ಚಿಕ್ಕಮಗಳೂರಿನಲ್ಲಿ 39 ಲಕ್ಷ ರೂಪಾಯಿ ವೆಚ್ಚದ ಫುಟ್‌ಪಾತ್ ಅಭಿವೃದ್ಧಿ: ಶಾಸಕ ಸಿ.ಟಿ.ರವಿ
ಚಿಕ್ಕಮಗಳೂರು, ಡಿಸೆಂಬರ್, 10: 39 ಲಕ್ಷ ರೂಪಾಯಿ ವೆಚ್ಚದಲ್ಲಿ ಆಜಾದ್ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಎರಡೂ ಬದಿಯಲ್ಲಿ ಫುಟ್‍ಪಾತ್ ಅಭಿವೃದ್ಧಿ ಕೆಲಸ ಮಾಡಲಾಗುವು ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ನಗರಸಭೆ ಮುಂಭಾದಲ್ಲಿರುವ ಫುಟ್‍ಪಾತ್ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದ ಅವರು, 39 ಲಕ್ಷದ 50 ಸಾವಿರ ರೂಗಳ ವೆಚ್ಚದಲ್ಲಿ ಆಜಾದ್ ಪಾರ್ಕ್‌ನಿಂದ ಎಸ್‍ಪಿ ಕಚೇರಿಯವರೆ ಎರಡು ಬದಿಯ ಫುಟ್‌ಪಾತ್ ಅಭಿವೃದ್ಧಿಪಡಿಸಿ ಸ್ಟೈನ್‍ಲೆಸ್ ಸ್ಟೀಲ್ ಬ್ಯಾರಿಕೇಟಿಂಗ್ ಹಾಕುವಂತಹ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಎಂಜಿ ರಸ್ತೆ ಮತ್ತು ಮಾರ್ಕೆಟ್ ರಸ್ತೆಯ ಫುಟ್‍ಪಾತ್‍ಗಳನ್ನು ಮರು ಅಭಿವೃದ್ಧಿಕಾರ್ಯ ನಡೆಸಲಾಗುವುದು ಎಂದರು.

ಪಾರ್ಕ್‌ಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ
ಇನ್ನು ಚಿಕ್ಕಮಗಳೂರನ್ನು ಸ್ವಚ್ಚ ಮತ್ತು ಸುಂದರ ನಗರವನ್ನಾಗಿಸುವುದರ ಜೊತೆಗೆ, ಎಲ್ಲಾ ರೀತಿಯ ಸೌಲಭ್ಯವನ್ನು ಹೊಂದಿರುವ ನಗರವನ್ನಾಗಿಸುವ ನಿಟ್ಟಿನಲ್ಲಿ ಪೂರಕ ಪ್ರಯತ್ನವನ್ನು ಮಾಡಲಾಗುತ್ತಿದೆ. ನಗರದ ಪಾರ್ಕ್‌ಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವ ಕೆಲಸವನ್ನೂ ಸಹ ಮಾಡಲಾಗುತ್ತಿದೆ. 146 ಪಾರ್ಕ್‍ಗಳನ್ನು ಗುರುತಿಸಿ ಇ-ಖಾತೆ ಮಾಡಲಾಗುವುದು. ಜೊತೆಗೆ ಒತ್ತುವರಿಯಾದ ಜಾಗದಲ್ಲಿ ತೆರವುಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಚಿಕ್ಕಮಗಳೂರು ನಗರದ ನಾಗರೀಕರ ಸಹಕಾರವಿದ್ದರೆ ಜಿಲ್ಲೆಯನ್ನು ಸುಂದರ ಮತ್ತು ಸ್ವಚ್ಚನಗರವನ್ನಾಗಿಸಲು ಸಾದ್ಯವಾಗುತ್ತದೆ ಎಂದು ಮನವಿ ಮಾಡಿದರು.

ಎಲ್‍ಇಡಿ ದೀಪ ಅಳವಡಿಕೆಗೆ ನಿರ್ಧಾರ
ನಗರಸಭೆಯ ಎಲ್ಲಾ ಸದಸ್ಯರು ಒಂದು ತಂಡವಾಗಿ ನಗರದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ. ನಗರದ ಅಭಿವೃದ್ಧಿಗಾಗಿ ಪ್ರಸ್ತಾವನೆ ಕಳಿಸುವ ಜವಾಬ್ದಾರಿ ನಿಮ್ಮದು. ಅನುದಾನವನ್ನು ತರುವ ಜವಾಬ್ದಾರಿ ನನ್ನದು. ಕಳೆದ 2 ವರ್ಷಗಳಿಂದ ಇದ್ದ ಬೀದಿ ದೀಪದ ಸಮಸ್ಯೆಯಿಂದ ಹಲವುಬಾರಿ ನಗರಸಭೆಗೆ ದೂರುಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಇಡೀ ನಗರಕ್ಕೆ 12 ಸಾವಿರ ಎಲ್‍ಇಡಿ ದೀಪ ಅಳವಡಿಕೆ ಮಾಡಲು ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಅಜಯ್ ನಾಗಭೂಷಣ್ ಅವರೊಂದಿಗೆ ಚರ್ಚಿಸಿ ಶೀಘ್ರವಾಗಿ ಕೆಲಸವನ್ನು ಪ್ರಾರಂಭಿಸುವಂತೆ ಒತ್ತಾಯ ಮಾಡಲಾಗಿದೆ ಎಂದರು.












Click it and Unblock the Notifications