ಡಿ.25 ರಿಂದ 30ರವರೆಗೆ ಮುಳ್ಳಯ್ಯನಗಿರಿಗೆ ನಿಷೇಧ ಹೇರಿದ ಚಿಕ್ಕಮಗಳೂರು ಜಿಲ್ಲಾಡಳಿತ
ಚಿಕ್ಕಮಗಳೂರು, ಡಿಸೆಂಬರ್ 22: ಕ್ರಿಸ್ಮಸ್ ಹಾಗೂ ವರ್ಷಾಂತ್ಯವನ್ನು ಕಾಫಿನಾಡು ಚಿಕ್ಕಮಗಳೂರಿನ ಈ ಪ್ರವಾಸಿ ತಾಣಗಳಲ್ಲಿ ಆಚರಿಸುವ ಯೋಜನೆ ಇದ್ದರೆ ಈಗಲೇ ಬದಲಿಸಿಕೊಳ್ಳಿ.
ಡಿಸೆಂಬರ್ ಕೊನೆಯ ವಾರ ಮಲೆನಾಡು ಚಿಕ್ಕಮಗಳೂರಿನಲ್ಲಿದ್ದು ಹೊಸ ವರ್ಷವನ್ನು ಸ್ವಾಗತ ಮಾಡುವವರಿಗೆ ನಿರಾಸೆಯ ಸುದ್ದಿಯೊಂದು ಚಿಕ್ಕಮಗಳೂರು ಜಿಲ್ಲಾಡಳಿತ ನೀಡಿದೆ.
ಇದೇ ಡಿಸೆಂಬರ್ 25 ರಿಂದ 30ರವರೆಗೆ ಚಿಕ್ಕಮಗಳೂರು ತಾಲ್ಲೂಕಿನ ಪ್ರಸಿದ್ಧ ಮುಳ್ಳಯ್ಯನಗಿರಿ ಅಕ್ಕಪಕ್ಕದ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

ಡಿ.19 ರಿಂದ ದತ್ತಪೀಠದಲ್ಲಿ ದತ್ತ ಜಯಂತಿ ಆರಂಭವಾಗಿದ್ದು, ಇದು ಈ ತಿಂಗಳ 29 ರವರೆಗೂ ಇರಲಿದೆ. ದತ್ತ ಭಕ್ತರು ಈಗಾಗಲೇ ವ್ರತದಲ್ಲಿದ್ದು, ಡಿ.27 ರಂದು ಅನಸೂಯ ಜಯಂತಿ, ಡಿ.28 ರಂದು ಚಿಕ್ಕಮಗಳೂರು ನಗರದಲ್ಲಿ ಸಾಂಕೇತಿಕ ಶೋಭಾಯಾತ್ರೆ ಹಾಗೂ 29 ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ.

ರಾಜ್ಯಾದ್ಯಂತ ಭಕ್ತರು ಈ ಭಾಗಗಳಿಗೆ ಬರಲಿದ್ದು, ಹೀಗಾಗಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದು ಮತ್ತು ಪ್ರವಾಸಿಗರಿಗೂ ತೊಂದರೆಯಾಗಬಾರದೆಂದು ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲಾಡಳಿತವು ಡಿಸೆಂಬರ್ 25 ರಿಂದ 30ರವರೆಗೆ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಹೊನ್ನಮ್ಮನ ಹಳ್ಳ ಹಾಗೂ ಮಾಣಿಕ್ಯಧಾರ ತಾಣಗಳ ಪ್ರವಾಸಿಗರ ಭೇಟಿಗೆ ನಿಷೇಧ ಹೇರಲಾಗಿದೆ.












Click it and Unblock the Notifications