ಚಿಕ್ಕಮಗಳೂರು: ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿ ಘೋಷಣೆ, ಶ್ರೀರಾಮಸೇನೆ ರಂಜಿತ್ ಶೆಟ್ಟಿ ಪೊಲೀಸ್ ವಶಕ್ಕೆ
ಚಿಕ್ಕಮಗಳೂರು, ಡಿಸೆಂಬರ್ 26: ಚಿಕ್ಕಮಗಳೂರು ಜಿಲ್ಲೆಯ ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಅವರನ್ನು ಬಸವನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದತ್ತ ಜಯಂತಿಯ ಕೊನೆಯ ದಿನವಾದ ಇಂದು ಶ್ರೀರಾಮ ಸೇನೆ ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿ ಆಚರಣೆ ಮಾಡುವುದಾಗಿ ಘೋಷಣೆ ಮಾಡಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಶ್ರೀರಾಮ ಸೇನೆಯ ಮುಖಂಡ ರಂಜಿತ್ ಶೆಟ್ಟಿ ವಶಕ್ಕೆ ಪಡೆದ ಪೊಲೀಸರು ಗೌಪ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ದತ್ತ ಜಯಂತಿ ಆಚರಣೆ ಘೋಷಣೆ ಹಿನ್ನೆಲೆಯಲ್ಲಿ ನಾಗೇನಹಳ್ಳಿ ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ದರ್ಗಾದ ಸುತ್ತ 200 ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಇನ್ನು ದತ್ತ ಜಯಂತಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪ್ರವೇಶಿಸದಂತೆ ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಶ್ರೀರಾಮ ಸೇನೆ ಮುಖಂಡ ಗಂಗಾಧರ್ ಕುಲಕರ್ಣಿ ಅವರಿಗೆ ನಿಷೇಧ ಹೇರಲಾಗಿದೆ.
ಇನ್ನು ಈ ಹಿಂದೆ ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿರುವ ದರ್ಗಾದಲ್ಲಿ ಶ್ರೀರಾಮ ಸೇನೆ ನೇತೃತ್ವದಲ್ಲಿ ದತ್ತ ಜಯಂತಿಗೆ ಆಚರಣೆ ನಿರ್ಧಾರ ಮಾಡಿದ್ದೇವೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ತಿಳಿಸಿದ್ದರು. ದತ್ತಪೀಠ ಬಿಟ್ಟು ಮತ್ತೊಂದೆಡೆ ದತ್ತ ಜಯಂತಿಗೆ ನಿರ್ಧಾರ ಮಾಡಿದ್ದೇವೆ. ಡಿಸೆಂಬರ್ 26ರಂದು ದತ್ತಜಯಂತಿ ಆಚರಣೆ ಮಾಡಲು ಶ್ರೀ ರಾಮಸೇನೆ ನಿರ್ಧಾರ ಮಾಡಿದೆ. ಮುಸ್ಲಿಮರು ನಮ್ಮ ದತ್ತ ಪೀಠದಲ್ಲಿ ಉರುಸ್ ಆಚರಣೆ ಮಾಡುತ್ತಾರೆ. ನಾವು ಅವರಂತೆ ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿ ಆಚರಣೆ ಮಾಡುತ್ತೇವೆ ಎಂದಿದ್ದರು.

ಇನ್ನು ದತ್ತ ಪೀಠದಲ್ಲಿ ಉರುಸ್ ಆಗುವುದಾದರೆ ನಾವು ನಾಗೇನಹಳ್ಳಿ ದರ್ಗಾದಲ್ಲಿ ಯಾಕೆ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದ ಅವರು ನಾಗೇನಹಳ್ಳಿ ದರ್ಗಾದಲ್ಲಿ ಇದೇ ಮೊದಲ ಬಾರಿಗೆ ದತ್ತಜಯಂತಿ ಆಚರಣೆಗೆ ಪ್ಲಾನ್ ಮಾಡಿದ್ದೇವೆ ಎಂದರು. ಈ ಬಗ್ಗೆ ಇಂದು ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದ್ದರು.












Click it and Unblock the Notifications