CT Ravi Challenges Congress: ಕಾಂಗ್ರೆಸ್‌ಗೆ ಜಗದೀಶ್ ಶೆಟ್ಟರ್ ಸಿಎಂ ಅಭ್ಯರ್ಥಿ ಎಂದು ಘೋಷಿಸುವ ತಾಕತ್ತು ಇದ್ಯಾ?
ಚಿಕ್ಕಮಗಳೂರು, ಏಪ್ರಿಲ್, 17: ವೀರೇಂದ್ರ ಪಾಟೀಲ್ ಬಳಿಕ ಯಾವ ವೀರಶೈವ ಮುಖಂಡರಿಗೆ ಕಾಂಗ್ರೆಸ್ ಅಧಿಕಾರ ಕೊಟ್ಟಿದೆ? ಈಗ ಜಗದೀಶ್ ಶೆಟ್ಟರ್ ಸಿಎಂ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಣೆ ಮಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಸವಾಲು ಹಾಕಿದರು.
ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು, ಕಾಂಗ್ರೆಸ್‌ನವರಿಗೆ ಸಾಮರ್ಥ್ಯ ಇದ್ದರೆ ವೀರಶೈವ ಮುಖಂಡರನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಿ. ಇನ್ನು ನಾನು ಕಾಯುತ್ತಿದ್ದೇನೆ. ಶೆಟ್ಟರ್ ಅವರನ್ನು ಮುಂದಿನ ಸಿಎಂ ಎಂದು ಘೋಷಣೆ ಮಾಡಲಿ. ಇನ್ನು ನಮ್ಮ ಗೆಳೆಯ ಲಕ್ಷ್ಮಣ್ ಸವದಿ ಅವರನ್ನು ಸಿಎಂ ಎಂದು ಘೋಷಣೆ ಮಾಡುತ್ತಾರೆಯಾ ಎಂದು ಕಾಯುತ್ತಿದ್ದೇವೆ.

ಈಗ ಒಣ ಮಾತುಗಳಿಂದ ಏನೂ ಪ್ರಯೋಜನ ಆಗುವುದಿಲ್ಲ. ಬಿಜೆಪಿ ಹಿಂದುತ್ವ ತತ್ವದ ಆಧಾರದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿರುವ ಪಕ್ಷವಾಗಿದೆ. ಅಲ್ಲದೆ ದೇಶದ ಹಿತದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿರುವ ನಮ್ಮ ಪಕ್ಷದ ಬೆಳವಣಿಗೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು.
ಶೆಟ್ಟರ್ ಪಕ್ಷ ಬಿಟ್ಟದ್ದು ದುರಾದೃಷ್ಟಕರ ಸಂಗತಿ
ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿದ್ದು ದುರಾದೃಷ್ಟಕರ ಸಂಗತಿ ಯಾಗಿದೆ. ಅವರ ಮೆರಿಟ್, ಡಿ ಮೆರಿಟ್ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಇಷ್ಟು ದಿನ ಬಿಜೆಪಿ ಪರ, ಕಾಂಗ್ರೆಸ್ ವಿರುದ್ಧದ ರಾಜಕಾರಣ ಮಾಡಿದವರು, ನಿನ್ನೆ ಕಾಂಗ್ರೆಸ್ ಪರ ಬ್ಯಾಟ್ ಬೀಸಿದ್ದಾರೆ. ಕಾಂಗ್ರೆಸ್ ಐಸಿಯುನಲ್ಲಿದೆ, ಅದನ್ನು ಯಾರೂ ಬದುಕಿಸಲು ಆಗುವುದಿಲ್ಲ. ಆದರೆ ಅವರು ಇವತ್ತು ಕಾಂಗ್ರೆಸ್ ಸೇರಿರೋದು ದುರಾದೃಷ್ಟಕರ ಎಂದರು.

ಇನ್ನು ನೀವೇ ಹೇಳುತ್ತಿದ್ದ ಕೋಮಾದಲ್ಲಿರುವ ಪಾರ್ಟಿಗೆ ಹೋಗಿರುವುದು ದುರಾದೃಷ್ಟಕರವಾಗಿದೆ. ಪಕ್ಷ ಸ್ವಾಭಾವಿಕವಾಗಿ ರಿಕವರಿ ಮಾಡಿಕೊಳ್ಳುತ್ತದೆ, ಆದರೆ ವ್ಯಕ್ತಿಗಳು ರಿಕವರಿ ಮಾಡಿಕೊಳ್ಳಲು ಆಗುವುದಿಲ್ಲ. ಅವರು ಜನಸಂಘದಿಂದ ಬಂದವರು ಎಂಬ ಹೆಗ್ಗಳಿಕೆ ಇತ್ತು. ಅದನ್ನು ಈಗ ಕಳೆದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ಹಾಗೆಯೆ ನೀವು ಏನೆಲ್ಲಾ ಆಗಿದ್ದೀರಾ ಅದು ಬಿಜೆಪಿ ಲೆಕ್ಕಕ್ಕೆ ಸೇರುತ್ತದೆ ಎಂದರು.












Click it and Unblock the Notifications