ಚಕ್ರವರ್ತಿ ಸೂಲಿಬೆಲೆ ದೇಶಭಕ್ತಿಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಾಗಿಲ್ಲ: ಸಿ.ಟಿ.ರವಿ
ಚಿಕ್ಕಮಗಳೂರು, ಜೂನ್, 06: ಚಕ್ರವರ್ತಿ ಸೂಲಿಬೆಲೆ ಅವರ ದೇಶಭಕ್ತಿಗೆ ಕಾಂಗ್ರೆಸ್‌ನವರ ಸರ್ಟಿಫಿಕೇಟ್ ಬೇಕಾಗಿಲ್ಲ. ಹೀಗೆ ಹೇಳುವ ಮೂಲಕ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಗೆ ಎಚ್ಚರಿಕೆ ನೀಡಿದ್ದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ಗೆ ಮಾಜಿ ಶಾಸಕ ಸಿ.ಟಿ ರವಿ ಚಿಕ್ಕಮಗಳೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿ ನಾಯಕ ಸಿ.ಟಿ.ರವಿ, ಕಾಂಗ್ರೆಸ್‌ನವರ ಕಣ್ಣಿಗೆ ಚಕ್ರವರ್ತಿ ಸೂಲಿಬೆಲೆ ಅವರು ಲಾಡೆನ್ ರೀತಿ ಕಾಣುತ್ತಿದ್ದಾರಾ? ಎಂದು ಪ್ರಶ್ನಿಸಿದರು. ಅಲ್ಲದೆ, ಲಾಡೆನ್ ಬಂದರೆ ಬಿಟ್ಟುಕೊಳ್ಳುತ್ತಾರೆ, ಆದರೆ ಚಕ್ರವರ್ತಿ ಅವರ ವಿಚಾರ ಗೋಷ್ಠಿಯನ್ನು ರದ್ದು ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ಕಾಂಗ್ರೆಸ್‌ನವರಿಗೆ ಅಧಿಕಾರದಿಂದ ಅತಿಯಾದ ಮದ ಬಂದಿದೆ. ಅಧಿಕಾರದ ಅತಿಯಾದ ಮದ ಹೆಚ್ಚು ದಿನ ಇರಲು ಸಾಧ್ಯವಿಲ್ಲ. ಹಿಂದೆ ಕಾಂಗ್ರೆಸ್ ಸಂವಿಧಾನವನ್ನೇ ಬುಡಮೇಲು ಮಾಡಿ, ಪ್ರಜಾಪ್ರಭುತ್ವವನ್ನೇ ಹತ್ತಿಕ್ಕಿತ್ತು. ಆಗ ಜನರು ಕಾಂಗ್ರೆಸ್‌ಗೆ ಬುದ್ಧಿ ಕಲಿಸಿದ್ದನ್ನು ಈಗಿನವರು ನೆನಪಿಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಮದ ಇಳಿಯುವುದಕ್ಕೆ ಅಥವಾ ಇಳಿಸುವುದಕ್ಕೆ ಬಹಳ ಕಾಲ ಬೇಕಾಗಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಸಿ.ಟಿ.ರವಿ ಎಚ್ಚರಿಕೆ ನೀಡಿದರು.
ಬಿಜೆಪಿ ವಿರುದ್ಧ ಯತೀಂದ್ರ ವಾಗ್ದಾಳಿ
ಇನ್ನು ಬಿಜೆಪಿ ನಾಯಕರು ಕಾಂಗ್ರೆಸ್ ಜಾರಿ ಮಾಡಿರುವ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡುತ್ತಲೇ ಇದ್ದಾರೆ. ಇದಕ್ಕೆ ಇದೀಗ ತಿರುಗೇಟು ನೀಡಿದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು, ಬಿಜೆಪಿಯವರ ಸ್ಥಿತಿ ತಾನು ಕಳ್ಳ-ಪರರನ್ನು ನಂಬ ಎಂಬಂತಾಗಿದೆ ಎಂದು ಕಿಡಿಕಾರಿದರು. ಅಲ್ಲದೆ ಬಿಜೆಪಿ ಸರ್ಕಾರವು ಕೊಟ್ಟಿದ್ದ 600 ಭರವಸೆಗಳನ್ನು ಈಡೇರಿಸಿದೆಯಾ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಯಂತೀಂದ್ರ ಸಿದ್ದರಾಮಯ್ಯನವರ ಪ್ರತಿಕ್ರಿಯೆಯನ್ನು ಗಮನಿಸಿದರೆ ಸುಮ್ನೆ ಟೀಕೆ ಮಾಡದಲ್ಲಮ್ಮ ಮಚ್ಚಾ.. ನಮ್ಗೂ ನಿಮ್ಮ ತಪ್ಪುಗಳನ್ನು ಎತ್ತಿಹಿಡಿಯುವುದು ಗೊತ್ತಿದೆ ಎಂದು ಹೇಳಿದ ರೀತಿ ಕಾಣುತ್ತದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಶಾಸಕ ಗಣೇಶ್ ಪ್ರಸಾದ್ ಆಯೋಜನೆ ಮಾಡಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಪಾಲ್ಗೊಂಡು ಮಾತನಾಡಿ, ಅವರಂತೆ ಸುಳ್ಳು ಭರವಸೆಗಳನ್ನು ಕಾಂಗ್ರೆಸ್ ಕೊಟ್ಟಿದೆ ಎಂದುಕೊಂಡಿದ್ದರು. ಆದರೆ ಎಲ್ಲಾ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಈಡೇರಿಸಿದೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.
ಬಿಜೆಪಿ ಸರ್ಕಾರ 600 ಭರವಸೆಗಳನ್ನು ಕೊಟ್ಟಿತ್ತು. ಆದರೆ ಯಾವುದನ್ನೂ ಈಡೇರಿಸಿರಲಿಲ್ಲ, ಪ್ರಧಾನಿ ಮೋದಿ ಅವರು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಆದರೆ ಅದರ ಬಗ್ಗೆ ಬಿಜೆಪಿಗರು ಮಾತನಾಡುತ್ತಿಲ್ಲ. ನಾವು ಅಧಿಕಾರಕ್ಕೆ ಬಂದು ಇನ್ನೂ 1 ತಿಂಗಳು ಕಳೆದಿಲ್ಲ. ಆಗಲೆ ಬಿಜೆಪಿಗರು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಈ ಬಾರಿಯ ಚುನಾವಣೆಯಲ್ಲಿ ನಮ್ಮ ಕಡೆ ಧರ್ಮ ಇತ್ತು, ಅವರ ಕಡೆ ಅಧರ್ಮ ಇತ್ತು. ನಮ್ಮದು ಪ್ರಾಮಾಣಿಕ ಸೇವೆ, ಅವರದ್ದು 40% ಭ್ರಷ್ಟಾಚಾರ. ನಮ್ಮದು ಬಡವರ ಪರ ಸರ್ಕಾರ ಅವರದ್ದು, ಶ್ರೀಮಂತರ ಪರ ಒಲವು ತೋರುವ ಸರ್ಕಾರವಾಗಿತ್ತು ಎಂದರು.
ಈ ಎಲ್ಲಾ ಅಂಶಗಳನ್ನು ನಾವು ಮತದಾರರಿಗೆ ತಿಳಿಸಿದ್ದೆವು. ಜನರು ನಮಗೆ ಆಶೀರ್ವಾದ ಮಾಡಿದರು. ಈಗ ಕಾರ್ಯಕರ್ತರ ಮೇಲೆ ಹೆಚ್ಚು ಜವಬ್ದಾರಿ ಇದ್ದು, ಲೋಕಾಸಭೆ ಚುನಾವಣೆಯೊಳಗೆ ಎಲ್ಲಾ ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸಬೇಕು. ಹಾಗೆಯೇ ಕಾಂಗ್ರೆಸ್ ಸಾಧನೆ ಬಗ್ಗೆ ಹೇಳಬೇಕು ಎಂದರು. ಹಾಗೆಯೆ ಬಿಜೆಪಿ ನಾಯಕರು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಜನರನ್ನು ಕೆರಳಿಸುತ್ತಿದ್ದರು. ಈಗ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ನಾವು ಪ್ರಾಮಾಣಿಕ ಸೇವೆ ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.












Click it and Unblock the Notifications