ಚೈತ್ರಾ ಕುಂದಾಪುರ ಪ್ರಕರಣವನ್ನು ನನ್ನ ಗಮನಕ್ಕೆ ತಂದಿದ್ದೇ ಚಕ್ರವರ್ತಿ ಸೂಲಿಬೆಲೆ- ಸಿ.ಟಿ ರವಿ
ಚಿಕ್ಕಮಗಳೂರು, ಸೆಪ್ಟೆಂಬರ್ 19: ನನಗೆ ಚೈತ್ರಾ ಕುಂದಾಪುರ ಪ್ರಕರಣ ಈವರೆಗೂ ಗೊತ್ತಿರಲಿಲ್ಲ, ಈ ವಿಚಾರ ನನ್ನ ಗಮನಕ್ಕೆ ತಂದಿದ್ದು ಚಕ್ರವರ್ತಿ ಸೂಲಿಬೆಲೆ ಎಂದು ಮಾಜಿ ಶಾಸಕ ಸಿ.ಟಿ.ರವಿ ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು , ಚೈತ್ರಾ ಕುಂದಾಪುರ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಮೋಸ ಮಾಡಿದ್ದಾರೆಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದರು. ಆ ಸಮಯದಲ್ಲಿ ನಮ್ಮ ಪಕ್ಷದಲ್ಲಿ ಆ ರೀತಿಯ ಪದ್ಧತಿ ಇಲ್ಲ ಎಂದು ಹೇಳಿದ್ದೆ. ಹಣಕ್ಕಾಗಿ ಟಿಕೆಟ್ ಮಾರಿಕೊಳ್ಳುವ ಪದ್ಧತಿ ನಮ್ಮಲ್ಲಿ ಇಲ್ಲ.ಹಣಕ್ಕಾಗಿ ಪಕ್ಷದಲ್ಲಿ ಟಿಕೆಟ್ ಕೊಡುವುದಿಲ್ಲ.ಯಾರೇ ಇದ್ದರೂ ಪ್ರಕರಣ ಹೊರಗೆ ಬರಲಿ ಎಂದರು.

ಒಂದು ಪ್ರಕರಣವನ್ನು ಮುಚ್ಚಿಟ್ಟರೆ ಇಂತಹ ಹಲವು ಪ್ರಕರಣಗಳು ಮತ್ತೆ ಆಗುತ್ತದೆ. ಹೀಗೆ ಮೋಸ ಮಾಡಿ ಟಿಕೆಟ್ ದಕ್ಕಿಸಿಕೊಂಡರೆ ಮತ್ತೆ ಹತ್ತು ಜನರಿಗೆ ಮೋಸ ಮಾಡುವ ಸ್ವಭಾವ ಬರುತ್ತದೆ.ಇಂತಹ ಪ್ರಕರಣ ಹೊರಗೆ ಬಂದರೆ ಉಳಿದವರಿಗೆ ಪಾಠ ಆಗುತ್ತದೆ ಎಂದು ಹೇಳಿದರು.
ಇನ್ನು ಈ ಹಿಂದೆ ಈ ಪ್ರಕರಣದ ಬಗ್ಗೆ ಮಾತನಾಡಿದ್ದ ಸಿ.ಟಿ ರವಿ, ಬಿಜೆಪಿಯಲ್ಲಿ ಹಣವೇ ಪ್ರಧಾನವಲ್ಲ. ಹಾಗೊಂದು ವೇಳೆ ಆಗಿದ್ದಲ್ಲಿ ಬೈಂದೂರಿನಲ್ಲಿ ಟಿಕೆಟ್ ಬಡ ಕಾರ್ಯಕರ್ತನಿಗೆ ಸಿಗುತ್ತಿರಲಿಲ್ಲ.ಸುಳ್ಯದಲ್ಲಿ ಬಡ ಮಹಿಳೆ ಭಾಗೀರಥಿ ಮುರುಳ್ಯ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹರು ಮಂತ್ರಿಗಳು ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇಲ್ಲಿ ಗೋವಿಂದ ಬಾಬು ಪೂಜಾರಿಯನ್ನು ಮೋಸ ಮಾಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಂಥ ಬುದ್ಧಿವಂತರ ಜಿಲ್ಲೆಯ ಇವರೇ ಮೋಸ ಹೋಗಿದ್ದಾರೆ. ಅವರು ನೇರವಾಗಿ ಯಾರಿಗೆ ಫೋನ್ ಮಾಡಿದ್ದರೂ ಬಿಜೆಪಿ ನಾಯಕರು ಫೋನ್‌ಗೆ ಸಿಗುತ್ತಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೇ ಅವರೊಂದಿಗೆ ತುಳುವಲ್ಲೇ ಮಾತನಾಡುತ್ತಿದ್ದರು. ನಳಿನ್, ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ನೇರವಾಗಿ ಫೋನ್ ಮಾಡಿ ಮಾತನಾಡುವ ಅವಕಾಶ ಗೋವಿಂದ ಬಾಬು ಪೂಜಾರಿಗಿತ್ತು ಎಂದರು.

ಈ ಪ್ರಕರಣದ ಬಗ್ಗೆ ತನಿಖೆಯಾಗಿ ಸತ್ಯ ಬಹಿರಂಗವಾಗಬೇಕು.ಸಪ್ರಕರಣದ ಹಿಂದೆ ಯಾರೇ ಇದ್ದರೂ ಸೂಕ್ತ ತನಿಖೆ ನಡೆದು ಕಾನೂನು ಕ್ರಮವಾಗಲಿ.ಯಾರದ್ದೋ ಹೆಸರು ಕೇಳಿ ಬರುತ್ತಿದೆ ಎನ್ನುವುದು ಬೇರೆ.ಈ ಪ್ರಕರಣ ಮೋಸ ಹೋದವರಿಗೂ ಪಾಠವಾಗಲಿ ಎಂದು ಸಿ.ಟಿ ರವಿ ಹೇಳಿದರು.












Click it and Unblock the Notifications