುಮತಿ ಜೊತೆ ಏಕಾಂತದಲ್ಲಿದ್ದಾಗ ಹಾವೇರಿ ಟಸ್ಕರ್ ಅನ್ನು ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

ಅರಣ್ಯಾಧಿಕಾರಿಗಳ ಸತತ ಪ್ರಯತ್ನದಿಂದ ಕಾಡಾನೆ ಸೆರೆ
ಒಂದು ವಾರದ ಸತತ ಪರಿಶ್ರಮದಿಂದ ಅಧಿಕಾರಿಗಳು ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿ ಆಗಿದ್ದಾರೆ. ಮಲೆನಾಡಿಗರ ನಿದ್ದೆಗೆಡಿಸಿದ್ದ ಹಾವೇರಿ ಟಸ್ಕರ್ ಅನ್ನು ಸೆರೆ ಹಿಡಿದಿದ್ದು, ಅದನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಅರಣ್ಯಕ್ಕೆ ಬಿಡಲು ಕೊಂಡೊಯ್ದಿದ್ದಾರೆ. ಕಾಡಾನೆ ದಾಳಿಯಿಂದ ಬೇಸತ್ತು ಹೋಗಿದ್ದ ಮಲೆನಾಡಿಗರು ಇದೀಗ ನಿಟ್ಟಿಸಿರು ಬಿಟ್ಟಿದ್ದಾರೆ. ಒಂದು ವಾರಗಳ ಸತತ ಪ್ರಯತ್ನದಿಂದ ಕಾಡಾನೆ ಸೆರೆಯಾಗಿದ್ದು, ಆನೆ ಸೆರೆ ಹಿಡಿದ ಅಧಿಕಾರಿಗಳಿಗೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ.












Click it and Unblock the Notifications