ಬಿಜೆಪಿ ವಿಪಕ್ಷ ನಾಯಕರ ಧ್ವನಿ ಅಡಗಿಸುತ್ತಿದೆ- ಕಾಂಗ್ರೆಸ್ ಮುಖಂಡ ಅಂಶುಮಂತ್
ಚಿಕ್ಕಮಗಳೂರು, ಡಿಸೆಂಬರ್ 21: ಕೇಂದ್ರ ಮತ್ತು ರಾಜ್ಯ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿರೋಧ ಪಕ್ಷದ ಮುಖಂಡರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದಬ್ಬಾಳಿಕೆ ಮತ್ತು ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ತನಿಖಾ ಸಂಸ್ಥೆಗಳನ್ನು ದುರ್ಬಳಿಕೆ ಮಾಡಿಕೊಳ್ಳುತ್ತಿದೆ. ಸರ್ಕಾರದ ದಮನಕಾರಿ ನೀತಿಯನ್ನು ಕಾಂಗ್ರೆಸ್ ಸಮರ್ಥವಾಗಿ ಎದುರಿಸಲಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದಗಳ ಧ್ವನಿಯನ್ನು ಅಡಗಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದ್ದು, ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ. ಬಿಜೆಪಿ ಸರ್ಕಾರದ ಈ ದಮನಕಾರಿ ನೀತಿಗೆ ಜನರು ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದ್ದು, ಇದು ರಾಜಕೀಯ ಪ್ರೇರಿತವಾಗಿದೆ. ರಾಜ್ಯದಲ್ಲಿನ ಅಭಿವೃದ್ಧಿ ಕೆಲಸವನ್ನು ಮುಂದಿಟ್ಟು ಚುನಾವಣೆ ಎದುರಿಸಬೇಕಾದ ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷ ನಾಯಕರ ಧ್ವನಿ ಅಡಗಿಸುತ್ತಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಜಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ತನಿಖಾ ಸಂಸ್ಥೆಯಿಂದ ಡಿ.ಕೆ.ಶಿವಕುಮಾರ್ ಅವರಿಗೆ ನೋಟಿಸ್ ನೀಡಲಾಗಿದೆ. ತನಿಖೆಗೆ ಕಾನೂನು ಚೌಕಟ್ಟಿನಲ್ಲಿ ಸಹಕರಿಸುವುದಾಗಿ ತಿಳಿಸಿದರೂ ಸಹ ದ್ವೇಷದ ರಾಜಕಾರಣ ಮಾಡುತ್ತಿದೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಬೆಳೆಗಾವಿ ಅಧಿವೇಶನದಲ್ಲಿ ಚರ್ಚೆಯಾಗಬೇಕಿದ್ದು, ಈ ಹೊತ್ತಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿ ವಿಪಕ್ಷಗಳ ಧ್ವನಿಯನ್ನು ಅಡಗಿಸಲಾಗುತ್ತಿದೆ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರ ಬಂದ ಬಳಿಕದ ವಿಪಕ್ಷಗಳ ನಾಯಕರ ಮನೆ ಮೇಲೆ ದಾಳಿ ನಡೆಸಲಾಗುತ್ತಿದೆ. ಸ್ವಪಕ್ಷದ ನಾಯಕರ ಮೇಲೆ ಏಕೆ ದಾಳಿಯಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸಿ.ಟಿ.ರವಿ ಅವರ ಆಸ್ತಿ ದುಪಟ್ಟು ಹೆಚ್ಚಾಗಿದೆ. ಅವರ ಆದಾಯದ ಮೂಲ ಯಾವುದು ಅವರ ಮನೆ ಮೇಲೆ ಏಕೆ ತನಿಖಾ ಸಂಸ್ಥೆಗಳು ದಾಳಿ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.












Click it and Unblock the Notifications