ಚಾರ್ಮಾಡಿ ಘಾಟ್‌ನಲ್ಲಿ ಕಿಡಿಗೇಡಿಗಳ ಕೃತ್ಯ: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ
ಚಿಕ್ಕಮಗಳೂರು, ಡಿಸೆಂಬರ್ 28: ಮೂಡಿಗೆರೆ ತಾಲೂಕಿನ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.
ಬಾಳೂರು ಮೀಸಲು ಅರಣ್ಯದ ಸೋಮನಕಾಡು ಎಂಬಲ್ಲಿ ಕಾಡ್ಗಿಚ್ಚು ಉಂಟಾದ ಪರಿಣಾಮ ನೂರಾರು ಎಕರೆಯಷ್ಟು ಕಾಡು, ಕಾಡುಪ್ರಾಣಿಗಳು ಬೆಂಕಿಗಾಹುತಿಯಾಗಿದೆ.
ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಸೋಮನಕಾಡು ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಾಕಿದ್ದು, ನೂರಾರು ಎಕರೆ ಅರಣ್ಯ ಸುಟ್ಟು ಕರಕಲಾಗಿದೆ. ದಟ್ಟಕಾನನವಾದ ಕಾರಣ ಅರಣ್ಯ ಅಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಅರಣ್ಯಕ್ಕೆ ಬೆಂಕಿ ತಗುಲಿದ ಪರಿಣಾಮ ನೂರಾರು ಜಾತಿಯ ಸಾವಿರಾರು ಮರಗಿಡಗಳು, ಪ್ರಾಣಿ-ಪಕ್ಷಿಗಳು ಕೂಡ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.

ಹತ್ತಾರು ಅರಣ್ಯ ಅಧಿಕಾರಿಗಳ ನಿರಂತರ ಶ್ರಮದಿಂದ ಅಧಿಕಾರಿಗಳು ಬೆಂಕಿ ಆರಿಸಿದ್ದಾರೆ. ಉಪವಲಯ ಅರಣ್ಯ ಅಧಿಕಾರಿ ಬಸವರಾಜು, ಅರಣ್ಯ ರಕ್ಷಕ ಪರಮೇಶ್, ಅರಣ್ಯ ವೀಕ್ಷಕ ದಿನೇಶ್ ಸೇರಿದಂತೆ ಹತ್ತಾರು ಅರಣ್ಯ ಇಲಾಖೆ ನೌಕರರು ಬೆಂಕಿಯನ್ನ ನಂದಿಸಿದ್ದಾರೆ. ಕಾಡನ್ನು ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಸಾಕಷ್ಟು ಮುಂಜಾಗೃತ ಕ್ರಮಗಳನ್ನ ಕೈಗೊಂಡರೂ ಕೂಡ ಕೆಲ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಕೊಡುತ್ತಿರುವುದರಿಂದ ಅಪರೂಪದ ಪ್ರಕೃತಿ ಸಂಪತ್ತು ನಾಶವಾಗುತ್ತಿದೆ.

ಚಾರ್ಮಾಡಿ ಅಪರೂಪದ ಸಸ್ಯ ಸಂಪತ್ತಿನ ಬೆಟ್ಟಗುಡ್ಡ. ಮಳೆಗಾಲದಲ್ಲಿ ಹಚ್ಚಹಸುರಿನಿಂದ ಕಂಗೊಳಿಸುವ ಇಲ್ಲಿನ ಬೆಟ್ಟಗುಡ್ಡಗಳು ಬೇಸಿಗೆಯಲ್ಲಿ ಒಣಗಿ ನಿಂತಿರುತ್ತದೆ. ಈ ಮಾರ್ಗದಲ್ಲಿ ಓಡಾಡುವ ಕೆಲ ಪ್ರವಾಸಿಗರು ಸಿಗರೇಟ್ ಸೇದಿ ಎಸೆಯುವ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿರುವ ಉದಾಹರಣೆಯೂ ಇದೆ. ಹಾಗಾಗಿ, ಎಲ್ಲರೂ ಕೂಡ ಕಾಡನ್ನು ಉಳಿಸಿ-ಬೆಳೆಸುವುದು ಎಲ್ಲರ ಜವಾಬ್ದಾರಿ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕಿದೆ.












Click it and Unblock the Notifications