ನಾನು ಕೂಡ ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತೇನೆ - ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ
ಚಿಕ್ಕಮಗಳೂರು, ಅಕ್ಟೋಬರ್ 20 : ಅಧಿಕಾರಿಗಳಿಗೆ ಕೆಲಸ ಮಾಡಿಸಿಕೊಳ್ಳೋಕೆ ನಾನು ದುಡ್ಡು ಕೊಡುತ್ತೇನೆ. ನಾನು ಕೂಡ ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತೇನೆ ಎಂದು ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಶೃಂಗೇರಿ ತಾಲೂಕು ಕೆರೆ ಮತ್ತು ನೆಮ್ಮಾರು ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು 'ಮಲೆನಾಡಿನವರು ಸಹೃದಯಿಗಳು, ಯಾವುದೇ ಕೆಲಸ ಆದರೂ ಅವರು ಯಾರು ಹಾಗೆ ಮಾಡಿಸಿಕೊಳ್ಳಲ್ಲ, ಟಿಪ್ಸ್ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ ಎಂದು ಹೇಳಿದ ಸಂದರ್ಭದಲ್ಲಿ ಅಧಿಕಾರಗಳಿಂದ ಕೆಲಸ ಮಾಡಿಸಿಕೊಳ್ಳೋಕೆ ನಾನು ದುಡ್ಡು ಕೊಡ್ತೀನಿ, ನಾನು ಕೂಡ ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತೇನೆ ಎಂದು ಶಾಸಕ ಟಿ.ಡಿ ರಾಜೇಗೌಡರ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಮಲೆನಾಡಿನವರು ಟಿಪ್ಸ್ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ. ಲಂಚಕ್ಕೂ..ಟಿಪ್ಸ್‌ಗೂ ಭಾರೀ ವ್ಯತಾಸವಿದೆ. ಅವರ ಕೆಲಸ ಮಾಡಿಕೊಟ್ಟರೆ ಟಿಪ್ಸ್ ಕೊಡುತ್ತಾರೆ. ಯಾರು ಹಾಗೇ ಹೋಗಲ್ಲ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಟಿ.ಡಿ. ರಾಜೇಗೌಡ ಮಾತಿಗೆ ಬಿಜೆಪಿ ಟ್ವಿಟ್ ಮಾಡಿದ್ದು, ಎಟಿಎಂ ಸರ್ಕಾರದಲ್ಲಿ ಕೆಲಸ ಮಾಡಿಕೊಳ್ಳಲು ಶಾಸಕರೂ ಲಂಚ ಕೊಡಬೇಕು ಎಂದು ಟ್ವೀಟ್ ಮೂಲಕ ಕಾಲೆಳೆದಿದ್ದಾರೆ.

ಈ ಎಟಿಎಂ ಸರ್ಕಾರದಲ್ಲಿ ಕೆಲಸವಾಗಲು ಶಾಸಕರೂ ಲಂಚ ಕೊಡಬೇಕು. ಇದು ಸ್ವತಃ ಕಾಂಗ್ರೆಸ್ ಶಾಸಕ ಟಿ. ಡಿ. ರಾಜೇಗೌಡರೇ ಒಪ್ಪಿಕೊಂಡಿರುವ ಸತ್ಯ. ಇದು ಭ್ರಷ್ಟರಿಂದ ಭ್ರಷ್ಟರಿಗಾಗಿ ಮತ್ತು ಭ್ರಷ್ಟರಿಗೋಸ್ಕರವೇ ಇರುವ ಸರ್ಕಾರ ಎಂಬುದು ಸಾಬೀತಾಗಲು ಇನ್ನೇನೂ ಉಳಿದಿಲ್ಲ. ಲಂಚಬಾಕತನ ತೀರ್ಮಾನ ಮಾಡಲು ಸಾಂದರ್ಭಿಕ ಸಾಕ್ಷ್ಯಗಳೇ ಸಾಕು ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಶೃಂಗೇರಿ ಶಾಸಕರಾದ ಟಿ. ಡಿ. ರಾಜೇಗೌಡರನ್ನು ಈ ಕೂಡಲೇ ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.












Click it and Unblock the Notifications