Chikkamagaluru Rain: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ ಅಬ್ಬರ; ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತ
ಚಿಕ್ಕಮಗಳೂರು, ಮೇ 15: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕಳೆದ ವಾರದಿಂದ ಮಳೆ ಆರ್ಭಟ ಮುಂದುವರೆದಿದ್ದರಿಂದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಚಿಕ್ಕಮಗಳೂರು ತಾಲೂಕಿನ ಅಂಬಳೆ,ಲಕ್ಯಾ ಹೋಬಳಿ ಹೊರತುಪಡಿಸಿದರೆ ಉಳಿದ ಮಲೆನಾಡು ಭಾಗ, ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರದಲ್ಲಿ ಅತಿಹೆಚ್ಚು ಮಳೆಯಾಗುತ್ತಿದೆ.
ಚಿಕ್ಕಮಗಳೂರು ನಗರದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಕೋಟೆ, ಹಿರೇಮಗಳೂರು, ಅಂಬಳೆ ಸೇರಿ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಇಂದು ಬೆಳಗಿನ ಜಾವ 5 ಗಂಟೆಯಿಂದಲೇ ಬಿಟ್ಟು ಬಿಡದೆ ಸುರಿಯುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮೂಡಿಗೆರೆ ತಾಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ.

ಸಕ್ಕರೆ ನಾಡು ಮಂಡ್ಯದಲ್ಲಿ ಪೂರ್ವ ಮುಂಗಾರು ಚುರುಕು
ಪೂರ್ವ ಮುಂಗಾರು ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 31.7 ಮಿ.ಮೀ. ಮಳೆ ಸುರಿದಿರುವ ಬಗ್ಗೆ ದಾಖಲಾಗಿದ್ದರೆ, ಕಳೆದೊಂದು ವಾರದಿಂದ 66.1 ಮಿ.ಮೀ. ಮಳೆಯಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಮಂಡ್ಯ ಜಿಲ್ಲೆಯ ಏಳು ತಾಲೂಕುಗಳ ಪೈಕಿ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. 24 ಗಂಟೆಗಳಲ್ಲಿ ಶ್ರೀರಂಗಪಟ್ಟಣ ತಾಲೂಕಿನಾದ್ಯಂತ 72.9 ಮಿ.ಮೀ. ಮಳೆಯಾಗಿದ್ದರೆ, ಕಳೆದೊಂದು ವಾರದಿಂದ 128.8 ಮಿ.ಮೀ. ಮಳೆಯಾಗಿರುವ ಬಗ್ಗೆ ದಾಖಲಾಗಿದೆ. ನಾಗಮಂಗಲ ತಾಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದ್ದು, 24 ಗಂಟೆಗಳಲ್ಲಿ 5.1 ಮಿ.ಮೀ. ಮಳೆಯಾಗಿದ್ದರೆ, ಕಳೆದೊಂದು ವಾರದಿಂದ 34 ಮಿ.ಮೀ.ನಷ್ಟು ಮಳೆಯಾಗಿದೆ.
ಸೋಮವಾರ ರಾತ್ರಿ ಜಿಲ್ಲೆಯ ಎಲ್ಲೆಡೆ ವಾಡಿಕೆಗಿಂತಲೂ ಅಧಿಕ ಮಳೆಯಾಗಿದ್ದರೆ ನಾಗಮಂಗಲ ತಾಲೂಕಿನಲ್ಲಿ ಮಾತ್ರ 6.6 ಮಿ.ಮೀ. ವಾಡಿಕೆ ಮಳೆಗೆ 5.1 ಮಿ.ಮೀ.ನಷ್ಟು ಮಳೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆ 46.6 ಮಿ.ಮೀ. ಮಳೆಯಾಗಬೇಕಿದ್ದರೂ ಕೇವಲ 7.5 ಮಿ.ಮೀ. ಮಳೆಯಾಆಗಿ 83.9 ಮಿ.ಮೀ. ಕೊರತೆ ಎದುರಾಗಿತ್ತು. ಕೆ.ಆರ್.ಪೇಟೆ ತಾಲೂಕಿನಲ್ಲಿ 9.2 ಮಿ.ಮೀ., ಮದ್ದೂರು-2.9 ಮಿ.ಮೀ., ಮಳವಳ್ಳಿ-7.3 ಮಿ.ಮೀ., ಮಂಡ್ಯ-7.4 ಮಿ.ಮೀ., ನಾಗಮಂಗಲ-8.9 ಮಿ.ಮೀ., ಪಾಂಡವಪುರ-6.8 ಮಿ.ಮೀ., ಶ್ರೀರಂಗಪಟ್ಟಣ-8.8 ಮಿ.ಮೀ. ಮಳೆಯಾಗಿತ್ತು.
ಮೇ ತಿಂಗಳ ಮೊದಲ ವಾರದಲ್ಲಿ ಮಳೆಯಾಗಲಿಲ್ಲ. ಮೇ 7 ರಿಂದ 14ರವರೆಗೆ ಜಿಲ್ಲೆಯೊಳಗೆ ವಾಡಿಕೆ ಮಳೆ 20.2 ಮಿ.ಮೀ.ಗೆ ಬದಲಾಗಿ 66.1 ಮಿ.ಮೀ.ನಷ್ಟು ಮಳೆಯಾಗಿದೆ. ರಣಬಿಸಿಲು, ಉಷ್ಣಹವೆಯಿಂದ ತತ್ತರಿಸಿ ಹೋಗಿದ್ದ ಜನರಿಗೆ ತಂಪನೆಯ ಹಿತಾನುಭವವನ್ನು ನೀಡಿದೆ. ರೈತರು ಮುಂಗಾರು ಕೃಷಿ ಚಟುವಟಿಕೆಗೆ ಸಿದ್ಧತೆಯನ್ನು ಆರಂಭಿಸುವುದಕ್ಕೆ ಅನುವು ಮಾಡಿಕೊಟ್ಟಿದೆ.
ಕಳೆದ ವರ್ಷ ಮತ್ತು ಈ ಬಾರಿ ಪೂರ್ವ ಮುಂಗಾರು ನಿರೀಕ್ಷೆಯಂತೆ ಆಗಮನವಾಗಲಿಲ್ಲ. ಇದರಿಂದ ರೈತರು ಬೇಸಿಗೆ ಬೆಳೆ ಬೆಳೆಯುವುದಕ್ಕೆ ಸಾಧ್ಯವಾಗಲೇ ಇಲ್ಲ. ಈ ಬಾರಿಯ ಬೇಸಿಗೆಯಂತೂ ತೀವ್ರ ಉಷ್ಣತೆಯಿಂದ ಕೂಡಿತ್ತು. ರಣಬಿಸಿಲಿಗೆ ತೆಂಗು, ಅಡಿಕೆ ಬೆಳೆಗಳು ನಲುಗಿಹೋದವು. ರೈತರು ಬೆಳೆದು ನಿಂತ ಬೆಳೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಕೆರೆ-ಕಟ್ಟೆಗಳೆಲ್ಲವೂ ಒಣಗಿ ನೀರಿಗೆ ಎಲ್ಲೆಡೆ ಹಾಹಾಕಾರ ಸೃಷ್ಟಿಯಾಗಿತ್ತು.
ಮೇ ತಿಂಗಳ ಎರಡನೇ ವಾರದಿಂದ ಆರಂಭಗೊಂಡಿರುವ ಪೂರ್ವ ಮುಂಗಾರು ರೈತರಿಗೆ ಕೊಂಚ ಸಮಾಧಾನವನ್ನು ತಂದಿದೆ. ಮಳೆಯಿಂದ ಬರಡಾಗಿದ್ದ ಭೂಮಿ ಈಗ ಸ್ವಲ್ಪ ಮಟ್ಟಿಗೆ ತಂಪಾಗಿದೆ. ವರುಣನ ಕೃಪೆಗಾಗಿ ಜಿಲ್ಲೆಯ ಹಲವಾರು ಹಳ್ಳಿಗಳ ಜನರು ವಿಭಿನ್ನ ರೀತಿಯ ಆಚರಣೆ, ಪೂಜೆ ಪುನಸ್ಕಾರ ಮಾಡಿ ವರುಣದೇವನಿಗೆ ಪ್ರಾರ್ಥಿಸಿದ್ದರು. ಮಳೆಯ ವಾತಾವರಣ ಹೀಗೆಯೇ ಮುಂದುವರೆಯಲಿ ಎನ್ನುವುದು ರೈತರ ಆಶಯವೂ ಆಗಿದೆ.












Click it and Unblock the Notifications