ದತ್ತಜಯಂತಿ ಹಿನ್ನೆಲೆ ಗಿರಿ ಭಾಗದಲ್ಲಿ ಪ್ರವಾಸಿಗರಿಗೆ ನಿರ್ಬಂಧ: ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ
ಚಿಕ್ಕಮಗಳೂರು, ನವೆಂಬರ್, 29: ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗಿರಿ ಭಾಗಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ 5 ದಿನಗಳ ಕಾಲ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠ ಗ್ರಾಮದ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಡಿಸೆಂಬರ್ 6ರಿಂದ 8 ರವರೆಗೆ ದತ್ತಜಯಂತಿ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಆದ್ದರಿಂದ ಡಿಸೆಂಬರ್ 5ರ ಬೆಳಗ್ಗೆ 9 ಗಂಟೆಯಿಂದ ಡಿಸೆಂಬರ್ 9ರ ಬೆಳಗ್ಗೆ 10 ಗಂಟೆಯವರೆಗೆ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರ, ಹೊನ್ನಮ್ಮನಹಳ್ಳ, ಮತ್ತು ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಭಾಗಗಳಿಗೆ ಪ್ರಾವಸಿಗರು, ಯಾತ್ರಾರ್ಥಿಗಳು ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ನಿರ್ಬಂಧ ಹೇರಿರುವ ದಿನಗಳಲ್ಲಿ ಪ್ರವಾಸಿಗರು ಹೋಟೆಲ್, ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ವಾಸ್ತವ್ಯಕ್ಕೆ ಕಾಯ್ದಿರಿಸಿಕೊಂಡಿದ್ದರೆ, ವಾಸ್ತವ್ಯ ಮಾಡಲು ಯಾವುದೇ ನಿರ್ಬಂಧವಿರುವುದಿಲ್ಲ ಎಂದು ತಿಳಿಸಿದ್ದಾರೆ.

ದತ್ತ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ
ಇನ್ನು ದತ್ತ ಭಕ್ತರು ದತ್ತಮಾಲೆ ಧರಿಸುವ ಮೂಲಕ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಹಮ್ಮಿಕೊಂಡಿರುವ ದತ್ತ ಜಯಂತಿ ಕಾರ್ಯಕ್ರಮಕ್ಕೆ ಸೋಮವಾರದಿಂದ ವಿದ್ಯುಕ್ತ ಚಾಲನೆ ಸಿಕ್ಕಿದೆ. ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಗಣಪತಿ ಹೋಮ ನೆರವೇರಿಸಿ ದತ್ತಮೂರ್ತಿಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದ್ದರು. ದತ್ತಗೀತೆಗಳನ್ನು ಪಠಿಸುವ ಮೂಲಕ ನೂರಾರು ಭಕ್ತರು ದತ್ತಮಾಲೆಯನ್ನು ಧರಿಸಿದ್ದರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ದತ್ತಮಾಲೆಯನ್ನು ಧರಿಸಿದ್ದರು. ದತ್ತಜಯಂತಿ ಕಾರ್ಯಕ್ರಮ ಸೋಮವಾರದಿಂದ ಆರಂಭವಾಗಿದ್ದು, ಡಿಸೆಂಬರ್ 8ರವರೆಗೂ ನಡೆಯಲಿದೆ. ಡಿಸೆಂಬರ್ 6ರಂದು ಮಹಿಳೆಯರಿಂದ ಅನುಸೂಯ ಜಯಂತಿ, ಶೋಭಾಯಾತ್ರೆ ಹಾಗೂ ದತ್ತ ಪಾದುಕೆ ದರ್ಶನ ನಡೆಯಲಿದೆ. ಡಿಸೆಂಬರ್ 7ರಂದು ದತ್ತಭಕ್ತರಿಂದ ಭೀಕ್ಷಾಟನೆ, ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾ ಯಾತ್ರೆ ನಡೆಯಲಿದೆ.
ಡಿ. 8ರಂದು ಆಗಮಿಸಲಿರುವ ಭಕ್ತರ ದಂಡು
ಡಿಸೆಂಬರ್ 8ರಂದು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ದತ್ತಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯುವ ಮೂಲಕ ದತ್ತಜಯಂತಿ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ದತ್ತಮಾಲೆ ಧರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ, "ದತ್ತಪೀಠ ವಿಚಾರ ಸಂಬಂಧ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದ ಮೇರೆಗೆ ಸಚಿವ ಸಂಪುಟ ಉಪ ಸಮಿತಿಯನ್ನು ರಚನೆ ಮಾಡಿತ್ತು. ಸಮಿತಿ ಶಿಫಾರಸನ್ನು ಪರಿಗಣಿಸಿ ರಾಜ್ಯ ಸರ್ಕಾರ ಆಡಳಿತ ಮಂಡಳಿಯನ್ನು ರಚಿಸಿದೆ" ಎಂದಿದ್ದರು.

ದತ್ತಪೀಠಕ್ಕೆ ನ್ಯಾಯ ಕೊಡಿಸುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದು, ಈ ವರ್ಷದ ದತ್ತ ಜಯಂತಿ ಹಿಂದೂ ಅರ್ಚಕರ ಪೂಜೆಯೊಂದಿಗೆ ಯಾವುದೇ ವಿವಾದಕ್ಕೆ ಅವಕಾಶವಿಲ್ಲದಂತೆ ನೆರವೇರಲಿದೆ. ಬಾಬಾಬುಡನ್ ದರ್ಗಾದಲ್ಲಿ ಮುಜಾವರ್‍ರಿಂದ ಪೂಜೆಯಾದರೇ, ದತ್ತಪೀಠದಲ್ಲಿ ಹಿಂದೂ ಅರ್ಚಕರಿಂದ ಪೂಜೆ ನಡೆಯಲಿದೆ. ಹಿಂದೂ ಅರ್ಚಕರ ನೇಮಕ ಸಂಬಂಧ ಇರುವ ಅಡೆತಡೆಗಳನ್ನು ನಿವಾರಿಸುವ ಕೆಲಸವನ್ನು ಮಾಡಲಾಗಿದೆ. ಆಡಳಿತ ಮಂಡಳಿ ಅರ್ಚಕರ ನೇಮಕ ಕೈಗೊಳ್ಳಲಿದೆ. ದತ್ತಪೀಠದಲ್ಲಿ ನಿರಂತರ ಹಿಂದೂ ಅರ್ಚಕರಿಂದ ಪೂಜೆ ಸಂಬಂಧ ಆಡಳಿತ ಮಂಡಳಿ ಸಭೆ ಸೇರಿ ನಿರ್ಣಾಯಕ ತೆಗೆದುಕೊಂಡ ನಂತರ ಪೂರ್ಣಾವಧಿ ಅರ್ಚಕರ ನೇಮಕ ಪ್ರಕ್ರಿಯೆ ನಡೆಯಲಿದೆ. ತಾತ್ಕಾಲಿಕ ಅರ್ಚಕರನ್ನು ನೇಮಕ ಮಾಡಿ ಪೂಜೆ ಪ್ರಾರಂಭಿಸುವ ಕೆಲಸವನ್ನು ಆಡಳಿತ ಮಂಡಳಿ ಮಾಡಲಿದೆ ಎಂದು ಮಾಹಿತಿ ನೀಡಿದ್ದರು.












Click it and Unblock the Notifications