ಸಿದ್ದರಾಮಯ್ಯ ಮೀನು ತಿಂದು ಹೋದ್ರೆ ದೇಗುಲ ಅಪವಿತ್ರ, ಸಿ.ಟಿ.ರವಿ ಮಾಂಸ ತಿಂದು ಹೋದರೆ ಪವಿತ್ರವೇ?: ಕಾಂಗ್ರೆಸ್ ವಕ್ತಾರ ಪ್ರಶ್ನೆ
ಸಿದ್ದರಾಮಯ್ಯ ಮೀನು ತಿಂದು ಹೋದರೆ ದೇವಾಲಯ ಅಪವಿತ್ರ, ಆದರೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಂಸ ತಿಂದು ಹೋದರೆ ದೇವಾಲಯ ಪವಿತ್ರವೇ? ಎಂದು ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರು, ಫೆಬ್ರವರಿ, 24: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನು ತಿಂದು ಹೋದರೆ ದೇವಾಲಯ ಅಪವಿತ್ರ, ಆದರೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಂಸ ತಿಂದು ಹೋದರೆ ದೇವಾಲಯ ಪವಿತ್ರವೇ?. ಹಿಂದುತ್ವ, ಸಾಂಸ್ಕೃತಿಕ ರಾಷ್ಟ್ರೀಯತೆ ಸಿದ್ಧಾಂತ ಹೊಂದಿರುವುದಾಗಿ ಹೇಳಿಕೊಳ್ಳುವ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ಈ ಬಗ್ಗೆ ಉತ್ತರಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಕಿಡಿಕಾರಿದ್ದಾರೆ.
ಈ ಬಗ್ಗೆ ಮಾಧ್ಯಮದವರ ಜೊತೆ ಮಾತಾನಾಡಿದ ಅವರು, ವಾಸ್ತವ ಮತ್ತು ಸತ್ಯ ಸಂಗತಿಯನ್ನು ಮನಬಿಚ್ಚಿ ಹೇಳಿಕೊಂಡಿದ್ದ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯವರು ಹಾರಿಹಾಯ್ದಿದ್ದರು. ಹೀಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ನಾಯಕರು ಅರೆ ಹುಚ್ಚರಂತೆ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಮುಖಂಡರೇ ನಿಮ್ಮ ನಾಯಕ ಸಿ.ಟಿ. ರವಿಯವರು ಮಾಂಸ ಸೇವಿಸಿ ದೇವಾಲಯದಲ್ಲಿ ದೇವರ ದರ್ಶನ ಮಾಡಿದ್ದಾರೆ. ನೀವು ಈಗ ಏಕೆ ಮೌನಕ್ಕೆ ಶರಣಾಗಿದ್ದೀರಿ? ಹಿಂದುತ್ವದ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮೌನ ಮುರಿದು ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದರು.

ಹಿಂದುತ್ವದ ಹೆಸರಿನಲ್ಲಿ ರಾಜಕಾರಣ
ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಸಿ.ಟಿ. ರವಿಯವರೇ, ಇದು ಹಿಂದುಗಳಿಗೆ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಗೆ ಮಾಡಿರುವ ಘೋರ ಅಪರಾಧವಾಗಿದೆ. ನಿಮಗೆ ನಿಜವಾಗಿಯೂ ಹಿಂದುತ್ವದ ಬಗ್ಗೆ ಕಾಳಜಿ, ಶ್ರದ್ಧಾ ಭಕ್ತಿ ಇದ್ದರೆ ಪಶ್ಚತ್ತಾಪವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಸಲಹೆ ನೀಡಿದರು.
ಸಿ.ಟಿ.ರವಿ ವಿರುದ್ಧ ಆಕ್ರೋಶ
ಇದನ್ನು ಸಿ.ಟಿ.ರವಿಯವರು ಮಾಂಸ ತಿಂದ ವಿಡಿಯೋವನ್ನು ನಿಮ್ಮದೆ ಪಕ್ಷದ ಮುಖಂಡರೇ ಮಾಡಿದ್ದಾರೆ. ಮಾಂಸ ತಿಂದು ದೇವಾಲಯ ಪ್ರವೇಶ ಮಾಡಿರುವ ಸಾಕ್ಷ್ಯ ಆಧಾರಾಗಳಿದ್ದರೂ ದೇವಾಲಯ ಪ್ರವೇಶ ಮಾಡಿಲ್ಲ. ಪ್ರಾಂಗಣದಲ್ಲೇ ದರ್ಶನ ಮಾಡಿದ್ದಾಗಿ ಹೇಳಿಕೆ ನೀಡಿ ಸತ್ಯವನ್ನು ದೇವರ ಸನ್ನಿದಿಯಲ್ಲೇ ಮಣ್ಣು ಮಾಡಲು ಯತ್ನಿಸಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರು ಆವರಣದಲ್ಲಿ ದೇವರ ದರ್ಶನ ಪಡೆಯುವುದು ನಿಮ್ಮ ದೃಷ್ಟಿಯಲ್ಲಿ ಅಪವಿತ್ರ. ಅದೇ ನೀವು ಪ್ರಾಂಗಣದಲ್ಲಿ ಪಡೆಯುವ ದರ್ಶನ ಮಾತ್ರ ಪವಿತ್ರನಾ? ಇದು ಯಾವ ಗ್ರಂಥದಲ್ಲಿ ಬರೆದಿದೆ? ದೇಗುಲದ ಗರ್ಭ ಗುಡಿ ಇರಲಿ, ಪ್ರಾಂಗಣ ಇರಲಿ ಅದು ಪವಿತ್ರ ಸ್ಥಳವೇ ಆಗಿರುತ್ತದೆ. ಈ ಸತ್ಯ ಗೊತ್ತಿದ್ದರೂ ವಾದ ಮಂಡಿಸುವ ನಿಮಗೆ ಏನು ಹೇಳಬೇಕು ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಶಯ ಸಹಜವಾಗಿ ಹುಟ್ಟುತ್ತದೆ
ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿರುವುದಾಗಿ ಹೇಳಿಕೊಂಡಿದ್ದೀರಿ. ಅದನ್ನು ನಿಮಗೆ ಕೇಳಿದವರು ಯಾರು? ಮನುಷ್ಯ ಇಚ್ಛೆಗೆ ಅನುಸಾರವಾಗಿ ಆಹಾರ ಸೇವಿಸುವುದನ್ನು ಪದ್ಧತಿಯಾಗಿ ರೂಢಿಸಿಕೊಂಡು ಬಂದಿದ್ದಾರೆ ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳಿ. ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದ್ದೇನೆ ಎಂದು ಹೇಳಿರುವುದು ಸಂತೋಷದ ಸಂಗತಿಯಾಗಿದೆ. ಆದರೂ ಇದರಿಂದ ಮಾಂಸಹಾರಿಗಳನ್ನು ಒಲಿಸಿಕೊಳ್ಳುವ ತಂತ್ರಗಾರಿಕೆ ಇರಬಹುದು ಎಂಬ ಸಂಶಯ ಸಹಜವಾಗಿ ಹುಟ್ಟುತ್ತದೆ ಎಂದರು.
ನೀವು ನಿಮ್ಮ ಪಕ್ಷದವರು, ಸಂಘ ಪರಿವಾರದವರು ಹೇಳುವುದು, ಮಾಡುವುದನ್ನು ಜನ ಒಪ್ಪಿಕೊಳ್ಳುತ್ತಾರೆ ಎಂಬ ಭ್ರಮೆಯಿಂದ ನೀವು ಮೊದಲು ಹೊರ ಬನ್ನಿ. ದೇಶದ ಜನರಿಗೆ ಸತ್ಯ ಮಿಥ್ಯಗಳು ಅರ್ಥವಾಗಿವೆ. ಜನರನ್ನು ನೀವು ಮೋಸ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದರು.












Click it and Unblock the Notifications